ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಟ್ಯಾಂಕರ್‌ಗಳೊಂದಿಗೆ ವಿಶಾಖಪಟ್ಟಣಕ್ಕೆ ತೆರಳಿದ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’

Last Updated 20 ಏಪ್ರಿಲ್ 2021, 7:19 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ರೈಲ್ವೆಯ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲು, ಏಳು ಖಾಲಿ ಟ್ಯಾಂಕರ್‌ಗಳನ್ನು ‘ಹೊತ್ತುಕೊಂಡು’ ನವೀಮುಂಬೈಯ ಕಲಂಬೋಲಿ ಗೂಡ್ಸ್‌ ಯಾರ್ಡ್‌ನಿಂದ ಸೋಮವಾರ ವಿಶಾಖಪಟ್ಟಣಕ್ಕೆ ಪ್ರಯಾಣ ಬೆಳೆಸಿತು. ಅಲ್ಲಿ ಈ ಟ್ಯಾಂಕರ್‌ಗಳಲ್ಲಿ ವೈದ್ಯಕೀಯ ಆಮ್ಲಜನಕ ತುಂಬಿಸಿ ಮಹಾರಾಷ್ಟ್ರಕ್ಕೆ ರವಾನಿಸಲಾಗುವುದು.

ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಸೇವಯೆನ್ನು ರೈಲ್ವೆ ಸಚಿವ ಪೀಯುಷ್‌ ಗೋಯಲ್‌ ಅವರು ಭಾನುವಾರ ಪ್ರಕಟಿಸಿದ್ದರು. ಇದಕ್ಕಾಗಿ ಕಲಂಬೋಲಿಯಲ್ಲಿ ತ್ವರಿತಗತಿಯಲ್ಲಿ ವಿಶೇಷ ರ‍್ಯಾಂಪ್‌ ಸಿದ್ಧಪಡಿಸಲಾಗಿದ್ದು, ಟ್ರಕ್‌ಗಳು ರೈಲಿನಲ್ಲಿ ಬಂದಿರುವ ಆಕ್ಸಿಜನ್‌ ಹೇರಿಕೊಂಡು ಹೋಗಲು ಇದರಿಂದ ಸುಲಭವಾಗಲಿದೆ.

ಇದಕ್ಕಾಗಿ ಸೌಕರ್ಯಗಳ ವೆಚ್ಚವನ್ನು ಭಾರತೀಯ ಸೇನೆ ಭರಿಸಿದ್ದು, ರೈಲ್ವೆ ಇಲಾಖೆ ನಿರ್ವಹಣೆ ಮಾಡಲಿದೆ. ‘ಮೊದಲ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರಾತ್ರಿ 8.05ಕ್ಕೆ ಕಲಂಬೋಲಿಯಿಂದ ಹೊರಟಿದೆ. ವಸೈ ರೋಡ್‌, ಜಲಗಾಂವ್‌, ನಾಗಪುರ, ರಾಯಪುರ ಜಂಕ್ಷನ್‌ ಮೂಲಕ ಈ ರೈಲು ವಿಶಾಖಪಟ್ಟಣ ತಲುಪಲಿದೆ. ಅಲ್ಲಿ ವೈದ್ಯಕೀಯ ಉದ್ದೇಶದ ಆಮ್ಲಜನಕವನ್ನು ಲೋಡ್‌ ಮಾಡಲಾಗುವುದು’ ಎಂದು ರೈಲ್ವೆ ಹೇಳಿಕೆ ತಿಳಿಸಿದೆ. ಕಲಂಬೋಲಿ ಯಾರ್ಡ್‌ ಮುಂಬೈ ಮಹಾನಗರಿಯಿಂದ 40 ಕಿ.ಮೀ. ದೂರದಲ್ಲಿದೆ.

ರೈಲ್ವೆ ಜಾಲದಿಂದ ತಮಗೆ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ಅನ್ನು ಟ್ಯಾಂಕರ್‌ ಮೂಲಕ ಒದಗಿಸಲು ಸಾಧ್ಯವಿದೆಯೇ ಎಂದು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ರೈಲ್ವೆಯನ್ನು ಸಂಪರ್ಕಿಸಿದ್ದವು. ಈ ಕೋರಿಕೆ ತಾಂತ್ರಿಕವಾಗಿ ಕಾರ್ಯಸಾಧುವೇ ಎಂದು ರೈಲ್ವೆ ಪರಿಶೀಲಿಸಿತ್ತು. ಸಪಾಟಾದ ವ್ಯಾಗನ್‌ಗಳ ಮೇಲೆ ರಸ್ತೆ ಮೇಲೆ ಸಾಗುವ ಟ್ಯಾಂಕರ್‌ಗಳನ್ನು ಜೋಡಿಸಿ (ರೋಲ್ಗ್ ಆನ್‌ ರೋಲ್‌ ಆಫ್‌ ಸೇವೆ) ಇದನ್ನು ಪೂರೈಸಲು ರೈಲ್ವೆ ತೀರ್ಮಾನಿಸಿತು.

‘ಈಗ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲಿನ ಮೊದಲ ಪ್ರಯಾಣ ಸೋಮವಾರ ರಾತ್ರಿ ಆರಂಭವಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ಕಾರ್ಯನಿರ್ವಹಣೆ ಮಾಡಲಿದೆ ಎಂಬ ವಿಶ್ವಾಸವಿದೆ. ಎಲ್ಲಿ ಬೇಡಿಕೆ ಅಧಿಕವಾಗಿದೆಯೊ ಅಲ್ಲಿ ಸರಬರಾಜು ಮಾಡುತ್ತೇವೆ. ಈ ವಿಶೇಷ ರೈಲುಗಳ ತ್ವರಿತವಾಗಿ ಸಾಗಲು ಸಾಧ್ಯವಾಗುವಂತೆ ಗ್ರೀನ್‌ ಕಾರಿಡಾರ್‌ ರೂಪಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವೈದ್ಯಕೀಯ ಆಮ್ಲಜನಕಗಳ ಸಾಗಣೆ ಸರಾಗವಾಗಿ ಸಾಧ್ಯವಾಗಲು, ಏಪ್ರಿಲ್‌ 17ರಂದು ರೈಲ್ವೆ ಮಂಡಳಿ ಮತ್ತು ರಾಜ್ಯಗಳ ಸಾರಿಗೆ ಇಲಾಖೆ ಆಯುಕ್ತರ ಸಭೆಯನ್ನು ನಡೆಸಲಾಗಿತ್ತು. ಏಪ್ರಿಲ್‌ 18ರಂದು ಮುಂಬೈಯ ವೆಸ್ಟರ್ನ್‌ ರೈಲ್ವೆಯ ಬೊಯಿಸರ್‌ ಬಳಿ ಖಾಲಿಯಿರುವ ವ್ಯಾಗನ್‌ ಮೇಲೆ ಟ್ಯಾಂಕರ್‌ ಕೂರಿಸಿ ಅಗತ್ಯವಿರುವ ಅಳತೆ ಎಷ್ಟಾಗುತ್ತದೆ ಎಂಬುದನ್ನು ಲೆಕ್ಕ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT