ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಎರಡನೇ ಅಲೆಗೆ ಭಾರತ ಸಿದ್ಧವಾಗಿರಲಿಲ್ಲ: ನಿರ್ಮಲಾ ಸೀತಾರಾಮನ್

Last Updated 30 ಮೇ 2021, 1:34 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್ ಎರಡನೆಯ ಅಲೆ ಅನಿರೀಕ್ಷಿತವಾಗಿದ್ದು ಅದನ್ನು ಎದುರಿಸಲು ನಾವು ಸಿದ್ಧರಾಗಿರಲಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಜ್ಞರು ಹೇಳಿದ್ದಾರೆ. ದೇಶವು ಕೋವಿಡ್ ಪ್ರಕರಣಗಳಿಂದ ಚೇತರಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

ಐಐಎಂಬಿ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ತಜ್ಞರ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು ಕೋವಿಡ್ ಎರಡನೇ ಅಲೆ ಎದುರಿಸಲು ಸಿದ್ಧರಾಗಿಲ್ಲದೇ ಇದ್ದುದನ್ನು ಒಪ್ಪಿಕೊಂಡಿದ್ದಾರೆ.

ಚೇತರಿಕೆ, ಪುನಶ್ಚೇತನ ಮತ್ತು ಎರಡನೇ ಅಲೆಯ ಬಳಿಕ ಸೋಂಕು ತಡೆಯುವಿಕೆ ಸಮಾವೇಶದ ಧ್ಯೇಯವಾಗಿತ್ತು.

ಇಷ್ಟು ಬೇಗನೇ ಲಸಿಕೆ ಪಡೆಯಬೇಕಾಗಬಹುದು ಎಂಬುದನ್ನು ಭಾರತದಲ್ಲಿ ಯಾರೂ ಊಹಿಸಿರಲಿಲ್ಲ ಎಂದು ಸಿಎಂಸಿ ವೆಲ್ಲೋರ್‌ನ ಕ್ಲಿನಿಕಲ್ ವಿಜ್ಞಾನಿ ಪ್ರೊ.ಗಂಗಾದೀಪ್ ಹೇಳಿದ್ದಾರೆ.

ಲಸಿಕೆ ನೀಡಿಕೆ ಪ್ರಕ್ರಿಯೆ ವೇಗ ಪಡೆದುಕೊಳ್ಳಬೇಕು ಎಂಬುದು ಮನವರಿಕೆಯಾಗುವುದಕ್ಕೂ ಮೊದಲಿನ ಕೆಲವು ವಾರಗಳಲ್ಲಿ ಅದು ಬಹಳ ನಿಧಾನವಾಗಿ ಸಾಗಿತ್ತು. ಆದರೆ ಅದು ಸುಲಭವಲ್ಲ. ಯಾಕೆಂದರೆ ಆ ಮಟ್ಟಕ್ಕೆ ಪೂರೈಕೆ ಸರಪಳಿಯನ್ನೂ ನಿರ್ಮಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಲಸಿಕೆಯು ಕೋವಿಡ್ ಸೋಂಕಿನ ವಿರುದ್ಧ ರಕ್ಷಣೆ ಪಡೆಯಲು ಕಡಿಮೆ ವೆಚ್ಚದ ಮತ್ತು ಅತ್ಯಂತ ಸುರಕ್ಷಿತ ವಿಧಾನವಾಗಿದೆ ಎಂದು ‘ನಾರಾಯಣ ಹೆಲ್ತ್‌’ನ ಅಧ್ಯಕ್ಷ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

ಮಕ್ಕಳಿಗೆ ಸೋಂಕು ತಗುಲದಂತೆ ನಾವು ಮುನ್ನೆಚ್ಚರಿಕೆ ವಹಿಸಬೇಕು ಎಂದಿರುವ ಅವರು, ಕಂಟೈನ್‌ಮೆಂಟ್ ಪ್ರದೇಶಗಳಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಹೆಚ್ಚಿಸುವುದು ಮುಖ್ಯ ಎಂದಿದ್ದಾರೆ.

‘ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸಬೇಕೆಂದು ನಾವು ಪ್ರತಿಯೊಬ್ಬರೂ ಯೋಚಿಸುತ್ತಿದ್ದೇವೆ. ಆದರೆ ಆಸ್ಪತ್ರೆಗಳನ್ನು ನಿರ್ಮಿಸುವುದರಿಂದ ಪರಿಹಾರ ದೊರೆಯದು. ಯಾಕೆಂದರೆ ವೈದ್ಯರ ಕೊರತೆ ಇದೆ. ಕೋವಿಡ್ ಸೋಂಕಿತರಿಗೆ ಆರೋಗ್ಯ ಸೇವೆ ನೀಡಲು ನಾವು ಒದ್ದಾಡುತ್ತಿದ್ದೇವೆ. ಯಾಕೆಂದರೆ ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ತಂತ್ರಜ್ಞರ ಕೊರತೆ ಇದೆ’ ಎಂದು ಅವರು ಹೇಳಿದ್ದಾರೆ.

ವೈದ್ಯಕೀಯ ಮೂಲಸೌಕರ್ಯದ ಬಗ್ಗೆ 2021ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಬಜೆಟ್‌ನಲ್ಲಿ ಕೇವಲ ಬಡವರ ಬಗ್ಗೆ ಮಾತ್ರ ಗಮನಹರಿಸಲಾಗಿಲ್ಲ. ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಸಂಘಟಿತ ಮತ್ತು ಅಸಂಘಟಿತ ವಲಯದವರಿಗೆ ನೆರವಾಗುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಗಮನಹರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT