ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯ ಬಳಿಕವೂ ಎಚ್ಚರವಹಿಸಿ: ಮೋದಿ

Last Updated 31 ಡಿಸೆಂಬರ್ 2020, 12:39 IST
ಅಕ್ಷರ ಗಾತ್ರ

ಅಹಮದಾಬಾದ್‌: ‘ದೇಶದಲ್ಲಿ ಹೊಸ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೂ, ಜನರು ಎಚ್ಚರಿಕೆಯಿಂದ ಇರಬೇಕು. ಲಸಿಕೆಯನ್ನು ಪಡೆದ ಬಳಿಕವೂ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.

ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ರಾಜ್‌ಕೋಟ್‌ನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ಶಂಕುಸ್ಥಾಪನೆ ನೆರವೇರಿಸಿದ ಅವರು, ‘ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ದೇಶ ಸಜ್ಜಾಗಿದೆ’ ಎಂದು ಹೇಳಿದರು.‌

‘ಎಲ್ಲಿಯವರೆಗೂ ಲಸಿಕೆ ಇಲ್ಲವೊ ಅಲ್ಲಿಯವರೆಗೂ ನಿಯಮಗಳಲ್ಲಿ ಸಡಿಲತೆ ಇಲ್ಲ ಎಂದು ನಾನು ಹೇಳುತ್ತಿದ್ದೆ. ಇದೀಗ 2021ರಲ್ಲಿ ‘ಲಸಿಕೆ ಜೊತೆಗೆ ಎಚ್ಚರಿಕೆಯೂ ಅಗತ್ಯ’ ಎನ್ನುವುದು ನಮ್ಮ ಮಂತ್ರವಾಗಬೇಕು’ ಎಂದೂ ಹೇಳಿದರು.

‘ಕೋವಿಡ್ ಲಸಿಕೆ ಕುರಿತ ವದಂತಿಗಳನ್ನು ಜನರು ನಂಬಬಾರದು. ಕೆಲವರು ಈಗಾಗಲೇ ವದಂತಿ ಹಬ್ಬಿಸುತ್ತಿದ್ದಾರೆ. ಲಸಿಕೆ ಪ್ರತಿ ಫಲಾನುಭವಿಗಳನ್ನೂ ತಲುಪುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸೋಂಕಿನ ಕಾರಣ 2020ರಲ್ಲಿ ನಿರಾಶೆ ಹಾಗೂ ಗಾಬರಿಯ ವಾತಾವರಣವಿತ್ತು. ಈಗ ಚಿಕಿತ್ಸೆಯ ಭರವಸೆಯೊಂದಿಗೆ 2021 ನಮ್ಮ ಮುಂದಿದೆ’ ಎಂದು ಮೋದಿ ಹೇಳಿದರು.

ಸೇವೆಯಲ್ಲಿ ಇರುವಾಗಲೇ ಸೋಂಕಿನಿಂದ ಮೃತಪಟ್ಟ ಆರೋಗ್ಯ ಕ್ಷೇತ್ರದ ಸಿಬ್ಬಂದಿ, ವಿಜ್ಞಾನಿಗಳು ಹಾಗೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದವರಿಗೆ ಗೌರವ ನಮನ ಸಲ್ಲಿಸಿದ ಮೋದಿ, ‘ಭಾರತದಲ್ಲೇ ಅಭಿವೃದ್ಧಿದಪಡಿಸಲಾಗಿರುವ ಲಸಿಕೆಯನ್ನು ಪ್ರತಿ ಅರ್ಹ ಫಲಾನುಭವಿಗೆ ನೀಡುವ ಪ್ರಯತ್ನ ಅಂತಿಮ ಹಂತದಲ್ಲಿದೆ’ ಎಂದರು.

‘ಇತರೆ ದೇಶಗಳಿಗೆ ಹೋಲಿಸಿದರೆ, ಸೋಂಕಿನ ಪ್ರಮಾಣ ಹಾಗೂ ಅದರಿಂದ ಆಗಿರುವ ಸಾವಿನ ಸಂಖ್ಯೆಯಲ್ಲಿ ಭಾರತದ ಸ್ಥಿತಿ ಉತ್ತಮವಾಗಿದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಂಡ ಸೂಕ್ತ ನಿರ್ಧಾರವೇ ಇದಕ್ಕೆ ಕಾರಣ’ ಎಂದರು.

1.5 ಲಕ್ಷ ಆರೋಗ್ಯ ಕೇಂದ್ರ: ‘ಭಾರತದಲ್ಲಿ ವೈದ್ಯಕೀಯ ಶಿಕ್ಷಣ ವೃದ್ಧಿಗೆ ಒತ್ತು ನೀಡುತ್ತಿದ್ದು, ಆರು ವರ್ಷದಲ್ಲಿ 10 ಹೊಸ ಏಮ್ಸ್‌ ಆರಂಭಿಸಲಾಗಿದೆ. ಈಗ ಹೊಸ ಏಮ್ಸ್‌ ಸ್ಥಾಪನೆಯಿಂದ 5 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ’ ಎಂದರು.

ರಾಜ್‌ಕೋಟ್‌ ನಗರದ ಹೊರವಲಯದ ಖಂಡೇರಿ ಹಳ್ಳಿಯಲ್ಲಿ 200 ಎಕರೆ ಪ್ರದೇಶದಲ್ಲಿ ಅಂದಾಜು 750 ಹಾಸಿಗೆ ಸಾಮರ್ಥ್ಯದ ಏಮ್ಸ್, ₹1,195 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 2022ರಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

‘ಮೊಡೆರ್ನಾ ಲಸಿಕೆ ಶೇ 94.1 ಪರಿಣಾಮಕಾರಿ‘

ನವದೆಹಲಿ (ಪಿಟಿಐ): ಅಮೆರಿಕದ ಜೈವಿಕ ತಂತ್ರಜ್ಞಾನ ಸಂಸ್ಥೆ ಮೊಡೆರ್ನಾ ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆ ಶೇ 94.1ರಷ್ಟು ಪರಿಣಾಮಕಾರಿ ಎಂದು ಲಸಿಕೆಯ ಮೂರನೇ ಹಂತದ ಪ್ರಯೋಗದಲ್ಲಿ ಕಂಡುಬಂದಿದೆ.

ಈ ಕುರಿತ ಅಧ್ಯಯನ ವರದಿ ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ. ‘ಲಸಿಕೆ ಪಡೆದ ನಂತರದ ಕೆಲ ತಿಂಗಳು ಸೋಂಕಿತರ ಆರೋಗ್ಯ ಸುಧಾರಣೆ ಆಗಿರುವುದು ದತ್ತಾಂಶದಲ್ಲಿ ದಾಖಲಾಗಿದೆ’ ಎಂದು ಸಂಶೋಧಕರು ಹೇಳಿದ್ದಾರೆ.

ಶೇ 96 ದಾಟಿದ ಗುಣಮುಖ ಪ್ರಮಾಣ

ನವದೆಹಲಿ: ‘ದೇಶದಲ್ಲಿ ಕೋವಿಡ್‌–19ನಿಂದ ಗುಣಮುಖರಾದವರ ಪ್ರಮಾಣ ಶೇ 96 ದಾಟಿದ್ದು, ಇದು ವಿಶ್ವದಲ್ಲೇ ಅತ್ಯಧಿಕ’ ಎಂದು ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.

ಪ್ರಸ್ತುತ 2.57 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಇದು ದೃಢಪಟ್ಟ ಒಟ್ಟು ಪ್ರಕರಣಗಳಲ್ಲಿ ಶೇ 2.51ರಷ್ಟು ಮಾತ್ರ ಎಂದು ಸಚಿವಾಲಯವು ಹೇಳಿದೆ. ಹೊಸದಾಗಿ 21,822 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 6,268 ಜನರು ಕೇರಳದವರು. 26,139 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 299 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT