ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ದೇಶದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್ ತುರ್ತು ಬಳಕೆಗೆ ಒಪ್ಪಿಗೆ

ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ಗೆ ಔಷಧ ಮಹಾನಿಯಂತ್ರಕರ ಅನುಮೋದನೆ
Last Updated 3 ಜನವರಿ 2021, 19:13 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಿದ ಲಸಿಕೆಗಳಾದ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ನ ತುರ್ತು ಮತ್ತು ನಿರ್ಬಂಧಿತ ಬಳಕೆಗೆ ಭಾರತದ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದಾರೆ. ಇದರಿಂದಾಗಿ, ಸಾಮೂಹಿಕ ಲಸಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ದಿಸೆಯಲ್ಲಿ ದೇಶವು ಮತ್ತೊಂದು ಹೆಜ್ಜೆ ಮುಂದೆ ಇರಿಸಿದಂತಾಗಿದೆ.

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯ (ಸಿಡಿಎಸ್‌ಸಿಒ) ಕೋವಿಡ್‌–19 ವಿಷಯ ಪರಿಣತ ಸಮಿತಿಯ ಶಿಫಾರಸಿನ ಆಧಾರದಲ್ಲಿ ಲಸಿಕೆಗಳ ಬಳಕೆಗೆ ಅನುಮತಿ ನೀಡುವ ನಿರ್ಧಾರವನ್ನು ಡಿಸಿಜಿಐ ತೆಗೆದುಕೊಂಡಿದೆ. ಆಸ್ಟ್ರಾಜೆನೆಕಾ ಸಂಸ್ಥೆ ಮತ್ತು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯವು ಜಂಟಿಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿವೆ.

ಪುಣೆಯ ಸೆರಂ ಇನ್ಸ್‌ಟಿಟ್ಯೂಟ್‌ ಈ ಲಸಿಕೆಯನ್ನು ಭಾರತದಲ್ಲಿ ತಯಾರಿಸಲಿದೆ. ಕೋವ್ಯಾಕ್ಸಿನ್‌ ಲಸಿಕೆಯನ್ನು ಭಾರತ್‌ ಬಯೋಟೆಕ್‌ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

ಕೋವಿಶೀಲ್ಡ್‌ನ ತುರ್ತು ಬಳಕೆಗೆ ಅನುಮೋದನೆ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಶನಿವಾರವೇ ತಿಳಿಸಿದ್ದರು.

ಲಸಿಕೆಗೆ ಅನುಮೋದನೆ ನೀಡಿದ ಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸ್ವಾಗತಿಸಿದೆ. ಇದು ಈ ಪ್ರದೇಶದಲ್ಲಿನ ಕೋವಿಡ್‌ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರ ಮತ್ತು ಬಲಗೊಳಿಸಲು ನೆರವಾಗಲಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಸಾಹಸಕ್ಕೆ ಪ್ರತಿಫಲ:ತಮ್ಮ ಸಂಸ್ಥೆಯು ಕೈಗೊಂಡ ದೊಡ್ಡ ಸಾಹಸಕ್ಕೆ ಈಗ ಪ್ರತಿಫಲ ದೊರೆತಂತಾಗಿದೆ. ಕೋವಿ
ಶೀಲ್ಡ್‌ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸೆರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲಾ ಹೇಳಿದ್ದಾರೆ. ಕೆಲವೇ ವಾರಗಳಲ್ಲಿ ಲಸಿಕೆ ಪೂರೈಸಲು ತಮ್ಮ ಸಂಸ್ಥೆಯು ಸಜ್ಜಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಲಸಿಕೆ ತಯಾರಿಕೆಯಲ್ಲಿ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಕಂಪನಿಯಾಗಿರುವ ಸೆರಂನ ಮುಖ್ಯಸ್ಥ ಪೂನಾವಾಲಾ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಲಸಿಕೆಯ ನಾಲ್ಕರಿಂದ ಐದು ಕೋಟಿ ಡೋಸ್‌ಗಳನ್ನು ಸಂಸ್ಥೆಯು ಸಂಗ್ರಹಿಸಿ ಇರಿಸಿಕೊಂಡಿದೆ. ಮಾರ್ಚ್‌ನಿಂದ ಪ್ರತಿ ತಿಂಗಳು 10 ಕೋಟಿ ಡೋಸ್‌ ತಯಾರಿಕೆ ಸಾಧ್ಯವಾಗುವಂತೆ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಾಗುವುದು. ಜೂನ್‌ ಹೊತ್ತಿಗೆ 30 ಕೋಟಿ ಡೋಸ್‌ ಲಸಿಕೆ ಸಿದ್ಧವಾಗಲಿದೆ ಎಂದು ಪೂನಾವಾಲಾ ಕಳೆದ ತಿಂಗಳು ಹೇಳಿದ್ದರು.

ಝೈಡಸ್‌ ಕ್ಯಾಡಿಲಾಸಂಸ್ಥೆಯು ಅಭಿವೃದ್ಧಿಪಡಿಸಿರುವ ಕೋವಿಡ್‌ ಸಂಭಾವ್ಯ ಲಸಿಕೆಯ ಮೂರನೇ ಹಂತದ ಪರೀಕ್ಷೆಗಳಿಗೆ ಔಷಧ ಮಹಾನಿಯಂತ್ರಕರು ಅನುಮತಿ ನೀಡಿದ್ದಾರೆ.

ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ ನ್ಯಾಷನಲ್‌ ಬಯೊಫಾರ್ಮಾ ಮಿಷನ್‌ (ಎನ್‌ಬಿಎಂ) ಬೆಂಬಲದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಮೊದಲ ಮತ್ತು ಎರಡನೇ ಹಂತದಲ್ಲಿ ಒಂದು ಸಾವಿರ ಮಂದಿ ಮೇಲೆ ಲಸಿಕೆ ಪ್ರಯೋಗಿಸಲಾಗಿದೆ. ಮೂರನೇ ಹಂತದಲ್ಲಿ 26 ಸಾವಿರ ಭಾರತೀಯ ಸ್ವಯಂಸೇವಕರಿಗೆ ಲಸಿಕೆ ನೀಡಿ ಪ್ರಯೋಗ ನಡೆಸಲು ಅನುಮತಿ ಕೊಡಲಾಗಿದೆ.

ರಾಜಕೀಯ ವಾಗ್ಯುದ್ಧ:

ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ಯುದ್ಧ ನಡೆದಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡಿರುವುದು ‘ಅತ್ಯಾತುರದ ಕ್ರಮ’, ಈ ಲಸಿಕೆ ಪಡೆದುಕೊಂಡವರು ಬಳಿಕ ನಪುಂಸಕತ್ವಕ್ಕೆ ಒಳಗಾಗುವ ಅಪಾಯ ಇದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಸ್ಥಾಪಿತ ಹಿತಾಸಕ್ತಿ’ಗಳ ಪರವಾಗಿ ವಿರೋಧ ಪಕ್ಷಗಳು ಕೆಲಸ ಮಾಡುತ್ತಿವೆ ಎಂದಿದೆ.

* ಸೆರಂ ಮತ್ತು ಭಾರತ್‌ ಬಯೊಟೆಕ್‌ ಸಂಸ್ಥೆಗಳ ಲಸಿಕೆಗಳಿಗೆ ದೊರೆತ ಅನುಮೋದನೆಯು ಕೋವಿಡ್‌ ವಿರುದ್ಧದ ಸ್ಫೂರ್ತಿಯುತ ಹೋರಾಟದಲ್ಲಿ ನಿರ್ಣಾಯಕವಾದ ತಿರುವು.

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT