ಗುರುವಾರ , ಜನವರಿ 21, 2021
29 °C
ಗಡಿಯಲ್ಲಿ ಬೀಡುಬಿಟ್ಟ ಅನ್ನದಾತರು

ದೆಹಲಿ: ಪಟ್ಟು ಸಡಿಲಿಸದ ರೈತರು; ರಾಜಧಾನಿ ಹೃದಯಭಾಗದಲ್ಲಿ ಪ್ರತಿಭಟನೆಗೆ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಕೇಂದ್ರ ಭಾಗ ಪ್ರವೇಶಿಸುವುದೇ ತಮ್ಮ ಧ್ಯೇಯ ಎಂದು ಪ್ರತಿಭಟನಾನಿರತ ರೈತರು ಶನಿವಾರ ಸ್ಪಷ್ಟಪಡಿಸಿದ್ದಾರೆ. ಪರ್ಯಾಯ ಆಯ್ಕೆಗಳನ್ನು ಒಪ್ಪದ ಅವರು, ಸಂಸತ್‌ ಭವನ ಬಳಿಯ ಜಂತರ್‌ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 

ಬುರಾರಿಯ ನಿರಂಕಾರಿ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವ ದೆಹಲಿ ಪೊಲೀಸರ ಪ್ರಸ್ತಾವವನ್ನು ರೈತರು ಒಪ್ಪಿಲ್ಲ. ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಚಲೋ ಆರಂಭಿಸಿರುವ ವಿವಿಧ ರೈತ ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಸಿಂಘು ಗಡಿಯಲ್ಲಿ ಮೂರು ದಿನಗಳಿಂದ ಬೀಡುಬಿಟ್ಟಿದ್ದಾರೆ.

‘ಕೇಂದ್ರ ಸರ್ಕಾರವು ಮತಗಳನ್ನು ಕೇಳುವಾಗ ದೆಹಲಿ ಮಧ್ಯಭಾಗದ ಜಂತರ್‌ಮಂತರ್‌ನಲ್ಲಿ ಸಮಾವೇಶ ನಡೆಸುತ್ತದೆ. ಆದರೆ ನಾವು ಪ್ರತಿಭಟನೆ ಮಾಡಲು ಮುಂದಾದರೆ ನಿರಂಕಾರಿ ಮೈದಾನ ನೀಡಲು ಮುಂದೆ ಬರುತ್ತಿದೆ. ನಾವೇನು ಅಲ್ಲಿ ಸತ್ಸಂಗ ಮಾಡಬೇಕೇ?’ ಎಂದು ಹರಿಯಾಣದ ರೈತ ಮನೀಶ್ ಕಡಿಯನ್ ಎಂಬುವರು ಪ್ರಶ್ನಿಸಿದ್ದಾರೆ.

ಮೊಳಗಿದ ಘೋಷಣೆ: ಈ ಮಧ್ಯೆ ದೆಹಲಿ ಪ್ರವೇಶಿಸುವಲ್ಲಿ ಕೆಲವು ರೈತರು ಯಶಸ್ವಿಯಾಗಿದ್ದು, ನಿರಂಕಾರಿ ಮೈದಾನ ಪ್ರವೇಶಿಸಿದ್ದಾರೆ. ಸುಮಾರು 400ಕ್ಕೂ ಹೆಚ್ಚು ರೈತರು ಉತ್ತರ ದೆಹಲಿಯ ಬುರಾರಿ ಮೈದಾನದಲ್ಲಿ ಶನಿವಾರ ಪ್ರತಿ ಭಟನೆ ಮುಂದುವರಿಸಿದರು. ದೆಹಲಿಗೆ ಬಂದಿರುವ ವಿವಿಧ ಸಂಘಟನೆಗಳ ರೈತರಿಗೆ ಬುರಾರಿ ಮೈದಾನದಲ್ಲಿ ಶಾಂತಿ ಯುತ ಪ್ರತಿಭಟನೆ ನಡೆಸಲು ಸರ್ಕಾರ ಅವಕಾಶ ನೀಡಿದೆ.

ಬಂಗಲಾ ಸಾಹಿಬ್ ಗುರುದ್ವಾರವು ಹಸಿದ ರೈತರ ಹೊಟ್ಟೆ ತುಂಬಿಸುತ್ತಿದೆ. ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವೂ ಊಟದ ವ್ಯವಸ್ಥೆ ಮಾಡಿದೆ. ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಎಂಟು ಪಕ್ಷಗಳ ಬೆಂಬಲ: ‘ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಿ, ನಗರ ಪ್ರವೇಶಿಸದ ಹಾಗೆ ಗಡಿಯ ರಸ್ತೆಗಳನ್ನು ಅಗೆಯುವ ಮೂಲಕ ಕೇಂದ್ರ ಸರ್ಕಾರವು ರೈತರ ವಿರುದ್ಧ ದಬ್ಬಾಳಿಕೆ ಹಾಗೂ ಸಮರ ಸಾರಿದೆ’ ಎಂದು ರಾಜಕೀಯ ಪಕ್ಷಗಳು ಆರೋಪಿಸಿವೆ.

ಕೇಂದ್ರದ ಕೃಷಿ ಕಾಯ್ದೆಗಳು ಆಹಾರ ಭದ್ರತೆಗೆ ಒಡ್ಡಿರುವ ಅಪಾಯಗಳು ಎಂದು ಎಂಟು ಪ್ರತಿಪಕ್ಷಗಳು ಹೊರಡಿಸಿ ರುವ ಜಂಟಿ ಹೇಳಿಕೆಯಲ್ಲಿ ಆರೋಪಿಸಿವೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ನಾಯಕ ಟಿ.ಆರ್. ಬಾಲು, ಸಿಪಿಎಂ ಪ್ರಧಾನ ಕಾರ್ಯ ದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಆರ್‌ಜೆಡಿ ಸಂಸದ ಮನೋಜ್ ಝಾ, ಸಿಪಿಐಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಎಐಎಫ್‌ಬಿಯ ದೇವವ್ರತ ಬಿಸ್ವಾಸ್ ಮತ್ತು ಆರ್‌ಎಸ್‌ಪಿ ಪ್ರಧಾನ ಕಾರ್ಯ ದರ್ಶಿ ಮನೋಜ್ ಭಟ್ಟಾಚಾರ್ಯ ಅವರು ರೈತರ ಪ್ರತಿಭಟನೆಗೆ ದೊಡ್ಡ ಮೈದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ದಂಗೆ ಪ್ರಕರಣ: ‘ದೆಹಲಿ ಚಲೋ’ ವೇಳೆ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಹರಿಯಾಣದ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ಗುರ್ನಾಮ್ ಸಿಂಗ್ ಚರುನಿ ಮತ್ತು ಇತರ ಏಳು ಮಂದಿ ವಿರುದ್ಧ ಕೊಲೆ ಯತ್ನ, ದಂಗೆಗೆ ಯತ್ನ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಪ್ರಧಾನಿ ಮೇಲೆ ಮುಗಿಬಿದ್ದ ಕಾಂಗ್ರೆಸ್
ಬೇಡಿಕೆಗೆ ಆಗ್ರಹಿಸಿ ದೆಹಲಿಗೆ ಬಂದಿರುವ ರೈತರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಬೇಕಿತ್ತು ಎಂದು ಕಾಂಗ್ರೆಸ್ ಶನಿವಾರ ಅಭಿಪ್ರಾಯಪಟ್ಟಿದೆ.

‘ಮೋದಿ ಅವರು ಕಾರ್ಪೊರೇಟ್ ಕಚೇರಿಗಳಲ್ಲಿ ಫೋಟೊಗೆ ಪೋಸ್‌ ನೀಡುವ ಬದಲು ರೈತರ ಜೊತೆ ಮಾತುಕತೆ ನಡೆಸಿದ್ದರೆ ಚೆನ್ನಾಗಿತ್ತು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರತಿಭಟನಾನಿರತ ರೈತರ ಹಾಗೂ ಬಂದೋಬಸ್ತ್ ಕರ್ತವ್ಯದಲ್ಲಿರುವ ಯೋಧನ ಫೋಟೊವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿಭಟನಾನಿರತರನ್ನು ಖಲಿಸ್ತಾನ್ ಪರವಾದವರು ಎಂದು ಬಿಂಬಿಸಲಾಗುತ್ತಿದೆ ಎಂದಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ‘ಮೋದಿ ಸರ್ಕಾರದ ವಿರುದ್ಧ ಯಾರೇ ಪ್ರತಿಭಟನೆ ನಡೆಸಿದರೂ ಅವರಿಗೆ ಭಯೋತ್ಪಾದಕ ಪಟ್ಟ ಕಟ್ಟಲಾಗುತ್ತದೆ’ ಎಂದು ಆರೋಪಿಸಿದ್ದಾರೆ. ರೈತರು ಹಾಗೂ ಪೊಲೀಸರು ಮುಖಾಮುಖಿಯಾಗಿರುವ ಚಿತ್ರಗಳನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಾಯೋಜಿತ ಪ್ರತಿಭಟನೆ: ಖಟ್ಟರ್
‘ಕೆಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ರೈತರ ಪ್ರತಿಭಟನೆಯನ್ನು ಪ್ರಾಯೋಜಿಸುತ್ತಿವೆ’ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಆರೋಪಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ವಿರುದ್ಧವೂ ಹರಿಹಾಯ್ದಿರುವ ಖಟ್ಟರ್, ಕೃಷಿ ಕಾನೂನುಗಳ ಕುರಿತು ಮಾತನಾಡಲು ಅವರು ಸಿದ್ಧರಿಲ್ಲ ಎಂದು ದೂರಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಕಚೇರಿ ಅಧಿಕಾರಿಗಳು ರೈತರ ಪ್ರತಿಭಟನೆಗೆ ಮಾರ್ಗದರ್ಶನ ನೀಡುತ್ತಿದ್ದು, ಇದರಲ್ಲಿ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆ ಶುರುಮಾಡಿದ್ದು ಪಂಜಾಬ್‌ನ ರೈತರು. ಇದರಲ್ಲಿ ಹರಿಯಾಣದ ರೈತರು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಾಫಿಕ್‌ ಸಮಸ್ಯೆ
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಪೊಲೀಸರು ಕ್ರಮ ತೆಗೆದುಕೊಂಡಿರುವ ಕಾರಣ, ದೆಹಲಿಯ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.

ಶನಿವಾರ ಕೆಲವು ಕಚೇರಿಗಳು ರಜೆ ಇದ್ದುದರಿಂದ ಶುಕ್ರವಾರದಷ್ಟು ಸಮಸ್ಯೆ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

*

ರಾಜಕೀಯ ಹಿತಾಸಕ್ತಿಗಾಗಿ ಕೆಲವರು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದರ ಹಿಂದೆ ಷಡ್ಯಂತ್ರ ಅಡಗಿದೆ.
-ಪೀಯೂಷ್ ಗೋಯಲ್, ಕೇಂದ್ರ ಸಚಿವ

*

ರೈತರ ಜತೆ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಡಿಸೆಂಬರ್ 3ಕ್ಕಿಂತ ಮೊದಲೇ ಮಾತು ಕತೆ ಆಗಬೇಕೆಂದರೆ ಅದಕ್ಕೂ ಸಿದ್ಧ.
-ಅಮಿತ್ ಶಾ, ಕೇಂದ್ರ ಗೃಹಸಚಿವ

*

ಬಿಜೆಪಿಯ ಸಿರಿವಂತ ಸ್ನೇಹಿತರು ದೆಹಲಿಗೆ ಬಂದಾಗ ಕೆಂಪುಹಾಸಿನ ಸ್ವಾಗತ ಸಿಗುತ್ತದೆ. ಆದರೆ ರೈತರು ಪ್ರವೇಶಿಸಿದರೆ ರಸ್ತೆಗಳನ್ನು ಅಗೆಯಲಾಗುತ್ತದೆ. ಹೀಗಿದೆ ಸರ್ಕಾರದ ವೈಖರಿ
-ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು