ಬುಧವಾರ, ಮೇ 25, 2022
31 °C

UP Elections: ಯೋಗಿ ಸಂಪುಟದ ಮಾಜಿ ಸಚಿವ ದಾರಾ ಸಿಂಗ್‌ ಎಸ್‌ಪಿಗೆ ಸೇರ್ಪಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸಚಿವ ಸಂಪುಟದಿಂದ ಹೊರಬಂದಿರುವ ಮಧುಬನ ಕ್ಷೇತ್ರದ ಬಿಜೆಪಿ ಶಾಸಕ ದಾರಾ ಸಿಂಗ್‌ ಚೌಹಾಣ್‌ ಅವರು ಭಾನುವಾರ ಸಮಾಜವಾದಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ದಾರಾ ಸಿಂಗ್‌ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು. ಆಡಳಿತಾರೂಢ ಬಿಜೆಪಿ ತೊರೆದು ಎಸ್‌ಪಿಗೆ ಸೇರಿರುವ ಮೂರನೇ ಸಚಿವ ಇವರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗಗಳ ನಾಯಕರಾದ ಸ್ವಾಮಿ ಪ್ರಸಾದ್ ಮೌರ್ಯ, ಧರಂ ಸಿಂಗ್ ಸೈನಿ ಹಾಗೂ ಇತರೆ ಐವರು ಶಾಸಕರು ಶುಕ್ರವಾರವೇ ಎಸ್‌ಪಿಗೆ ಸೇರಿದ್ದಾರೆ.

ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳ–ಎಸ್‌ನ ಶಾಸಕ ಆರ್‌.ಕೆ.ವರ್ಮಾ ಸಹ ಎಸ್‌ಪಿಗೆ ಸೇರ್ಪಡೆಯಾದರು. ಬಿಜೆಪಿಗೆ 11 ಶಾಸಕರು ರಾಜೀನಾಮೆ ನೀಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಕ್ಷೇತ್ರಗಳಿಗೆ ಮುಂದಿನ ತಿಂಗಳಿನಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳ ರಾಜಕೀಯ ಪಕ್ಷಾಂತರವು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಅಖಿಲೇಶ್‌ ಯಾದವ್‌ ಅವರನ್ನು ಉತ್ತರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಮಾಡಲು ಪಣ ತೊಟ್ಟಿರುವುದಾಗಿ ಹೇಳಿದ ದಾರಾ ಸಿಂಗ್‌, '2017ರಲ್ಲಿ ಬಿಜೆಪಿಯು ಹಿಂದುಳಿದ ಸಮುದಾಯಗಳಿಗೆ ಸೇರಿದ ಜನರ ಮತಗಳನ್ನು ಪಡೆದುಕೊಂಡಿತು, ಆದರೆ ಹಿಂದಿರುಗಿಸಿ ಏನನ್ನೂ ಕೊಡಲಿಲ್ಲ. ಹಾಗಾಗಿಯೇ ಹಿಂದುಳಿದ ಸಮುದಾಯಗಳಿಗೆ ಸೇರಿರುವ ಎಲ್ಲರೂ ಎಸ್‌ಪಿ ಕಡೆಗೆ ಮುಖ ಮಾಡಿದ್ದಾರೆ' ಎಂದರು.

ಇದನ್ನೂ ಓದಿ:

ಬಿಜೆಪಿ ನಾಯಕರನ್ನು ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಅಖಿಲೇಶ್‌ ಯಾದವ್‌, ಇಂಗ್ಲಿಷ್‌ನಲ್ಲಿ 'ಕಬ್ಬಿಣ ಕಾದಿರುವಾಗಲೇ ಬಡಿಯಬೇಕು' ಎಂಬ ಮಾತೊಂದಿದೆ. ನಾವು ಸರಿಯಾದ ಸಮಯದಲ್ಲಿಯೇ ಈ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ನಿರ್ಧರಿಸಿದೆವು. ಬಿಜೆಪಿಗೆ ಇಂಗ್ಲಿಷ್‌ ಉಕ್ತಿ ಅರ್ಥವಾಗುವುದಿಲ್ಲ. ಅವರಿಗೆ ಏನಾದರೂ ಅರ್ಥವಾದರೆ, ಅವರು ಖಿನ್ನತೆಗೆ ಒಳಗಾಗುತ್ತಾರೆ' ಎಂದು ಬಿಜೆಪಿಯ ಕಾಲೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು