ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪ ದರ್ಶನ: ಭಕ್ತರನ್ನೇನೂ ಕಂಗೆಡಿಸದ ಕೋವಿಡ್‌

ಆನ್‌ಲೈನ್‌ ಬುಕಿಂಗ್‌: ಎಲ್ಲ ಟಿಕೆಟ್‌ ಮಾರಾಟ
Last Updated 13 ಅಕ್ಟೋಬರ್ 2020, 12:44 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಆದರೆ, ಶಬರಿಮಲೆಯ ಆರಾಧ್ಯ ದೈವ ಸ್ವಾಮಿ ಅಯ್ಯಪ್ಪ ಭಕ್ತರನ್ನು ಇದು ವಿಚಲಿತಗೊಳಿಸಿಲ್ಲ.

ಅಯ್ಯಪ್ಪ ದರ್ಶನಕ್ಕಾಗಿ ಆನ್‌ಲೈನ್‌ ಮೂಲಕ ಟಿಕೆಟ್‌ ಬುಕಿಂಗ್‌ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ, ಟಿಕೆಟ್‌ಗಳು ಬಿಸಿ ದೋಸೆಯಂತೆ ಮಾರಾಟವಾಗಿರುವುದು ಈ ಮಾತನ್ನು ಪುಷ್ಟೀಕರಿಸುತ್ತದೆ.

ದರ್ಶನಕ್ಕಾಗಿ ಬರುವವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಹಲವಾರು ಕಠಿಣ ಮಾರ್ಗಸೂಚಿಗಳನ್ನೂ ಜಾರಿಗೊಳಿಸಿದೆ. ಆದರೂ, ದರ್ಶನಾಕಾಂಕ್ಷಿಗಳಲ್ಲಿ ಉತ್ಸಾಹ ಕಡಿಮೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

ಆರು ತಿಂಗಳ ನಂತರ ದೇವಸ್ಥಾನವನ್ನು ತೆರೆಯಲಾಗುತ್ತಿದೆ. ತಿಂಗಳಿಗೊಮ್ಮೆ ನಡೆಯುವ ಸಾಯಂಕಾಲದ ಪೂಜಾ ವಿಧಿಗಳಿಗೆ ಚಾಲನೆ ನೀಡಲಾಗುತ್ತದೆ.ಈ ಧಾರ್ಮಿಕ ವಿಧಿಗಳು ಅ. 16ರಿಂದ 21ರ ರಾತ್ರಿವರೆಗೆ ನೆರವೇರಲಿವೆ.

ಈ ಅವಧಿಯಲ್ಲಿ ಪ್ರತಿ ದಿನ 250 ಭಕ್ತರಿಗೆ ಮಾತ್ರ ಪ್ರವೇಶಾವಕಾಶ ಇದೆ. ಭಕ್ತರು ಸರದಿಯಲ್ಲಿ ಸಾಗುವುದನ್ನು ಆನ್‌ಲೈನ್‌ ಮೂಲಕವೇ ಪೊಲೀಸರು ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿದೆ.

ಮಾಸ್ಕ್‌ ಧರಿಸುವುದರಿಂದ ವಿನಾಯಿತಿ: ದೇವಸ್ಥಾನ ತಲುಪಲು ಬೆಟ್ಟವನ್ನು ಏರಬೇಕು. ಇಂಥ ಸಂದರ್ಭದಲ್ಲಿ ಭಕ್ತರು ಮಾಸ್ಕ್‌ ಧರಿಸಿ, ಚಾರಣ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಈ ಅವಧಿಯಲ್ಲಿ ಮಾಸ್ಕ್‌ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ.

ದೇವಸ್ಥಾನದಲ್ಲಿ ಸ್ವಾಮಿ ಅಯ್ಯಪ್ಪ ದರ್ಶನ ಮಾಡುವುದಕ್ಕೆ 48 ಗಂಟೆಗಳ ಮೊದಲು ಕೋವಿಡ್‌ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.

ಆದರೆ, ಸರ್ಕಾರದ ಈ ನಿರ್ಧಾರಕ್ಕೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಈಗ ಶಬರಿಮಲೆಯಲ್ಲಿ ಹೆಚ್ಚುವರಿ ವೈದ್ಯರು, ಇತರ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ವೈದ್ಯರು ಬೇಡಿಕೆ ಮುಂದಿಟ್ಟಿದ್ದಾರೆ.

‘ಪ್ರತಿ ದಿನ 250 ಜನ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗುತ್ತಿದೆ. ಹೀಗಾಗಿ ಚಾರಣ ವೇಳೆ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗುವುದಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎ.ಎಲ್‌.ಶೀಜಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT