ಬುಧವಾರ, ಮಾರ್ಚ್ 29, 2023
23 °C

ಬಲಪಂಥೀಯರು ಟೀಕಿಸುತ್ತಿದ್ದಾರೆಂದರೆ ಸರ್ಕಾರ ಸರಿ ದಾರಿಯಲ್ಲಿದೆ ಎಂದರ್ಥ: ಸ್ಟಾಲಿನ್

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಗಾಮಿ ಬಲಪಂಥೀಯರು ನಮ್ಮ ಮೇಲೆ ಮುಗಿಬಿದ್ದಿದ್ದಾರೆ ಎಂದರೆ ನಮ್ಮ ಸರ್ಕಾರ ಸರಿಯಾದ ಪಥದಲ್ಲಿದೆ ಎಂಬುದರ ಮರುದೃಢೀಕರಣ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪ್ರತಿಪಾದಿಸಿದ್ದಾರೆ.

ಮೇ 2021ರಲ್ಲಿ ಸ್ಟಾಲಿನ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸರ್ಕಾರದ ವಿರುದ್ಧ ಮುಗಿಬಿದ್ದವರ ಕುರಿತು ಹೇಳಿಕೆ ನೀಡಿದ್ದಾರೆ. ಇಂತವರು ತಮಿಳಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸ್ಟಾಲಿನ್‌, ಪ್ರತಿಗಾಮಿ ಬಲಪಂಥೀಯರ ಕಡೆಯಿಂದ ಟೀಕೆಗಳು ಬರುತ್ತಿದ್ದರೆ ಅದು ನಮ್ಮ ಸರ್ಕಾರ ಸರಿಯಾದ ಕೆಲಸ ಮಾಡುತ್ತಿದೆ ಮತ್ತು ತಮಿಳುನಾಡು ನೇರವಾದ ಪಥದಲ್ಲಿದೆ ಎಂದರ್ಥ ಎಂದರು.

ಬಲಪಂಥೀಯರು ವಿಚಾರಗಳನ್ನು ತಿರುಚುವ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕುತಂತ್ರಿಗಳು. ಅವರು ಹಿಂದಿ ಹೇರಿಕೆ ಮೂಲಕ ಮತ್ತು ಜಾತ್ಯತೀತ ವ್ಯವಸ್ಥೆಯನ್ನು ಹತ್ತಿಕ್ಕುವ ಮೂಲಕ ತಮಿಳಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

'ತಮಿಳಿಗರು ಹಿಂದೂಗಳಲ್ಲ' ಎಂಬ ವಿಚಾರವಾಗಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗೆ ಸಂಬಂಧಿಸಿದ ಪ್ರಶ್ನೆಗೆ ಸ್ಟಾಲಿನ್‌ ಪ್ರತಿಕ್ರಿಯಿಸಿದರು. ನಾನು ಎಂದಿಗೂ ರಚನಾತ್ಮಕ ಟೀಕೆಗಳನ್ನು ಸ್ವಾಗತಿಸುತ್ತೇನೆ. ಆದರೆ ಯಾರನ್ನೋ ಒಬ್ಬರನ್ನು ಅವಮಾನಿಸಬೇಕು ಎಂಬ ದುರುದ್ದೇಶವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿರುವವರಿಗೆ ಪ್ರತಿಕ್ರಿಯಿಸುತ್ತ ನನ್ನ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವುದಿಲ್ಲ ಎಂದರು.

ಡಿಎಂಕೆ ಸ್ಥಾಪಕ ಸಿ.ಎನ್‌.ಅಣ್ಣಾದುರೈ ಅವರು ಸಂಸತ್ತಿನಲ್ಲಿ 'ನಾನು ದ್ರಾವಿಡ ವಂಶಕ್ಕೆ ಸೇರಿದವನು' ಎಂದು ಗುಡುಗಿದ್ದಾರೆ. ನಾವೂ ಅದನ್ನೇ ಅನುಸರಿಸುತ್ತೇವೆ. ನಮ್ಮ ದ್ರಾವಿಡ ಮಾದರಿ ಸರ್ಕಾರವು 'ಒಂದು ಜಾತಿ; ಒಂದು ದೇವರು' ಎಂದಿರುವ ಅಣ್ಣಾ ಅವರ ಹೆಜ್ಜೆಗಳನ್ನು ಹಿಂಬಾಲಿಸಿ ನಡೆಯುತ್ತಿದೆ. ಎಲ್ಲರ ಏಳ್ಗೆಗೆ ದುಡಿಯುವುದು ನಮ್ಮ ಕರ್ತವ್ಯ. ಇದು ಅಣ್ಣಾ ಮತ್ತು ಎಂ.ಕರುಣಾನಿಧಿ ಅವರ ನೇತೃತ್ವದ ದ್ರಾವಿಡ ಚಳುವಳಿ ಮೂಲಕ ಸೃಷ್ಟಿಯಾದ ನವ ತಮಿಳುನಾಡು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು