ಶುಕ್ರವಾರ, ಏಪ್ರಿಲ್ 23, 2021
31 °C
ಕೋವಿಡ್: ಮತ್ತೆ 469 ಜನರ ಸಾವು, 24 ಗಂಟೆಯಲ್ಲಿ ಗುರುವಾರ 11,13,966 ಮಾದರಿಗಳ ಪರೀಕ್ಷೆ

Covid-19 India Update| 81,466 ಹೊಸ ಪ್ರಕರಣ, ಆರು ತಿಂಗಳಲ್ಲೇ ಗರಿಷ್ಠ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 81,466 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದು, ಕಳೆದ ಆರು ತಿಂಗಳಲ್ಲಿ, ಒಂದು ದಿನದ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಸಂಖ್ಯೆಯ ಪ್ರಕರಣಗಳಾಗಿವೆ.

ಇದರೊಂದಿಗೆ ದೇಶದ ಕೋವಿಡ್‌ ಪ್ರಕರಣಗಳ ಸಂಖ್ಯೆ 1,23,03,131ಕ್ಕೆ ಏರಿದೆ. ಅಕ್ಟೋಬರ್‌ 2, 2020ರ ನಂತರ ಒಂದು ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಕಳೆದ 24 ಗಂಟೆಗಳಲ್ಲಿ ಮತ್ತೆ 469 ಸೋಂಕಿತರು ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 1,63,396ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸತತ 23ನೇ ದಿನ ಗರಿಷ್ಠ ಸಂಖ್ಯೆಯಲ್ಲಿ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6,14,696ಕ್ಕೆ ಏರಿದೆ. ಇದು, ಒಟ್ಟು ಪ್ರಕರಣಗಳ ಶೇ 5ರಷ್ಟು ಆಗಿದೆ. ಇದೇ ಅವಧಿಯಲ್ಲಿ ಚೇತರಿಕೆ ಪ್ರಮಾಣವು ಶೇ 93.67ಕ್ಕೆ ಕುಸಿದಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಐಸಿಎಂಆರ್‌ ಪ್ರಕಾರ, ಏಪ್ರಿಲ್ 1ರವರೆಗೂ ಒಟ್ಟು 24,59,12,587 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಗುರುವಾರ ಒಂದೇ ದಿನದಲ್ಲಿ 11,13,966 ಮಾದರಿಗಳ ಪರೀಕ್ಷೆ ನಡೆಸಲಾಗಿದೆ.

ಹೊಸದಾಗಿ ಸಂಭವಿಸಿದ ಸಾವಿನ ಪ್ರಕರಣಗಳಲ್ಲಿ ಮಹಾರಾಷ್ಟ್ರದಲ್ಲಿ 249, ಪಂಜಾಬ್‌ನಲ್ಲಿ 58, ಛತ್ತೀಸಗಡದಲ್ಲಿ 34, ತಮಿಳುನಾಡಿನಲ್ಲಿ 19, ಕರ್ನಾಟಕದಲ್ಲಿ 19 ಮತ್ತು ಕೇರಳದಲ್ಲಿ 9 ಮಂದಿ ಮೃತಪಟ್ಟಿದ್ದರೆ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಏಪ್ರಿಲ್ ಮಧ್ಯದ ವೇಳೆಗೆ ಏರಿಕೆ, ಮೇ ಅಂತ್ಯಕ್ಕೆ ಇಳಿಕೆ: ವಿಜ್ಞಾನಿಗಳು

ನವದೆಹಲಿ (ಪಿಟಿಐ): ಕೋವಿಡ್ ಎರಡನೇ ಅಲೆಯಲ್ಲಿ ದೇಶದಾದ್ಯಂತ ಸೋಂಕು ಪ್ರಕರಣಗಳು ಏಪ್ರಿಲ್ ಮಧ್ಯಭಾಗದಲ್ಲಿ ತಾರಕಕ್ಕೇರುವ ಅಂದಾಜಿದೆ. ಅಂತೆಯೇ, ಮೇ ಅಂತ್ಯದ ವೇಳೆಗೆ ತೀವ್ರವಾಗಿ ಇಳಿಮುಖವಾಗಬಹುದು ಎಂದು ಗಣಿತ ಮಾದರಿಯನ್ನು ಆಧರಿಸಿ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಕೋವಿಡ್ ಸೋಂಕಿನ ಮೊದಲ ಅಲೆಯಲ್ಲಿಯೂ ಗಣಿತ ಮಾದರಿ 'ಸೂತ್ರ' ಅನುಸರಿಸಿ ಅಂದಾಜು ಮಾಡಿದ್ದು, ಆಗಸ್ಟ್ ತಿಂಗಳಲ್ಲಿ ಇದ್ದುದಕ್ಕಿಂತ ಸೆಪ್ಟೆಂಬರ್ ತಿಂಗಳಲ್ಲಿ ಪ್ರಕರಣಗಳು ಗರಿಷ್ಠವಾಗಿರಲಿವೆ. ಫೆಬ್ರುವರಿ 2021ರ ವೇಳೆಗೆ ಪ್ರಕರಣಗಳ ಸಂಖ್ಯೆ ಕಡಿಮೆ ಇರಲಿವೆ ಎಂದು ತಿಳಿಸಲಾಗಿತ್ತು.

ವಿಜ್ಞಾನಿ, ಐಐಟಿ-ಕಾನ್ಪುರದ ಮಹೀಂದ್ರಾ ಅಗರವಾಲ್ ಅವರು, ‘ಸೋಂಕು ಪ್ರಕರಣಗಳ ಈಗಿನ ಸ್ಥಿತಿಯನ್ನು ಆಧರಿಸಿ ಗಣಿತ ಸೂತ್ರದ ಅನುಸಾರ ಅಂದಾಜು ಮಾಡಿದ್ದು, ಸದ್ಯದ ಸ್ಥಿತಿಯಲ್ಲಿ ಏಪ್ರಿಲ್‌ ಮಧ್ಯದ ವೇಳೆಗೆ ಗರಿಷ್ಠ ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ಇರಲಿವೆ’ ಎಂದು ತಿಳಿಸಿದ್ದಾರೆ.

‘ಏಪ್ರಿಲ್‌ 15–20ರ ಅವಧಿಯಲ್ಲಿ ಸೋಂಕು ಪ್ರಕರಣಗಳು ಗರಿಷ್ಠ ಪ್ರಮಾಣದಲ್ಲಿ ದಾಖಲಾಗುವ ಸಂಭವವಿದೆ. ಮೇ ಅಂತ್ಯದ ವೇಳೆಗೆ ಅದೇ ವೇಗದಲ್ಲಿ ಸೋಂಕು ಪ್ರಕರಣಗಳು ಇಳಿಮುಖವಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

‘ಆಗ ನಿತ್ಯ ದಾಖಲಾಗಬಹುದಾದ ಪ್ರಕರಣಗಳ ಸಂಖ್ಯೆ ಅಂದಾಜಿಸಲು ಆಗುತ್ತಿಲ್ಲ. ಸದ್ಯ, ನಿತ್ಯ ಸರಾಸರಿ 1 ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಇದು, ಹೆಚ್ಚೂ ಆಗಬಹುದು ಅಥವಾ ಕಡಿಮೆಯೂ ಆಗಬಹುದು. ಆದರೆ, ಸೋಂಕು ಗರಿಷ್ಟ ಮಟ್ಟದಲ್ಲಿರುವ ಅವಧಿ ಮಾತ್ರ ಏಪ್ರಿಲ್‌ 15–20 ಆಗಿರುತ್ತದೆ’ ಎಂದು ತಿಳಿಸಿದರು.

‘ಗರಿಷ್ಠ ಪ್ರಕರಣಗಳು ಮೊದಲು ಪಂಜಾಬ್‌ ಹಾಗೂ ನಂತರ ಮಹಾರಾಷ್ಟ್ರದಲ್ಲಿ ಕಾಣಿಸಿಕೊಳ್ಳಬಹುದು. ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಆದರೆ, ಗಂಭೀರ ಸ್ಥಿತಿ ಇರುವ ಪ್ರದೇಶಗಳು ಇವೇ ಆಗಿರುತ್ತವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ಗೌತಮ್ ಮೆನನ್‌ ಅವರೂ ಪ್ರತ್ಯೇಕವಾಗಿ ಅಂದಾಜು ಮಾಡಿದ್ದು, ಎರಡನೇ ಅಲೆಯಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಏಪ್ರಿಲ್‌ ಮಧ್ಯಭಾಗದಿಂದ ಮೇ ಮಧ್ಯಭಾಗದವರೆಗೂ ಇರುತ್ತವೆ ಎಂದು ಹೇಳಿದ್ದಾರೆ.

ಆದರೆ, ಮೆನನ್‌ ಅವರು,‘ಕೋವಿಡ್ ಪ್ರಕರಣಗಳ ಭವಿಷ್ಯದ ಈ ಅಂದಾಜುಗಳನ್ನು ಅಲ್ಪಾವಧಿಗೆ ಮಾತ್ರವೇ ನಂಬಬಹುದಾಗಿದೆ’ ಎಂದು ಅಭಿಪ್ರಾಯಪಟ್ಟಿದ್ಧಾರೆ.

ಕೋವಿಡ್ ಪ್ರಕರಣಗಳ ಏರಿಕೆ

ಯಾವಾಗ, ಎಷ್ಟು?

ಆಗಸ್ಟ್‌ 7 –20 ಲಕ್ಷ

ಆಗಸ್ಟ್ 23 – 30 ಲಕ್ಷ

ಸೆಪ್ಟೆಂಬರ್‌ 5 –40 ಲಕ್ಷ

ಸೆಪ್ಟೆಂಬರ್‌ 16 –50 ಲಕ್ಷ

ಸೆಪ್ಟೆಂಬರ್ 28 – 60 ಲಕ್ಷ

ಅಕ್ಟೋಬರ್ 11 – 70 ಲಕ್ಷ

ಅಕ್ಟೋಬರ್‌ 29 –80 ಲಕ್ಷ

ನವೆಂಬರ್‌ 20 – 90 ಲಕ್ಷ

ಡಿಸೆಂಬರ 19 – 1 ಕೋಟಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು