ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ ಯತ್ನ ತಪ್ಪಿಸಲು ಸಿಂಘು ಗಡಿಯಲ್ಲಿ ರೈತರಿಗೆ ಆಪ್ತ ಸಮಾಲೋಚನೆ

Last Updated 9 ಜನವರಿ 2021, 11:59 IST
ಅಕ್ಷರ ಗಾತ್ರ

ನವದೆಹಲಿ: ಹೊಸ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ 40 ದಿನಗಳಿಂದ ರೈತರು ದೆಹಲಿ ಗಡಿಗಳಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಭೀಕರ ಚಳಿ, ಮಳೆ ನಡುವೆಯೂ ರೈತರು ಜಗ್ಗದೆ ಕುಳಿತಿದ್ದಾರೆ. ಈ ಮಧ್ಯೆ, ಕೆಲವರು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡ ಬಗ್ಗೆಯೂ ವರದಿಯಾಗಿದೆ. ಹಾಗಾಗಿ, ಮಾನಸಿಕವಾಗಿ ಕುಂದಿರುವ ರೈತರಿಗೆ ಧೈರ್ಯ ತುಂಬಲು ಅಮೆರಿಕ ಮೂಲದ ಎನ್‌ಜಿಓವೊಂದು ರೈತರಿಗಾಗಿ ಕೌನ್ಸೆಲಿಂಗ್ ಶಿಬಿರ ನಡೆಸುತ್ತಿದೆ.

ನವೆಂಬರ್ 26 ರಿಂದ ದೆಹಲಿಯ ಸಿಂಘು ಗಡಿ ಸೇರಿ ಎರಡು ಕಡೆ ಅಪಾರ ಪ್ರಮಾಣದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಚಳಿ, ಮಳೆಯಲ್ಲಿ ದೇಹ ದಣಿಯುತ್ತಿದೆ. ಒಂದೇ ಜಾಗದಲ್ಲಿ ಕುಳಿತು ರೈತರು ಚಟುವಟಿಕೆಯಿಂದ ದೂರವಿದ್ದಾರೆ. ಜೊತೆಗೆ, ಸರ್ಕಾರದಿಂದ ತಮ್ಮ ಬೇಡಿಕೆಗೆ ಸ್ಪಂದನೆ ನಿಧಾನವಾಗುತ್ತಿದೆ ಎಂಬ ನೋವಲ್ಲಿ ಮಾನಸಿಕವಾಗಿಯೂ ಕುಂದಿದ್ದಾರೆ.

ಇಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿರುವ ಎನ್‌ಜಿಒಗಳ ಪ್ರಕಾರ, ಈ ರೈತರು ಧೈರ್ಯಶಾಲಿಗಳಾಗಿದ್ದಾರೆ, ಆದರೆ, ಕೆಲವರು ದುರ್ಬಲರಾಗಿದ್ದಾರೆ, ಇದಕ್ಕೆ ತೀವ್ರ ಹವಾಮಾನದ ಹೊಡೆತ ಅಥವಾ ಸರ್ಕಾರದಿಂದ ಸ್ಪಂದನೆ ನಿಧಾನವಾಗುತ್ತಿರುವುದೂ ಇರಬಹುದು. ಹೀಗಾಗಿ, ಕೆಲವೊಮ್ಮೆ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಬರುತ್ತಿದ್ದಾರೆ.

ಹಾಗಾಗಿ, ಅವರ ಮಾನಸಿಕ ಒತ್ತಡ ತಗ್ಗಿಸುವ ದೃಷ್ಟಿಯಿಂದ ಅಮೆರಿಕ ಮೂಲಕ ಸರ್ಕಾರೇತರ ಸಂಸ್ಥೆ ಯುನೈಟೇಡ್ ಸಿಖ್ಸ್, ಹರಿಯಾಣ ಬಳಿಯ ಸಿಂಘು ಗಡಿಯಲ್ಲಿ ರೈತರಿಗೆ ಆಪ್ತ ಸಮಾಲೋಚನಾ ಶಿಬಿರವನ್ನು ನಡೆಸುತ್ತಿದೆ.

"ಈ ಬೃಹತ್ ಪ್ರತಿಭಟನೆ ವೇಳೆ ಹಲವು ರೈತರು ಸಾವನ್ನಪ್ಪಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡು ಜೀವ ಬಿಟ್ಟಿದ್ದಾರೆ. ಅವರು ತಮ್ಮ ನಿರ್ಣಯದಲ್ಲಿ ಗಟ್ಟಿಯಾಗಿದ್ದರೂ ಚಳಿ, ಮಳೆಯಲ್ಲಿ ದೇಹ ಜರ್ಜರಿತವಾಗಿದೆ. ತಮ್ಮ ಹೊಲಗಳಿಗೆ ತೆರಳದೆ ಇಲ್ಲೇ ಕುಳಿತಿರುವ ರೈತರ ಮನಸ್ಥಿತಿ ದುರ್ಬಲವಾಗಿದೆ," ಎಂದು ಮನಶ್ಶಾಸ್ತ್ರಜ್ಞೆ ಸಾನ್ಯ ಕಟಾರಿಯಾ ಹೇಳಿದ್ದಾರೆ.

ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ಮೂಲಕ ಮನಃಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿರುವ ಸಾನ್ಯ ಕಟಾರಿಯಾ, ಯುನೈಟೆಡ್ ಸಿಖ್ಸ್ ಸಂಸ್ಥೆ ಮೂಲಕ ರೈತರಿಗೆ ಆಪ್ತ ಸಮಾಲೋಚನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT