ಭಾನುವಾರ, ಜೂನ್ 26, 2022
26 °C

ಅಂತ್ಯಕ್ರಿಯೆ ನಡೆದು 1 ಗಂಟೆ ಬಳಿಕ ಸಮಾಧಿ ಅಗೆದಾಗ ಮಗು ಜೀವಂತವಾಗಿರುವುದು ಪತ್ತೆ!

ಪಿಟಿಐ Updated:

ಅಕ್ಷರ ಗಾತ್ರ : | |

ಬನಿಹಾಲ್: ಮೃತಪಟ್ಟಿದೆ ಎಂದು ಘೋಷಿಸಲಾಗಿದ್ದ ನವಜಾತ ಶಿಶುವು ಸಮಾಧಿ ಮಾಡಿ ಒಂದು ಗಂಟೆ ಬಳಿಕ ಒತ್ತಾಯಪೂರ್ವಕವಾಗಿ ಸಮಾಧಿಯನ್ನು ತೋಡಿದಾಗ ಜೀವಂತವಾಗಿದ್ದ ಘಟನೆ ಜಮ್ಮು ಮತ್ತು ಕಾಶ್ಮೀರದ ಬನ್ನಿಹಾಳ್‌ನಲ್ಲಿ ನಡೆದಿದೆ.

ಏನಿದು ಘಟನೆ?: ಸೋಮವಾರ ಇಲ್ಲಿನ ಸರ್ಕಾರಿ ಉಪ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಗುವನ್ನು ಹುಟ್ಟಿದ ಕೂಡಲೇ ಮೃತಪಟ್ಟಿದೆ ಎಂದು ಘೋಷಿಸಲಾಗಿತ್ತು. ಬಳಿಕ, ಮಗುವನ್ನು ಹತ್ತಿರದ ಹಳ್ಳಿಯ ಸ್ಮಶಾನದಲ್ಲಿ ಮಣ್ಣು ಮಾಡಲಾಯಿತು. ಇದಕ್ಕೆ ತಗಾದೆ ತೆಗೆದ ಗ್ರಾಮದ ಸ್ಥಳೀಯರು ಮೃತದೇಹವನ್ನು ಹೊರತೆಗೆದು ನಿಮ್ಮೂರಿನಲ್ಲೇ ಸಮಾಧಿ ಮಾಡುವಂತೆ ಒತ್ತಾಯಿಸಿದ್ದಾರೆ. ಹೀಗಾಗಿ, ಸಮಾಧಿಯನ್ನು ಮತ್ತೆ ಅಗೆದು ಮಗುವಿನ ದೇಹವನ್ನು ಹೊರತೆಗೆಯಲಾಯ್ತು.

ಈ ಸಂದರ್ಭ ಮಗು ಜೀವಂತವಾಗಿರುವುದನ್ನು ಕಂಡು ಕುಂಟುಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದ ವಿರುದ್ಧ ಮಗುವಿನ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶಕ್ಕೆ ಮಣಿದ ಆಡಳಿತ ಮಂಡಳಿ, ಹೆರಿಗೆ ವಾರ್ಡ್‌ನ ಇಬ್ಬರು ನೌಕರರನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಲಾಗಿದೆ.

ಬಶ್ರತ್‌ ಅಹ್ಮದ್ ಗುಜ್ಜಾರ್ ಮತ್ತು ಶಮೀನಾ ಬೇಗಂ ಎಂಬುವವರಿಗೆ ಜನಿಸಿದ ಮಗು ಇದಾಗಿತ್ತು ಎಂದು ಸರ್ಪಂಚ್ ಮನ್ಸೂರ್ ವಾನಿ ಹೇಳಿದ್ದಾರೆ. ಈ ದಂಪತಿ ರಂಬನ್ ಜಿಲ್ಲೆಯ ಬನಿಹಾಲ್ ಪಟ್ಟಣದಿಂದ 3 ಕಿ.ಮೀ ದೂರದ ಬಂಕೂಟ್ ಹಳ್ಳಿಯವರಾಗಿದ್ಧಾರೆ.

ಹುಟ್ಟಿದ ಕೂಡಲೇ ಮಗು ಸತ್ತಿದೆ ಎಂದು ಘೋಷಿಸಲಾಯಿತು. ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಯಾರೊಬ್ಬರೂ ಮಗುವಿನತ್ತ ಗಮನ ಹರಿಸಿರಲಿಲ್ಲ ಎಂದು ವಾನಿ ಆರೋಪಿಸಿದ್ದು, ನೊಂದ ಕುಟುಂಬವು ಹಾಲನ್ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿತು ಎಂದು ಹೇಳಿದ್ದಾರೆ.

ಗ್ರಾಮದಲ್ಲಿ ಮಗುವಿನ ಅಂತ್ಯಸಂಸ್ಕಾರ ನೆರವೇರಿಸಿ ಹಿಂತಿರುಗುತ್ತಿದ್ದಾಗ, ಕೆಲವು ಸ್ಥಳೀಯರು ಅವರ ಸ್ಮಶಾನದಲ್ಲಿ ಮಗುವನ್ನು ಹೂತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಹೀಗಾಗಿ, ಸುಮಾರು ಒಂದು ಗಂಟೆಯ ನಂತರ ಸಮಾಧಿಯನ್ನು ಅಗೆಯಲು ಕುಟುಂಬವನ್ನು ಒತ್ತಾಯಿಸಿದರು. ಮಗುವನ್ನು ಸಮಾಧಿಯಿಂದ ಹೊರತೆಗೆದಾಗ ಮಗು ಜೀವಂತವಾಗಿರುವುದು ಕಂಡುಬಂದಿದೆ ಎಂದು ವಾನಿ ಹೇಳಿದರು. ಬಳಿಕ, ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

‘ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶ್ರೀನಗರದ ಆಸ್ಪತ್ರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಗಿದೆ’ ಎಂದು ವಾನಿ ತಿಳಿಸಿದ್ದಾರೆ.

ಇದನ್ನೂ ಓದಿ.. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು