ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್‌ ದಾಸ್ತಾನು: ಬಿಜೆಪಿ–ಸೇನಾ ವಾಕ್ಸಮರ ತೀವ್ರ

Last Updated 19 ಏಪ್ರಿಲ್ 2021, 18:26 IST
ಅಕ್ಷರ ಗಾತ್ರ

ಮುಂಬೈ:ರೆಮ್‌ಡಿಸಿವಿರ್ ಔಷಧವು‌ ಕಾಳಸಂತೆಯಲ್ಲಿ ಮಾರಾಟ ವಾಗುತ್ತಿರುವುದರ ಬಗ್ಗೆ ವಿವಿಧ ರಾಜ್ಯಗಳಲ್ಲಿ ಹಲವರನ್ನು ಬಂಧಿಸಲಾ ಗಿದೆ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ಮುಂದುವರಿದಿದೆ.

‘ರೆಮ್‌ಡಿಸಿವಿರ್‌ ಅನ್ನು ಮಹಾರಾಷ್ಟ್ರ ದಲ್ಲಿ ಮಾರಾಟ ಮಾಡದಂತೆ ಕೇಂದ್ರ ಸರ್ಕಾರವು ಕೆಲವು ತಯಾರಿಕಾ ಕಂಪನಿ ಗಳ ಮೇಲೆ ಒತ್ತಡ ಹೇರುತ್ತಿದೆ’ ಎಂದು ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಅವರು ಶನಿವಾರ ಆರೋಪ ಮಾಡಿದ್ದರು. ಇದನ್ನು ವಿರೋಧಿಸಿದ ಬಿಜೆಪಿ ನಾಯಕರು, ‘ಎನ್‌ಸಿಪಿ ಸುಳ್ಳು ಆರೋಪ ಮಾಡು ತ್ತಿದೆ, ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡಲು ಶ್ರಮಿಸುತ್ತಿದೆ’ ಎಂದಿದ್ದರು.

ಆದರೆ ರಾತ್ರಿ ವೇಳೆಗೆ, ರೆಮ್‌ಡಿಸಿವಿರ್‌ ನ ಸಾವಿರಾರು ಡೋಸ್‌ಗಳನ್ನು ಸಂಗ್ರಹಿಸಿಟ್ಟಿದ್ದ, ದಮನ್‌ ಮೂಲದ ಔಷಧ ಕಂಪನಿ ಬ್ರೂಕ್‌ ಫಾರ್ಮಾದ ನಿರ್ದೇಶಕ ರಾಜೇಶ್‌ ಡೊಕಾನಿಯ ಅವರನ್ನು ಮುಂಬೈ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದ್ದರು. ರೆಮ್‌ಡಿಸಿವಿರ್‌ ರಫ್ತನ್ನು ನಿಷೇಧಿಸಲಾಗಿದ್ದರೂ, ಈ ಕಂಪನಿಯು ಕನಿಷ್ಠ 60,000 ಡೋಸ್‌ಗಳನ್ನು ವಿದೇಶಕ್ಕೆ ರಫ್ತು ಮಾಡುವ ಸಿದ್ಧತೆ ಮಾಡಿಕೊಂಡಿತ್ತು. ಅದರ ಮಾಹಿತಿ ಲಭಿಸಿದ ಕೂಡಲೇ ಅವರನ್ನು ಕರೆದು ವಿಚಾರಣೆಗೆ ಒಳಪಡಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಕ್ರಮವನ್ನು ಖಂಡಿಸಿದ ಬಿಜೆಪಿಯು, ‘ಮಹಾರಾಷ್ಟ್ರದ ರೋಗಿಗಳಿಗೆ ನೀಡುವ ಸಲುವಾಗಿ ಬಿಜೆಪಿಯೇ ಇಷ್ಟೊಂದು ರೆಮ್‌ಡಿಸಿವಿರ್‌ ನ ವ್ಯವಸ್ಥೆ ಮಾಡಿತ್ತು. ಕಂಪನಿಯ ನಿರ್ದೇಶಕರ ವಿಚಾರಣೆ ನಡೆಸುವ ಮೂಲಕ ಪಿಡುಗಿನ ಸಂದರ್ಭದಲ್ಲೂ ಮಹಾರಾಷ್ಟ್ರ ಸರ್ಕಾರ ರಾಜಕೀಯ ಮಾಡಿದೆ’ ಎಂದು ಆರೋಪಿಸಿತ್ತು.

ಡೊಕಾನಿಯಾ ಅವರ ವಿಚಾರಣೆಯ ನಂತರ, ಬಿಜೆಪಿ ಮುಖಂಡರಾದ ದೇವೇಂದ್ರ ಫಡಣವೀಸ್‌ ಹಾಗೂ ಪ್ರವೀಣ ದಾರೇಕರ್‌ ಅವರು ಪೊಲೀಸ್‌ ಠಾಣೆಗೆ ಧಾವಿಸಿದ್ದು ಈ ವಿಚಾರದಲ್ಲಿ ವಿವಾದ ಸೃಷ್ಟಿಗೆ ಕಾರಣವಾಗಿದೆ.

‘ಬಿಜೆಪಿಯ ರಾಜ್ಯ ಘಟಕವು ಜನರಿಗಾಗಿ ರೆಮ್‌ಡಿಸಿವಿರ್‌ನ ವ್ಯವಸ್ಥೆ ಮಾಡಿತ್ತು. ಬ್ರೂಕ್‌ ಸಂಸ್ಥೆಯನ್ನು ನಾಲ್ಕು ದಿನಗಳ ಹಿಂದೆ ಸಂಪರ್ಕಿಸಿದ್ದೆವು. ಆದರೆ ಅನುಮತಿ ಲಭಿಸದ ಕಾರಣ ಸರಬರಾಜು ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಕೇಂದ್ರದ ಸಚಿವರ ಮಧ್ಯಪ್ರವೇಶದಂದ ಅನುಮತಿ ಲಭಿಸಿತ್ತು’ ಎಂದು ಫಡಣವೀಸ್‌ ಹೇಳಿದ್ದರು. ಈ ವಾದವನ್ನು ಶಿವಸೇನಾ ಒಪ್ಪಲಿಲ್ಲ.

‘ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ, ರಾಜ್ಯ ಸರ್ಕಾರ, ಸ್ಥಳೀಯ ಆಡಳಿತ ಅಥವಾ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಬಿಜೆಪಿ ಮುಖಂಡರು ಲಕ್ಷಾಂತರ ಡೋಸ್‌ಗಳಷ್ಟು ಜೀವರಕ್ಷಕ ಔಷಧ ಖರೀದಿಸಲು ಸಾಧ್ಯವೇ’ ಎಂದು ಮಹಾರಾಷ್ಟ್ರದ ಸಚಿವ ಜಯಂತ ಪಾಟೀಲ ಟ್ವೀಟ್‌ ಮೂಲಕ ಪ್ರಶ್ನಿಸಿದ್ದಾರೆ.

‘ಔಷಧವನ್ನು ಸರ್ಕಾರಕ್ಕೆ ಮಾತ್ರ ಮಾರಾಟಮಾಡಬೇಕು ಎಂಬ ನಿಯಮ ಇರುವಾಗ ಫಡಣವೀಸ್‌ ಅವರು ಗುಜರಾತ್‌ನಿಂದ ರೆಮ್‌ಡಿಸಿವಿರ್‌ ಔಷಧವನ್ನು ಖರೀದಿಸಲು ಹೇಗೆ ಸಾಧ್ಯ? ಬಿಜೆಪಿಯು ₹ 4.75 ಕೋಟಿ ಮೌಲ್ಯದ ರೆಮ್‌ಡಿಸಿವಿರ್‌ ಅನ್ನು ಪಕ್ಷದ ಕಚೇರಿಯಲ್ಲಿ ಇಟ್ಟುಕೊಂಡಿದ್ದೇಕೆ’ ಎಂದು ಹೋರಾಟಗಾರ ಸಾಕೇತ್‌ ಗೋಖಲೆ ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರು ಔಷಧ ಸಂಸ್ಥೆಯೊಂದರ ನಿರ್ದೇಶಕರ ರಕ್ಷಣೆಗೆ ಧಾವಿಸುತ್ತಿರುವುದೇಕೆ ಎಂದು ಮಲಿಕ್‌ ಪ್ರಶ್ನಿಸಿದ್ದಾರೆ. ಬಿಜೆಪಿಯ ನಡೆಯನ್ನು ಎಎಪಿಯೂ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT