ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆ | ಎಎಪಿ ಜನಪ್ರಿಯತೆಯಿಂದ ಬಿಜೆಪಿಗೆ ದಿಗಿಲು: ಕೇಜ್ರಿವಾಲ್‌

Last Updated 19 ಸೆಪ್ಟೆಂಬರ್ 2022, 4:39 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ‘ಗುಜರಾತ್‌ ಚುನಾವಣೆಯಲ್ಲಿ ಸೋಲುವ ಭೀತಿ ಬಿಜೆಪಿಯನ್ನು ಕಾಡುತ್ತಿದೆ. ಆದ್ದರಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಎನ್ನುವ ಹೆಸರಿನಲ್ಲಿ ಆಮ್‌ ಆದ್ಮಿ ಪಕ್ಷವನ್ನು ಹೊಸಕಿ ಹಾಕಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಇದೇ ಮೊದಲ ಬಾರಿಗೆ, ಜನಪ್ರತಿನಿಧಿಗಳ ರಾಷ್ಟ್ರೀಯ ಸಮ್ಮೇಳನವನ್ನು ಭಾನುವಾರ ಇಲ್ಲಿ ಎಎಪಿ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ನಮ್ಮ ಪಕ್ಷದ ಸಚಿವರು ಹಾಗೂ ನಾಯಕರನ್ನು ಭ್ರಷ್ಟಾಚಾರದ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಏಕೆಂದರೆ, ಗುಜರಾತ್‌ನಲ್ಲಿ ಎಎಪಿ ಬಗೆಗೆ ಜನರು ತೋರಿಸುತ್ತಿರುವ ಪ್ರೀತಿಯು ಬಿಜೆಪಿಯಲ್ಲಿ ದಿಗಿಲು ಹುಟ್ಟಿಸಿದೆ’ ಎಂದರು.

‘ರೇವ್ಡಿ ಸಂಸ್ಕೃತಿ’ ಕುರಿತು ಪ್ರಧಾನಿ ಮೋದಿ ಮಾತನಾಡಿರುವುದನ್ನು ಪ್ರಸ್ತಾಪಿಸಿದ ಅವರು, ‘ಉಚಿತ ಕೊಡುಗೆಗಳು ದೇಶದ ಆರ್ಥಿಕತೆಗೆ ಮಾರಕವಾದುದು ಎನ್ನುವ ಮೂಲಕ ಎಎಪಿಯ ಉಚಿತ ಕೊಡುಗೆಗಳನ್ನು ಪ್ರಧಾನಿ ಮೋದಿ ಅವರು ಟೀಕಿಸಿದ್ದಾರೆ. ಒಬ್ಬ ಅಪ್ರಾಮಾಣಿಕ, ಒಬ್ಬ ಭ್ರಷ್ಟ ಮತ್ತು ಒಬ್ಬ ದೇಶದ್ರೋಹಿ ಮಾತ್ರವೇ ಈ ರೀತಿ ಹೇಳಲು ಸಾಧ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉಚಿತ ಕೊಡುಗೆಗಳು ದೇಶವೊಂದರ ಆರ್ಥಿಕತೆಗೆ ಮಾರಕ ಎಂದು ಯಾರೇ ರಾಜಕಾರಣಿ ಹೇಳಿದರೆ, ಆತನ ಉದ್ದೇಶಗಳು ಸರಿಯಿಲ್ಲ ಎಂದೇ ಭಾವಿಸಬೇಕು’ ಎಂದರು.

ನಾಲ್ವರ ಬಂಧನ: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಶುಕ್ರವಾರ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ಶಕೀಲ್‌ ಅಹಮದ್‌ (45), ಅಫ್ಸಾರ್‌ (20), ಅನ್ವರ್‌ (31) ಮತ್ತು ಸಿಕಂದರ್‌ (45) ಅವರನ್ನು ಶನಿವಾರ ಬಂಧಿಸಲಾಗಿದೆ. ಈ ಕುರಿತ ತನಿಖೆ ಪ್ರಗತಿಯಲ್ಲಿದೆ’ ಎಂದು ಪೊಲೀಸರು ಭಾನುವಾರ ತಿಳಿಸಿದರು.

ಎಸಿಬಿ ಅಧಿಕಾರಿಗಳ ಕರ್ತ್ಯವಕ್ಕೆ ಅಡ್ಡಿಪಡಿಸುತ್ತಿರುವ ಅಮಾನತುಲ್ಲಾ ಬೆಂಬಲಿಗರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಗುಂಪೊಂದು ಎಸಿಬಿ ಅಧಿಕಾರಿಗಳನ್ನು ಸುತ್ತುವರಿದು, ಎಳೆದಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ‘ನೀವು ಏಕೆ ಇಲ್ಲಿಗೆ ಬಂದಿದ್ದೀರಿ’ ಎಂದು ಗುಂಪಿನಲ್ಲಿದ್ದ ಒಬ್ಬರು ಅಧಿಕಾರಿಗಳನ್ನು ಪ್ರಶ್ನಿಸಿದ ತುಣುಕೂ ವಿಡಿಯೊದಲ್ಲಿದೆ.

'ಪ್ರಧಾನಿ ಸಲಹೆಗಾರರಿಂದ ಸಂಪಾದಕರಿಗೆ ಬೆದರಿಕೆ'
‘ಗುಜರಾತ್‌ನಲ್ಲಿ ಎಎಪಿ ಜನಪ್ರಿಯತೆ ಬಗ್ಗೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಎಷ್ಟು ದಿಗಿಲುಗೊಂಡಿದ್ದಾರೆ ಎಂದರೆ, ಪ್ರಧಾನಿ ಅವರ ಸಲಹೆಗಾರ ಹಿರೇನ್‌ ಜೋಷಿ ಅವರು ಗುಜರಾತ್‌ನ ಹಲವು ಸುದ್ದಿವಾಹಿನಿಗಳ ಮಾಲೀಕರು ಹಾಗೂ ಸಂಪಾದಕರಿಗೆ, ಎಎಪಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಕೇಜ್ರಿವಾಲ್‌ ಆರೋಪಿಸಿದರು.

‘ಬೆದರಿಕೆ ಹಾಕುವುದನ್ನು ನಿಲ್ಲಿಸಿ. ಒಂದು ವೇಳೆ ಸುದ್ದಿ ವಾಹಿನಿಗಳ ಸಂಪಾದಕರು ಜೋಷಿ ಅವರು ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಬಹಿರಂಗಗೊಳಿಸಿದರೆ, ಪ್ರಧಾನಿ ಮತ್ತವರ ಸಲಹೆಗಾರ ಇಬ್ಬರೂ ದೇಶದ ಜನರಿಗೆ ಮುಖ ತೋರಿಸಲೂ ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

‘ಇದೇ ಕಾರಣಕ್ಕಾಗಿಯೇ ಮನೀಷ್‌ ಸಿಸೋಡಿಯಾ ವಿರುದ್ಧದ ಆರೋಪದ ಕುರಿತು ಸುದ್ದಿ ವಾಹಿನಿಗಳು ನಡೆಸಿದ ಚರ್ಚೆಗೆ ನಮ್ಮನ್ನು ಆಹ್ವಾನಿಸಲಿಲ್ಲ’ ಎಂದು ಅವರು ಹೇಳಿದರು.

ಆದರೆ, ಈ ಕುರಿತು ಹಿರೇನ್‌ ಜೋಷಿ ಅವರಾಗಲಿ, ಪ್ರಧಾನಿ ಕಚೇರಿಯಾಗಲಿ ಪ್ರತಿಕ್ರಿಯಿಸಿಲ್ಲ.

ಸ್ವಪ್ರತಿಷ್ಠೆಯ ವ್ಯಕ್ತಿ: ಬಿಜೆಪಿ ಟೀಕೆ
‘ಎರಡು ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಕೇಜ್ರಿವಾಲ್‌ ಅವರು ತಮ್ಮನ್ನು ತಾವು ದೇವರು ಎಂದು ಭಾವಿಸಿದ್ದಾರೆ. ಅವರೊಬ್ಬ ಸ್ವಪ್ರತಿಷ್ಠೆಯ ವ್ಯಕ್ತಿ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಭಾನುವಾರ ಟೀಕಿಸಿದ್ದಾರೆ.

ಕೇಜ್ರಿವಾಲ್ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ‘ಯಾವುದೇ ಸರ್ಕಾರದಲ್ಲಿಯೂ ವಿವಿಧ ಆರೋಪಗಳಕಾರಣಕ್ಕಾಗಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಚಿವರು ರಾಜೀನಾಮೆ ನೀಡಿದ್ದು ಇಲ್ಲ’ ಎಂದು ಜಿತೇಂದರ್‌ ಸಿಂಗ್ ತೋಮರ್‌ ಮತ್ತು ಸಂದೀಪ್‌ ಸಿಂಗ್ ಮತ್ತು ಇತರರ ರಾಜೀನಾಮೆಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ. ಆದರೆ, ಕೇಜ್ರಿವಾಲ್‌ ಅವರು ಭಷ್ಟಾಚಾರವನ್ನು ವೈಭವೀಕರಿಸಿಕೊಂಡು ಓಡಾಡುತ್ತಿದ್ದಾರೆ ಎಂದೂ ಟೀಕಿಸಿದ್ದಾರೆ.

‘ಯಾರು ಪ್ರಾಮಾಣಿಕ, ಯಾರು ಅಪ್ರಾಮಾಣಿಕ ಎಂಬ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗಿಂತಲೂ ಕೇಜ್ರಿವಾಲ್‌ ಅವರು ನೀಡುವ ಪ್ರಮಾಣಪತ್ರವೇ ಮುಖ್ಯ ಎಂದು ಅವರು ಭಾವಿಸಿದ್ದಾರೆ’ ಎಂದು ಟೀಕಿಸಿದರು.

*

ತಮ್ಮ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರೂ ಹೆದರಿದ್ದಾರೆ ಎಂದು ಕೇಜ್ರಿವಾಲ್‌ ಹೇಳದಿರುವುದು ಆಶ್ಚರ್ಯದ ಸಂಗತಿ.
-ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT