ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಕೇರಳದಲ್ಲಿ ಪ್ರದರ್ಶನ

ಬಿಜೆಪಿ ಕಾರ್ಯಕರ್ತರಿಂದ ತೀವ್ರ ವಿರೋಧ
Last Updated 24 ಜನವರಿ 2023, 18:56 IST
ಅಕ್ಷರ ಗಾತ್ರ

ತಿರುವನಂತಪುರ: ಬಿಬಿಸಿ ನಿರ್ಮಿಸಿರುವ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ಸಿಪಿಎಂನ ಯುವ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾಂಗ್ರೆಸ್‌ನ ಯುವ, ಅಲ್ಪಸಂಖ್ಯಾತ ವಿಭಾಗ ಗಳ ವತಿಯಿಂದ ಕೇರಳದ ಹಲವು ಭಾಗಗಳಲ್ಲಿ ಮಂಗಳವಾರ ಪ್ರದರ್ಶಿಸಲಾಯಿತು. ಬಿಜೆಪಿಯ ವಿರೋಧದ ನಡುವೆಯೇ ಪ್ರದರ್ಶನ ನಡೆಯಿತು.

ಸಾರ್ವಜನಿಕ ಸ್ಥಳಗಳು ಹಾಗೂ ಕಾಲೇಜುಗಳಲ್ಲಿ ನಡೆದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಬಿಜೆಪಿಯ ಯುವ ಮೋರ್ಚಾ ಕಾರ್ಯಕರ್ತರು ಅಡ್ಡಿಪಡಿಸಲು ಯತ್ನಿಸಿದರು. ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿತು. ಆದರೆ ರಾಜ್ಯ ಸರ್ಕಾರ ತಡೆ ನೀಡಲಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಅವರ ಮನವಿಗೆ ಸರ್ಕಾರ ಗಮನ ನೀಡಲಿಲ್ಲ.

ದೇಶದಲ್ಲಿ ಸಾಕ್ಷ್ಯಚಿತ್ರ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸುವ ಭಾಗವಾಗಿ, ರಾಜ್ಯದಲ್ಲಿ ಅದನ್ನು ಪ್ರದರ್ಶಿಸಲು ಸಿಪಿಎಂನ ಯುವಘಟಕವಾದ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ಮತ್ತು ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್‌ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸಂಘಟನೆಗಳು
ನಿರ್ಧರಿಸಿದ್ದವು. ಹಾಗೆಯೇ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಯುವ ಹಾಗೂ ಅಲ್ಪಸಂಖ್ಯಾತ ವಿಭಾಗಗಳೂ ಸಾಕ್ಷ್ಯಚಿತ್ರ ಪ್ರದರ್ಶಿಸುವುದಾಗಿ ಘೋಷಿಸಿದವು.

ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜು, ತಿರುವನಂತ ಪುರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರತಿಭಟನೆ ನಡೆಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಕೆಲವು ಕಾಲೇಜುಗಳಲ್ಲಿ ಪ್ರದರ್ಶನಕ್ಕೆ ಅನುಮತಿ ದೊರೆಯದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು.

***

ದೇಶದ ಸೌಹಾರ್ದತೆಗೆ ಧಕ್ಕೆ ತರುವ ಬಾಹ್ಯ ಶಕ್ತಿಗಳ ಯತ್ನಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡಬಾರದು. ಸಾಕ್ಷ್ಯಚಿತ್ರವು ಕೋಮು ಸೌಹಾರ್ದ ಕೆಡಿಸುವ ಉದ್ದೇಶ ಹೊಂದಿದೆ

–ಕೆ.ಸುರೇಂದ್ರನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಬಿಜೆಪಿ ಜೊತೆ ತಮಗೆ ಭಿನ್ನಾಭಿಪ್ರಾಯವಿದ್ದರೂ ಪೂರ್ವಗ್ರಹಗಳನ್ನು ಹೊಂದಿರುವ ಬಿಬಿಸಿ ಸಂಸ್ಥೆಯು ಭಾರತದ ಸಾರ್ವಭೌಮತೆಗೆ ಧಕ್ಕೆ ತರುವ ರೀತಿಯಲ್ಲಿ ಸಾಕ್ಷ್ಯಚಿತ್ರ ನಿರ್ಮಿಸಿದೆ
– ಅನಿಲ್ ಆ್ಯಂಟನಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT