ಸೋಮವಾರ, ಜೂನ್ 14, 2021
28 °C

ಗ್ರಾಮಗಳಲ್ಲಿ ಹೆಚ್ಚಿದ ಕೋವಿಡ್‌: ಮನೆಮನೆಗೆ ತೆರಳಿ ಪರೀಕ್ಷೆ ನಡೆಸಲು ಮೋದಿ ಆದೇಶ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್‌–19ರ ಪರಿಸ್ಥಿತಿ ಮತ್ತು ಲಸಿಕಾ ಅಭಿಯಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಂದ ವಿವರವಾಗಿ ಮಾಹಿತಿ ಪಡೆದಿದ್ದಾರೆ. ಆ ಬಳಿಕ ಅಧಿಕಾರಿಗಳಿಗೆ ಹಲವು ಪ್ರಮುಖ ಸೂಚನೆಗಳನ್ನು ಮೋದಿ ನೀಡಿದ್ದಾರೆ.

'ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಕಂಟೈನ್‌ಮೆಂಟ್ ಜೋನ್‌ಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಅಧಿಕ ಪ್ರಕರಣಗಳು ಕಂಡುಬಂದಿರುವ ಸ್ಥಳಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಬೇಕಿದೆ' ಎಂದು ಮೋದಿ ತಿಳಿಸಿದ್ದಾರೆ.

'ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಪರೀಕ್ಷೆಗಳನ್ನು ನಡೆಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಂಪನ್ಮೂಲಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಪ್ರತ್ಯೇಕ ವಾಸ, ದೈಹಿಕ ಅಂತರ, ಮಾಸ್ಕ್‌ ಧರಿಸುವುದು ಮತ್ತು ಚಿಕಿತ್ಸೆ ಪಡೆಯುವುದರ ಬಗ್ಗೆ ಹಳ್ಳಿಗಳಲ್ಲಿ ತಿಳುವಳಿಕೆ ನೀಡಬೇಕು. ಸುಲಭ ಭಾಷೆಯಲ್ಲಿ ಕೋವಿಡ್‌ ಮಾರ್ಗಸೂಚಿಗಳು ಲಭ್ಯವಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದು' ಪ್ರಧಾನಿ ಆದೇಶಿಸಿದ್ದಾರೆ.

'ಗ್ರಾಮೀಣ ಪ್ರದೇಶಗಳಲ್ಲಿ ಆಮ್ಲಜನಕದ ಪೂರೈಕೆಯನ್ನು ಖಾತ್ರಿಪಡಿಸುವ ವಿತರಣಾ ಯೋಜನೆಯನ್ನು ರೂಪಿಸಬೇಕು. ಅಂತಹ ಸಲಕರಣೆಗಳ ಕಾರ್ಯಾಚರಣೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಾದ ತರಬೇತಿಯನ್ನು ನೀಡಬೇಕು. ವೈದ್ಯಕೀಯ ಸಾಧನಗಳ ಸುಗಮ ಕಾರ್ಯಾಚರಣೆಗೆ ವಿದ್ಯುತ್ ಸರಬರಾಜಿನ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು' ಎಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ.

ಲಸಿಕೆ ಲಭ್ಯತೆ ಮತ್ತು ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಸೂಚಿಸಿದ್ದಾರೆ.

ಪ್ರಧಾನಿಗೆ ಮಾಹಿತಿ ನೀಡಿದ ಅಧಿಕಾರಿಗಳು

ಮಾರ್ಚ್ ತಿಂಗಳ ಆರಂಭದಲ್ಲಿ ವಾರಕ್ಕೆ ಸುಮಾರು 50 ಲಕ್ಷ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಈಗ ವಾರಕ್ಕೆ ಸುಮಾರು 1.3 ಕೋಟಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಕ್ರಮೇಣ ಕಡಿಮೆಯಾಗುತ್ತಿರುವ ಕೋವಿಡ್‌ ಸೋಂಕಿತರ ಸಂಖ್ಯೆ ಮತ್ತು ಹೆಚ್ಚುತ್ತಿರುವ ಚೇತರಿಕೆ ದರದ ಬಗೆಗಿನ ಮಾಹಿತಿಯನ್ನು ಪ್ರಧಾನಿ ಮೋದಿ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ.

ಆರೋಗ್ಯ ಕಾರ್ಯಕರ್ತರು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಸತತ ಪ್ರಯತ್ನದ ಫಲವಾಗಿ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂಬ ಅಭಿಪ್ರಾಯಗಳೂ ಸಭೆಯಲ್ಲಿ ವ್ಯಕ್ತವಾಗಿವೆ.

ಇದೇ ವೇಳೆ ಕೋವಿಡ್ ಪರೀಕ್ಷೆ, ಆಮ್ಲಜನಕ ಲಭ್ಯತೆ, ಆರೋಗ್ಯ ಮೂಲಸೌಕರ್ಯ, ಲಸಿಕೆ ಅಭಿಯಾನದ ಮಾರ್ಗಸೂಚಿ ಮತ್ತು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪರಿಸ್ಥಿತಿಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು