ಮಿಲಿಟರಿಯ ಹೊಸ ನೇಮಕಾತಿ ಯೋಜನೆ ಘೋಷಣೆ: ಏನಿದು ಅಗ್ನಿವೀರರ ಅಗ್ನಿಪಥ್?

ನವದೆಹಲಿ: ಭಾರತೀಯ ಸೇನೆಯಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಎನ್ನುವ ನೇಮಕಾತಿ ಯೋಜನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಘೋಷಣೆ ಮಾಡಿದ್ದಾರೆ.
ಇನ್ನು ಮುಂದೆ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ–ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿ ‘ಅಗ್ನಿಪಥ್’ ಯೋಜನೆ ಜಾರಿಯಾಗಿದೆ. ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಅಗ್ನಿಪಥ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನವದೆಹಲಿಯಲ್ಲಿ ಮೂರೂ ಸೇನಾಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಅವರು ‘ಅಗ್ನಿಪಥ’ದ ಬಗ್ಗೆ ವಿವರಣೆ ನೀಡಿದರು. ‘ಭಾರತೀಯ ಸೇನೆಗೆ ಈ ಯೋಜನೆ ಹೊಸ ಮೈಲಿಗಲ್ಲಾಗಲಿದೆ. ಯುವಕ–ಯುವತಿಯರಿಗೆ ಉದ್ಯೋಗವಕಾಶ, ದೇಶಪ್ರೇಮ, ಶಿಸ್ತು ಬೆಳೆಸುವ ದೃಷ್ಟಿಯಿಂದ ಹಾಗೂ ಸಂಬಳ, ಪಿಂಚಣಿ ಕಡಿತಗೊಳಿಸುವ ಮೂಲಕ ತುರ್ತು ಶಸ್ತ್ರಾಸ್ತ್ರ ಖರೀದಿಗೆ ಹಣವನ್ನು ಮುಕ್ತಗೊಳಿಸುವ ಉದ್ದೇಶದಿಂದ ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸಲಾಗಿದೆ’ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
The Union Cabinet chaired by Prime Minister Shri @narendramodi today approved an attractive recruitment scheme for Indian youth to serve in the Armed Forces.
The scheme is called AGNIPATH and the youth selected under this scheme will be known as Agniveers. pic.twitter.com/ogrikrmhcz
— रक्षा मंत्री कार्यालय/ RMO India (@DefenceMinIndia) June 14, 2022
ಈ ವೇಳೆ ರಾಜನಾಥ್ ಸಿಂಗ್ ಜೊತೆ ಸೇನಾ ಪಡೆಯ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಏರ್ ಚೀಪ್ ಮಾರ್ಷಲ್ ವಿ.ಆರ್. ಚೌಧರಿ, ಅಡ್ಮಿರಲ್ ಆರ್. ಹರಿಕುಮಾರ್ ಹಾಜರಿದ್ದರು.
ಒಂದೂವರೆ ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ: ಪ್ರಧಾನಿ ನರೇಂದ್ರ ಮೋದಿ ಘೋಷಣೆ
ಏನಿದು ಅಗ್ನಿಪಥ್ ಯೋಜನೆ?
ನೂತನ ಅಗ್ನಿಪಥ್ ಯೋಜನೆ ಪ್ರಕಾರ ಸೇನೆಯ ಮೂರು ವಿಭಾಗಗಳಲ್ಲಿ ಆಸಕ್ತ ಯುವಕ–ಯುವತಿಯರು ತರಬೇತಿಯೂ ಸೇರಿದಂತೆ ನಾಲ್ಕು ವರ್ಷದ ಮಟ್ಟಿಗೆ ‘ಅಗ್ನಿವೀರ್’ ಎಂಬ ಹೆಸರಿನ ಯೋಧರಾಗಿ ಕೆಲಸ ಮಾಡಬಹುದಾಗಿದೆ.
ನಾಲ್ಕು ವರ್ಷದಲ್ಲಿ ಮೊದಲು 6 ತಿಂಗಳು ಕಠಿಣ ತರಬೇತಿ ಇರುತ್ತದೆ. 10 ನೇ ತರಗತಿ ಹಾಗೂ ಪಿಯುಸಿ ಪಾಸಾದವರು ಅಗ್ನಿವೀರರಾಗಲು ಅರ್ಹರು. ಇದಕ್ಕೆ ದೇಶದಾದ್ಯಂತ ಮೆರಿಟ್ ಅಧಾರದ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಇರಲಿದೆ.
17.5 ವರ್ಷ ಮೇಲ್ಪಟ್ಟ 34 ವರ್ಷ ವಯಸ್ಸಿನ ಒಳಗಿನ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಯುವಕ ಯುವತಿಯರು ಅಗ್ನಿವೀರರಾಗಲು ಅರ್ಜಿ ಸಲ್ಲಿಸಬಹುದು.
ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ ₹4.62 ಲಕ್ಷದಿಂದ ₹6.92 ಲಕ್ಷದವರೆಗೆ ಸಂಬಳದ ಪ್ಯಾಕೇಜ್ ಇರುತ್ತದೆ. ಅಂದರೆ ತಿಂಗಳಿಗೆ ₹30 ಸಾವಿರದಿಂದ ₹40 ಸಾವಿರವರೆಗೆ ಸಂಬಳ ಸಿಗಲಿದೆ. ಇದರಲ್ಲಿ ಉಚಿತವಾಗಿ ವೈದ್ಯಕೀಯ ವಿಮೆ ದೊರೆಯುತ್ತದೆ.
ನಾಲ್ಕು ವರ್ಷ ಸೇವೆ ಸಲ್ಲಿಸಿ ಬಿಡುಗಡೆ ಹೊಂದುವ ಅಗ್ನಿವೀರರಿಗೆ ಸುಮಾರು ₹11.70 ಲಕ್ಷ ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ತೆರಿಗೆ ಇರುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ ಅಗ್ನಿವೀರರು ನಿವೃತ್ತರಾದ ಮೇಲೆ ಅವರಿಗೆ ಪಿಂಚಣಿ ಇರುವುದಿಲ್ಲ.
ಅಗ್ನಿಪಥ್ ಯೋಜನೆಯ ಪ್ರಕಾರ ಸುಮಾರು ಗರಿಷ್ಠ 45 ಸಾವಿರ ಯುವಕ ಯುವತಿಯರನ್ನು ಸೇವೆಗೆ ಸೇರಿಸಿಕೊಳ್ಳಲಾಗುತ್ತದೆ. ಇದರಲ್ಲಿ ಶೇ 25 ರಷ್ಟು ಅಗ್ನಿವೀರರು ಸೇನೆಯಲ್ಲಿ 15 ವರ್ಷ ಅಧಿಕಾರೇತರ ಶ್ರೇಣಿಯಲ್ಲಿ ಕೆಲಸ ಮಾಡುತ್ತಾರೆ. ಹೊರ ಬಂದವರಿಗೆ ದೇಶದ ಕಾರ್ಪೊರೇಟ್ ವಲಯ ಸೇರಿದಂತೆ ನಾನಾ ವಲಯಗಳಲ್ಲಿ ಸೇವೆ ಸಲ್ಲಿಸಲು ಆದ್ಯತೆ ನೀಡಲಾಗುತ್ತದೆ.
ಅಗ್ನಿವೀರರು ತಮ್ಮ ನಾಲ್ಕು ವರ್ಷದ ಪಯಣದಲ್ಲಿ ಹುತಾತ್ಮರಾದರೆ ಅವರಿಗೆ ವಿಮೆ ಹೊರತುಪಡಿಸಿ ₹1 ಕೋಟಿ ಪರಿಹಾರ ನೀಡಲಾಗುವುದು. ಗಂಭೀರವಾಗಿ ಗಾಯಗೊಂಡರೆ ₹44 ಲಕ್ಷ ನೀಡಲಾಗುವುದು.
ಮುಂದಿನ ಮೂರು ತಿಂಗಳಲ್ಲಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆ ಆರಂಭವಾಗುವುದು ಎನ್ನಲಾಗಿದೆ. ನೂತನ ಅಗ್ನಿಪಥ್ ಯೋಜನೆಯು ಯುವಕ ಯುವತಿಯರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡುವುದಲ್ಲದೇ ಅವರಿಗೆ ಶಿಸ್ತು ಹಾಗೂ ದೇಶಪ್ರೇಮ ಬೆಳೆಸಲು ಪ್ರೋತ್ಸಾಹ ನೀಡುತ್ತದೆ ಎನ್ನಲಾಗಿದೆ.
#AgnipathRecruitmentScheme | On completion of the engagement period of 4 years, 'Agniveers' will be paid one-time 'SevaNidhi' package... which will be exempt from Income Tax. There shall be no entitlement to gratuity & pensionary benefits: Ministry of Defence pic.twitter.com/dFae7Qi9yx
— ANI (@ANI) June 14, 2022
ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಎನ್ಸಿಪಿ ನಾಯಕ ಶರದ್ ಪವಾರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.