ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಬ್ಲೀಗಿಗಳನ್ನು ಬಲಿಪಶು ಮಾಡಲಾಗಿದೆ: ಬಾಂಬೆ ಹೈಕೋರ್ಟ್

Last Updated 23 ಆಗಸ್ಟ್ 2020, 2:38 IST
ಅಕ್ಷರ ಗಾತ್ರ

ಮುಂಬೈ: ಮಾರ್ಚ್ ತಿಂಗಳಲ್ಲಿ ನವದೆಹಲಿಯಲ್ಲಿ ನಡೆದ ತಬ್ಲೀಗಿ ಜಮಾತ್‌ನಲ್ಲಿ ಭಾಗವಹಿಸಿದ ವಿದೇಶಿಯರು ದೇಶದಲ್ಲಿ ಕೊರೊನಾವೈರಸ್ ಹರಡಲು ಕಾರಣ ಎಂದು ಆರೋಪಿಸಿ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ 29 ವಿದೇಶಿಯರ ವಿರುದ್ಧ ದಾಖಲಾದ ಎಫ್‌ಐಆರ್ ಬಗ್ಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ವಿಭಾಗೀಯ ನ್ಯಾಯಪೀಠ ಆಗಸ್ಟ್ 21ರಂದು ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಯಾಂತ್ರಿಕವಾಗಿ ಕಾರ್ಯ ನಿರ್ವಹಿಸಿದ್ದು, ರಾಜ್ಯ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಯವೆಸಗಿದೆ ಎಂದು ನ್ಯಾಯಮೂರ್ತಿ ಟಿ.ವಿ ನಲವಾಡೆ ಮತ್ತು ಎಂಜಿ ಸೆವ್ಲೀಕರ್ ಅಭಿಪ್ರಾಯಪಟ್ಟಿದ್ದಾರೆ .

ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲೀಗಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ 29 ವಿದೇಶಿಯರ ವಿರುದ್ಧ ಐಪಿಸಿ, ಸಾಂಕ್ರಾಮಿಕ ರೋಗಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ವಿದೇಶಿಯರ ಕಾಯ್ದೆ ಮತ್ತು ಪ್ರವಾಸಿ ವೀಸಾ ಉಲ್ಲಂಘಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಾಗಿತ್ತು.

ದೆಹಲಿಯ ಮರ್ಕಜ್‌ಗೆ ಬಂದ ವಿದೇಶಿಯರ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ಸಾಂಕ್ರಾಮಿಕ ಅಥವಾ ವಿಪತ್ತು ಉಂಟಾದಾಗ ರಾಜಕೀಯ ಸರ್ಕಾರವು ಬಲಿಪಶುವನ್ನು ಹುಡುಕಲು ಪ್ರಯತ್ನಿಸುತ್ತದೆ ಮತ್ತು ಈ ವಿದೇಶಿಯರನ್ನು ಅವರನ್ನು ಬಲಿಪಶುವನ್ನಾಗಿ ಮಾಡಿರುವ ಸಾಧ್ಯತೆ ಇದೆ. ಧಾರ್ಮಿಕ ಚಟುವಟಿಕೆ (ತಬ್ಲೀಗಿ ಜಮಾತ್) ಎಂದು ಕರೆಯಲ್ಪಡುವ ವಿರುದ್ಧದ ಪ್ರಚಾರವು ಅನಗತ್ಯವಾಗಿತ್ತು. ತಬ್ಲೀಗಿ ಜಮಾತ್ಚಟುವಟಿಕೆ 50 ವರ್ಷಗಳಿಂದ ನಡೆದು ಬರುತ್ತಿದ್ದು ಪ್ರತೀ ವರ್ಷ ನಡೆಯುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ವಿದೇಶಿಯರ ವಿರುದ್ಧ ಕೈಗೊಂಡ ಈ ಕ್ರಮದ ಬಗ್ಗೆ ಸಂಬಂಧಪಟ್ಟವರು ಪಶ್ಚಾತ್ತಾಪ ಪಡುವಮತ್ತು ಈ ಕ್ರಮದಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವ ಸಮಯ ಈಗ ಬಂದಿದೆ. ವಿಶ್ವದಾದ್ಯಂತದ ಅನೇಕ ಮುಸ್ಲಿಮರು ಭಾರತಕ್ಕೆ ಬಂದು ದೆಹಲಿಯ ಮರ್ಕಜ್ ಮಸೀದಿಗೆ ಭೇಟಿ ನೀಡುತ್ತಾರೆ.ಏಕೆಂದರೆ ಅವರು ತಬ್ಲೀಗಿ ಜಮಾತ್ ಅವರ ಸುಧಾರಣಾ ಆಂದೋಲನಕ್ಕೆ ಆಕರ್ಷಿತರಾಗಿದ್ದಾರೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ದೆಹಲಿಯಲ್ಲಿ ಮರ್ಕಜ್‌ನಲ್ಲಿ ಮುಸ್ಲಿಮರು ತಂಗುವ ವ್ಯವಸ್ಥೆಗಳೂ ಇವೆ ನ್ಯಾಯಾಲಯ ತಮ್ಮ ಆದೇಶದಲ್ಲಿ ಹೇಳಿದೆ.

ಭಾರತದಲ್ಲಿ ಮಸೀದಿಗಳಿಗೆ ಈ ವಿದೇಶಿಯರ ಭೇಟಿಯನ್ನು ನಿಷೇಧಿಸಲಾಗಿಲ್ಲ ಮತ್ತು ಈ ಚಟುವಟಿಕೆಯನ್ನು ಸರ್ಕಾರವು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ತೋರಿಸಲು ದಾಖಲೆಯಲ್ಲಿ ಏನೂ ಇಲ್ಲ. ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ತಬ್ಲೀಗಿ ಜಮಾತ್ ಚಟುವಟಿಕೆ ಸ್ಥಗಿತಗೊಂಡಿತು ಮತ್ತು ಅದು ಇನ್ನೂ ಶುರು ಆಗಿಲ್ಲ.

ಭಾರತೀಯ ಸಂಸ್ಕೃತಿಯ ಪ್ರಕಾರ ಜನರು ಈಗಲೂ ಅತಿಥಿಗಳನ್ನು ಸ್ವಾಗತಿಸುತ್ತಿದ್ದಾರೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ
ಕೋವಿಡ್- 19ಸಾಂಕ್ರಾಮಿಕ ರೋಗದಿಂದುಂಟಾಗಿರುವ ಈ ಪರಿಸ್ಥಿತಿಯಲ್ಲಿ ವಿಶೇಷವಾಗಿ ಈಗಿನ ಅರ್ಜಿದಾರರಂತೆ ನಾವು ಅತಿಥಿಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು. ಅವರಿಗೆ ಸಹಾಯ ಮಾಡುವ ಬದಲು, ಪ್ರಯಾಣ ದಾಖಲೆಗಳ ಉಲ್ಲಂಘನೆ ಮಾಡಿದ್ದಾರೆ ಮತ್ತು ಕೊರೊನಾವೈರಸ್ ಹರಡಲು ಅವರು ಜವಾಬ್ದಾರರು ಎಂದು ಆರೋಪಿಸಿ ನಾವು ಅವರನ್ನು ಜೈಲುಗಳಲ್ಲಿರಿಸಿದ್ದೇವೆಎಂದು ನ್ಯಾಯಾಲಯ ಹೇಳಿದೆ.

ಪ್ರಸ್ತುತ ವಿಷಯದಲ್ಲಿ ಮಹಾರಾಷ್ಟ್ರ ಪೊಲೀಸರು ಯಾಂತ್ರಿಕವಾಗಿ ವರ್ತಿಸಿದ್ದಾರೆ ಮತ್ತು ರಾಜ್ಯ ಸರ್ಕಾರ ರಾಜಕೀಯ ಒತ್ತಡದಲ್ಲಿ ಕಾರ್ಯನಿರ್ವಹಿಸಿದೆ ಎಂದು ನ್ಯಾಯಪೀಠ ಹೇಳಿದೆ.

ವಿವಿಧ ದೇಶಗಳ ವಿವಿಧ ಧರ್ಮಗಳ ನಾಗರಿಕರಿಗೆ ಸರ್ಕಾರವು ವಿಭಿನ್ನ ಚಿಕಿತ್ಸೆಯನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರಿಗೆ ಆಶ್ರಯ ನೀಡಿದ್ದಕ್ಕಾಗಿ ವಿದೇಶಿ ಪ್ರಜೆಗಳ ಜತೆ ಆರು ಭಾರತೀಯ ಪ್ರಜೆಗಳು ಮತ್ತು ಮಸೀದಿಗಳ ಟ್ರಸ್ಟಿಗಳ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳ ಪಟ್ಟಿಯಲ್ಲಿರುವ ಘಾನಾ, ಟಾಂಜಾನಿಯಾ, ಬೆನಿನ್ ಮತ್ತು ಇಂಡೋನೇಷ್ಯಾದ ದೇಶಗಳಿಗೆ ಸೇರಿದ ಪ್ರಜೆಗಳು ಸಲ್ಲಿಸಿದ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆ ನಡೆಸಿತು.

ಆದೇಶವನ್ನು ರದ್ದುಗೊಳಿಸುವ ಭಾಗವನ್ನು ತಾನು ಒಪ್ಪುತ್ತೇನೆ ಎಂದು ಹೇಳಿದ ನ್ಯಾಯಮೂರ್ತಿ ಸೆವ್ಲೀಕರ್, ನ್ಯಾಯಮೂರ್ತಿ ನಲವಾಡೆ ಅವರು ಅಭಿಪ್ರಾಯಗಳ ಬಗ್ಗೆ ತಾನು ಸಂಪೂರ್ಣವಾಗಿ ಒಪ್ಪುವುದಿಲ್ಲ ಎಂದಿದ್ದಾರೆ. ಆದಾಗ್ಯೂ ಆ ಅಭಿಪ್ರಾಯ ಯಾವುದು ಎಂಬುದರ ಬಗ್ಗೆ ಅವರು ನಿರ್ದಿಷ್ಟವಾಗಿ ಹೇಳಿಲ್ಲ.

ಅರ್ಜಿದಾರರು ಹೇಳಿದ್ದೇನು?

ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆತಿಥ್ಯ ಮತ್ತು ಆಹಾರ ಸಂಸ್ಕೃತಿಯನ್ನು ಅರಿಯಲು ಮಾರ್ಚ್ 10ರ ಮುನ್ನ ಅಂದರೆ 2020 ಫೆಬ್ರುವರಿಯಲ್ಲಿ ನಾವು ಭಾರತಕ್ಕೆ ಬಂದೆವು. ನಾವು ಭಾರತಕ್ಕೆ ಬಂದಾಗ ನಮ್ಮನ್ನು ಪರೀಕ್ಷೆಗೊಳಪಡಿಸಲಾಗಿದೆ. ಕೋವಿಡ್-19 ರೋಗದಯಾವುದೇ ಲಕ್ಷಣಗಳನ್ನು ಇಲ್ಲ ಎಂದು ಖಚಿತವಾದ ನಂತರವೇ ನಮಗೆ ವಿಮಾನ ನಿಲ್ದಾಣದಿಂದ ಹೊರಹೋಗಲು ಅವಕಾಶ ನೀಡಲಾಯಿತು. ಮುಸ್ಲಿಮರ ಧಾರ್ಮಿಕ ಆಚರಣೆಗಳನ್ನು ವೀಕ್ಷಿಸಲು ನಾವು ಭಾರತದ ಹಲವಾರು ಸ್ಥಳಗಳಿಗೆ ಭೇಟಿ ನೀಡುತ್ತಿದ್ದೆವು. ಮಾರ್ಚ್‌ನಲ್ಲಿ ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಯಿತು. ಆಗ ಹೆಚ್ಚಿನ ವಸತಿಗೃಹಗಳು ಮತ್ತು ಹೋಟೆಲ್‌ಗಳು ಮುಚ್ಚಿದ್ದರಿಂದ ಅಹಮದ್‌ನಗರ ಜಿಲ್ಲೆಯಲ್ಲಿದ್ದ ನಮಗೆ ಮಸೀದಿಗಳಲ್ಲಿ ವಸತಿ ಕಲ್ಪಿಸಲಾಗಿತ್ತು.

ವೀಸಾ ನೀಡುವಾಗ ಮಸೀದಿಗಳು ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದಕ್ಕೆ ನಿಷೇಧವಿರುವುದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಪೊಲೀಸರ ವಾದವೇನು?

ಅರ್ಜಿದಾರರ ಹೇಳಿಕೆಗಳಿಗೆ ವಿರೋಧ ವ್ಯಕ್ತ ಪಡಿಸಿದ ಪೊಲೀಸರು, ಲಾಕ್‍ಡೌನ್ ತೆರವು ಆದ ಕೂಡಲೇ ತಬ್ಲೀಗಿ ಕಾರ್ಯಕ್ರಮಕ್ಕೆ ಹಾಜರಾದ ವ್ಯಕ್ತಿಗಳು ಪರೀಕ್ಷೆಗಾಗಿ ಸ್ವಯಂಪ್ರೇರಣೆಯಿಂದ ಮುಂದೆ ಬರಬೇಕು ಎಂದು ಹೇಳಿದ್ದೆವು. ಆದರೆ ಅರ್ಜಿದಾರರು ಅದನ್ನು ಪಾಲಿಸಲಿಲ್ಲ. ಅದರ ಬದಲು ಕೊರೊನಾವೈರಸ್ ಹರಡುವ ಬೆದರಿಕೆ ಸೃಷ್ಟಿಸಿದರು ಎಂದಿದ್ದಾರೆ.

ಅದೇ ವೇಳೆ ಆರೋಪಿಗಳು ಇಸ್ಲಾಂ ಧರ್ಮವನ್ನು ಸಾರ್ವಜನಿಕರಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಗಳ ಪ್ರತಿವಾದಿಗಳು ವಾದಿಸಿದರು.

ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದ ನ್ಯಾಯಾಲಯ, ವಿದೇಶಿಯರು (ಆರೋಪಿಗಳು) ಇತರ ಧರ್ಮಗಳ ವ್ಯಕ್ತಿಗಳನ್ನು ಇಸ್ಲಾಂಗೆ ಪರಿವರ್ತಿಸುವ ಮೂಲಕ ಇಸ್ಲಾಂ ಧರ್ಮವನ್ನು ಹರಡುತ್ತಿದ್ದಾರೆಂದು ತೋರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಹೇಳಿತು.

ಭಾರತೀಯರು ಮಸೀದಿಗಳಲ್ಲಿ ಸ್ಥಳಾವಕಾಶ ನೀಡುವುದನ್ನು ಅಥವಾ ವಿದೇಶಿಯರು ಸೇರಿದಂತೆ ವ್ಯಕ್ತಿಗಳಿಗೆ ಆಹಾರ ಒದಗಿಸುವುದನ್ನು ತಡೆಯುವ ಯಾವುದೇ ಆದೇಶವನ್ನು ಯಾವುದೇ ಸಂಸ್ಥೆ ಹೊರಡಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT