ನವದೆಹಲಿ: ದೇಶದಾದ್ಯಂತ ಮಂಗಳವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ 96,982 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 446 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇದರೊಂದಿಗೆ ಈವರೆಗೆ ಸೋಂಕು ತಗುಲಿದವರ ಸಂಖ್ಯೆ 1.26 ಕೋಟಿ ದಾಟಿದೆ. ದೇಶದಲ್ಲಿ ಇದೇ ಮೊದಲ ಬಾರಿ ದಿನವೊಂದರ ಹೊಸ ಪ್ರಕರಣಗಳ ಸಂಖ್ಯೆ ಸೋಮವಾರ ಬೆಳಿಗ್ಗೆ 1 ಲಕ್ಷ ದಾಟಿತ್ತು.
ಈವರೆಗೆ ಸೋಂಕಿನಿಂದಾಗಿ 1,65,547 ಮಂದಿ ಮೃತಪಟ್ಟಿದ್ದಾರೆ. 1.17 ಕೋಟಿಗೂ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ. ಕಳೆದ 27 ದಿನಗಳಿಂದ ನಿರಂತರವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ದೇಶದಲ್ಲಿ 7,88,223 ಸಕ್ರಿಯ ಪ್ರಕರಣಗಳಿವೆ.
ಈ ಮಧ್ಯೆ, ದೇಶದಾದ್ಯಂತ ಕೋವಿಡ್ ಲಸಿಕೆ ನೀಡಿಕೆ ಸಂಖ್ಯೆ 8 ಕೋಟಿ ದಾಟಿದೆ ಎಂದೂ ಸಚಿವಾಲಯ ತಿಳಿಸಿದೆ.