ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ರವಿ ಜಾಮೀನು ಅರ್ಜಿ ಆದೇಶವನ್ನು ಫೆ.23ಕ್ಕೆ ಕಾದಿರಿಸಿದ ನ್ಯಾಯಾಲಯ

Last Updated 20 ಫೆಬ್ರುವರಿ 2021, 12:41 IST
ಅಕ್ಷರ ಗಾತ್ರ

ನವದೆಹಲಿ: ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಜಾಮೀನು ಅರ್ಜಿಯ ಬಗೆಗಿನ ಆದೇಶವನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಫೆ.23ಕ್ಕೆ ಕಾಯ್ದಿರಿಸಿದೆ.

ಟೂಲ್‌ಕಿಟ್‌ ಹಂಚಿಕೊಂಡ ಆರೋಪದಡಿ ದೆಹಲಿ ಪೊಲೀಸರಿಂದ ಬಂಧನವಾಗಿರುವ ದಿಶಾ ರವಿ ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ದಿಶಾ ರವಿ ಜಾಮೀನು ಅರ್ಜಿ ವಿಚಾರಣೆಯನ್ನು ಇಂದು(ಶನಿವಾರ) ನಡೆಸಿರುವ ನ್ಯಾಯಾಲಯವು ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.

'ದಿಶಾ ರವಿ ಅವರು ಯಾವುದೇ ಪಿತೂರಿಯ ಭಾಗವಾಗಿಲ್ಲ. ಅವರು ಉದ್ದೇಶಗಳೆಲ್ಲವೂ ಪರಿಸರ ಮತ್ತು ರೈತರ ಒಳಿತಿಗಾಗಿ ಇವೆ. ಖಲಿಸ್ತಾನಿ ಚಳುವಳಿಗೂ, ಅವರಿಗೂ ಯಾವುದೇ ಸಂಬಂಧವಿಲ್ಲ' ಎಂದು ದಿಶಾ ಪರ ವಕೀಲ ಸಿದ್ದಾರ್ಥ ಅಗರ್‌ವಾಲ್‌ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

ಇದಕ್ಕೆ ಪ್ರತಿವಾದ ಮಂಡಿಸಿರುವ ದೆಹಲಿ ಪೊಲೀಸರ ಪರ ವಕೀಲರು, 'ಭಾರತದ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ಹೆಣೆಯಲಾದ ಜಾಗತಿಕ ಪಿತೂರಿಯ ಭಾಗವಾಗಿ ದಿಶಾ ರವಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಜಾಮೀನು ನೀಡುವುದು ಸಮಂಜಸವಲ್ಲ' ಎಂದು ಹೇಳಿದ್ದಾರೆ.

'ಇದು ಸರಳ ಅಥವಾ ಮುಗ್ಧರು ತಯಾರಿಸಿರುವ ಟೂಲ್‌ಕಿಟ್‌ ಅಲ್ಲ. ಇದರಲ್ಲಿ ಖಲಿಸ್ತಾನಿ ಚಳವಳಿಯ ಬಗ್ಗೆ ಉಲ್ಲೇಖವಿದೆ' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ‘ಟೂಲ್‌ಕಿಟ್‌’ ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವಾಗಿದೆ.

ಇದಕ್ಕೂ ಮೊದಲು ತನಿಖೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಪೊಲೀಸರು ಮಾಧ್ಯಮಗಳಿಗೆ ಸೋರಿಕೆ ಮಾಡದಂತೆ ತಡೆಯಲು ದಿಶಾ ರವಿ ಅವರು ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು.

ತನ್ನ ಮತ್ತು ಮೂರನೇ ವ್ಯಕ್ತಿಗಳ ನಡುವೆ ನಡೆದಿರುವ ವಾಟ್ಸ್‌ಆ್ಯಪ್‌ ಸಂದೇಶ ಸೇರಿದಂತೆ ಯಾವುದೇ ಖಾಸಗಿ ಚಾಟ್‌ಗಳ ವಿಷಯಗಳನ್ನು ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ತಡೆ ಹೇರುವಂತೆಯೂ ಅರ್ಜಿಯಲ್ಲಿ ಕೋರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT