ಶನಿವಾರ, ಸೆಪ್ಟೆಂಬರ್ 18, 2021
22 °C

ಛತ್ತೀಸಗಡ: ಕೋವಿಡ್ ಮಾರ್ಗಸೂಚಿ ಅನುಸಾರ 10, 12ನೇ ತರಗತಿ ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಯ್‌ಪುರ: ಛತ್ತೀಸಗಡದಲ್ಲಿ ಸೋಮವಾರ ಕೋವಿಡ್ -19 ಮಾರ್ಗಸೂಚಿ ಅನುಸಾರ 10 ಮತ್ತು 12ನೇ ತರಗತಿಯ ಶಾಲೆಗಳು ಪುನರಾರಂಭಗೊಂಡವು.

ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ದಿನಕ್ಕೆ ಶೇ 50ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು, ನಗರ ಪ್ರದೇಶಗಳಲ್ಲಿ ಕಾರ್ಪೋರೇಟರ್‌ಗಳು ಹಾಗೂ ಈ ಶಾಲೆಗಳ ಪೋಷಕರ ಸಮಿತಿಯ ಶಿಫಾರಸು ಪಡೆಯುವುದು ಸೇರಿ ಕೆಲವು ಷರತ್ತುಗಳಿಗೆ ಒಳಪಟ್ಟು 1 ರಿಂದ 5 ಮತ್ತು 8ನೇ ತರಗತಿ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರವು ಅನುಮತಿ ನೀಡಿದೆ.

ರಾಯಪುರದಲ್ಲಿನ ಕೆಲವು ಶಾಲೆಗಳಲ್ಲಿ 12ನೇ ತರಗತಿ ಮಾತ್ರ ಸೋಮವಾರದಿಂದ ಪುನರಾರಂಭಗೊಂಡಿದೆ. ಮಂಗಳವಾರದಿಂದ ಹತ್ತನೇ ತರಗತಿಯ ಬೋಧನೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಛತ್ತೀಸಗಡ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ರಾಜೀವ್ ಗುಪ್ತಾ ಹೇಳಿದರು.

ಉತ್ತರಪ್ರದೇಶದಲ್ಲಿ ಇದೇ 16ಕ್ಕೆ 9ರಿಂದ 12ನೇ ತರಗತಿ ಪುನರಾರಂಭ
ಲಖನೌ ವರದಿ:
ಉತ್ತರಪ್ರದೇಶದಲ್ಲಿ 9ರಿಂದ 12ನೇ ತರಗತಿಯ ಶಾಲೆಗಳನ್ನು ಶೇ 50ರ ಹಾಜರಾತಿಯೊಂದಿಗೆ ಇದೇ 16ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರವು ಸೋಮವಾರ ಆದೇಶ ಹೊರಡಿಸಿದೆ.

ಅಲ್ಲದೇ, ಸೆಪ್ಟೆಂಬರ್ 1ರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ರಾಜ್ಯ  ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

‘ಪ್ರೌಢ (9 ಮತ್ತು 10 ನೇ ತರಗತಿ) ಮತ್ತು ಇಂಟರ್‌ಮೀಡಿಯೆಟ್‌ (11 ಮತ್ತು 12 ನೇ ತರಗತಿ) ಶಾಲೆಗಳ ವಿದ್ಯಾರ್ಥಿಗಳು ಇದೇ 15 ರಂದು 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ. ಕೋವಿಡ್ 19 ಮಾರ್ಗಸೂಚಿ ಅನುಸಾರ ಇದೇ 16 ರಂದು ಶಾಲೆಗಳಲ್ಲಿ ಅರ್ಧ ಸಾಮರ್ಥ್ಯದ ಹಾಜರಾತಿಯೊಂದಿಗೆ ಬೋಧನೆ-ಕಲಿಕೆ ಆರಂಭವಾಗಲಿದೆ’ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಮಾಹಿತಿ) ನವನೀತ್ ಸೆಹಗಲ್ ಪಿಟಿಐಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿಗಳ ಆರಂಭಕ್ಕೆ ಸಿದ್ಧತೆಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

10 ಮತ್ತು 12ನೇ ತರಗತಿಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಪದವಿಪೂರ್ವ ತರಗತಿಗಳಿಗೆ ಇದೇ 5ರಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಎಲ್ಲಾ ತರಗತಿಯ ಶಾಲೆಗಳು ಪುನರಾರಂಭ
ಚಂಡೀಗಡ ವರದಿ:
ಪಂಜಾಬ್‌ ರಾಜ್ಯದಾದ್ಯಂತ ಸೋಮವಾರ ಎಲ್ಲಾ ತರಗತಿಗಳ ಶಾಲೆಗಳು ಪುನರಾರಂಭಗೊಂಡಿವೆ. ಪೂರ್ವ ಪ್ರಾಥಮಿಕ ತರಗತಿಗಳಿಗೆ ಕೆಲವು ತಿಂಗಳ ಅಂತರದ ನಂತರ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಹೆಚ್ಚಿಲ್ಲದಿದ್ದರೂ, ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿರುವುದು ವರದಿಯಾಗಿದೆ.

ಕೋವಿಡ್‌ 19 ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಗೊಳಿಸಿದ್ದರಿಂದ ಇದೇ 2ರಿಂದ ಎಲ್ಲಾ ತರಗತಿಗಳಿಗೆ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ಶನಿವಾರ ಅನುಮತಿ ನೀಡಿದೆ.

ಕೋವಿಡ್‌ 19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೂ, ಪೋಷಕರು ತಮ್ಮ ಮಕ್ಕಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಾಲೆಗಳಲ್ಲಿ ಹಾಜರಾಗಲು ಲಿಖಿತ ಒಪ್ಪಿಗೆ ನೀಡಬೇಕಾಗಿದೆ. ಶಾಲೆಗಳಲ್ಲಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರ್ಚುವಲ್ ತರಗತಿಗಳು ಮುಂದುವರಿಯಲಿವೆ.

ಸರ್ಕಾರವು ಈಗಾಗಲೇ ಜುಲೈ 26 ರಿಂದಲೇ 10 ರಿಂದ 12 ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಿತ್ತು.

‘15ರ ನಂತರವೇ ಶಾಲೆಗಳ ಪುನರಾರಂಭದ ನಿರ್ಧಾರ’
ಪುದುಚೇರಿ ವರದಿ:
ಆಗಸ್ಟ್ 15ರ ನಂತರ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಮತ್ತು ಮುಖ್ಯಮಂತ್ರಿ ಎನ್. ರಂಗಸಾಮಿಯ ಅವರೊಂದಿಗೆ ಸಮಾಲೋಚಿಸಿದ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ತೆರೆಯುವ ಬಗ್ಗೆ ಪುದುಚೇರಿ ಸರ್ಕಾರ ನಿರ್ಧರಿಸಲಿದೆ ಎಂದು ಸಚಿವ ಎ.ನಮಸ್ಸಿವಾಯಂ ಸೋಮವಾರ ಹೇಳಿದ್ದಾರೆ.

ಕೋವಿಡ್ -19 ಮತ್ತು ಅದರ ಮೂರನೇ ಅಲೆಯ ಬಗ್ಗೆ ಚರ್ಚಿಸಲು ಶೈಕ್ಷಣಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಸದ್ಯಕ್ಕೆ ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯದಿರಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು