ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ ಕೊನೆಗೆ ದಿನಕ್ಕೆ 1 ಕೋಟಿ ಲಸಿಕೆ: ಕೇಂದ್ರ ಸರ್ಕಾರ ಭರವಸೆ

Last Updated 1 ಜೂನ್ 2021, 22:45 IST
ಅಕ್ಷರ ಗಾತ್ರ

ನವದೆಹಲಿ : ಕೋವಿಡ್‌–19 ಲಸಿಕೆ ಸಮಸ್ಯೆಯುಜುಲೈ ಕೊನೆ ಅಥವಾ ಆಗಸ್ಟ್‌ ಆರಂಭದ ಹೊತ್ತಿಗೆ ಬಹುಪಾಲು ಬಗೆಹರಿಯಲಿದೆ. ದಿನಕ್ಕೆ ಒಂದು ಕೋಟಿ ಜನರಿಗೆ ಹಾಕುವಷ್ಟು ಲಸಿಕೆ ಲಭ್ಯವಾಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ.

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ ತಲಾ ಎರಡು ಡೋಸ್‌ ಹಾಕಿಸುವಿಕೆ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇರೆ ಬೇರೆ ಲಸಿಕೆಗಳ ಒಂದೊಂದು ಡೋಸ್‌ ಹಾಕಿಸುವಿಕೆ ವಿಚಾರದಲ್ಲಿ ಈವರೆಗೆ ಯಾವುದೇ ನಿರ್ಧಾರ ಆಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆರವಿಗೆ ಅನುಸರಿಸಬಹುದಾದ ಮಾನದಂಡಗಳನ್ನು ಪ್ರಕಟಿಸಲಾಗಿದೆ. ವಾರದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್‌ ದೃಢಪಡುವಿಕೆ ಪ್ರಮಾಣವು (ಪಾಸಿಟಿವಿಟಿ) ಶೇ 5ಕ್ಕಿಂತ ಕೆಳಗೆ ಇರಬೇಕು. 60 ವರ್ಷ ದಾಟಿದವರು ಮತ್ತು ಬೇರೆ ಗಂಭೀರ ಅನಾರೋಗ್ಯ ಇರುವ 45 ವರ್ಷ ದಾಟಿದವರಲ್ಲಿ ಶೇ 70ಕ್ಕಿಂತ ಹೆಚ್ಚು ಮಂದಿಗೆ ಲಸಿಕೆ ಹಾಕಿಸಿರಬೇಕು ಎಂದು ಕೇಂದ್ರವು ಹೇಳಿದೆ.

30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 344 ಜಿಲ್ಲೆಗಳಲ್ಲಿ‍ಕೋವಿಡ್‌ ದೃಢಪಡುವಿಕೆ ಪ್ರಮಾಣವು ಶೇ 5ಕ್ಕಿಂತ ಕಡಿಮೆ ಇದೆ. ಕೋವಿಡ್‌ನ ಹೊಸ ಪ್ರಕರಣಗಳ ಪ್ರಮಾಣಕಳೆದ ವಾರದಿಂದ ಇಳಿಕೆಯಾಗುತ್ತಿದೆ. ಮೇ 7ರಂದು ಗರಿಷ್ಠ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದವು. ಅಂದಿಗೆ ಹೋಲಿಸಿದರೆ ಹೊಸ ಪ್ರಕರಣಗಳ ಪ್ರಮಾಣವು ಶೇ 69ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಸ್ಪುಟ್ನಿಕ್‌ ಲಸಿಕೆ: 30 ಲಕ್ಷ ಡೋಸ್ ಆಮದು:

ಹೈದರಾಬಾದ್‌: ಸ್ಪುಟ್ನಿಕ್‌–ವಿ ಲಸಿಕೆಯ 30 ಲಕ್ಷ ಡೋಸ್‌ಗಳು ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿವೆ. ಭಾರತಕ್ಕೆ ವಿದೇಶದಿಂದ ಬಂದ ಅತ್ಯಂತ ದೊಡ್ಡ ಪ್ರಮಾಣದ ಲಸಿಕೆ ಇದಾಗಿದೆ. ರಷ್ಯಾದ ಈ ಲಸಿಕೆಯ ವಿತರಣೆಯ ಹೊಣೆಯನ್ನು ಡಾ. ರೆಡ್ಡೀಸ್‌ ಲ್ಯಾಬೊರೇಟರೀಸ್‌ ವಹಿಸಿಕೊಂಡಿದೆ. ಸಂಸ್ಥೆಯು ಲಸಿಕೆಯ 1.5 ಲಕ್ಷ ಡೋಸ್‌ ಅನ್ನು ಮೇ 1ರಂದು ಪಡೆದುಕೊಂಡಿತ್ತು.

ಸ್ಪುಟ್ನಿಕ್‌–ವಿ ಲಸಿಕೆಯ ಲಭ್ಯತೆಯು ಜೂನ್‌ 15ರ ಹೊತ್ತಿಗೆ ಇನ್ನಷ್ಟು ಹೆಚ್ಚಲಿದೆ. ಸೆಪ್ಟೆಂಬರ್‌ ಹೊತ್ತಿಗೆ ಗಣನೀಯ ಪ್ರಮಾಣದ ಲಸಿಕೆ ಡೋಸ್‌ಗಳು ಭಾರತದಲ್ಲಿ ಲಭ್ಯವಾಗಲಿವೆ ಎಂದು ಡಾ. ರೆಡ್ಡೀಸ್‌ನ ಸಹ ಅಧ್ಯಕ್ಷ ಜಿ.ವಿ. ಪ್ರಸಾದ್‌ ತಿಳಿಸಿದ್ದಾರೆ.

ದೇಶೀಯವಾಗಿಯೇ ಈ ಲಸಿಕೆಯ ತಯಾರಿಕೆಯು ಕೆಲವೇ ತಿಂಗಳಲ್ಲಿ ಆರಂಭವಾಗಲಿದೆ. ಒಟ್ಟು ಆರು ಕಡೆಗಳಲ್ಲಿ ಲಸಿಕೆ ತಯಾರಿಸಲಾಗುವುದು. ಧಾರವಾಡದ ಶಿಲ್ಪಾ ಬಯೊಲಜಿಕಲ್ಸ್‌ನಲ್ಲಿ ಮೊದಲ 12 ತಿಂಗಳಲ್ಲಿ 5 ಕೋಟಿ ಲಸಿಕೆ ತಯಾರಿಯ ಗುರಿ ಹಾಕಿಕೊಳ್ಳಲಾಗಿದೆ ಎಂದು ಡಾ. ರೆಡ್ಡೀಸ್‌ ಸಂಸ್ಥೆಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT