ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಘು ಗಡಿ ಬಳಿ ಹತ್ಯೆ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹ

Last Updated 16 ಅಕ್ಟೋಬರ್ 2021, 20:43 IST
ಅಕ್ಷರ ಗಾತ್ರ

ತರ್ನ್ ತರನ್, ಪಂಜಾಬ್: ಸಿಂಘು ಗಡಿಯ ಬಳಿ ನಡೆದಿದ್ದ ದಲಿತ ಕೃಷಿ ಕಾರ್ಮಿಕ ಲಖ್‌ಬಿರ್‌ ಸಿಂಗ್ ಭೀಕರ ಹತ್ಯೆ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಗೆ ಅವರ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.

‘ಲಖ್‌ಬಿರ್‌ ಸಿಂಗ್‌ ಅವರಿಗೆ ದೇವರ ಬಗ್ಗೆ ಭಯ, ಭಕ್ತಿ ಇತ್ತು. ಅವರು ಧರ್ಮಗ್ರಂಥಕ್ಕೆ ಅಗೌರವ ತೋರುವ ಬಗ್ಗೆ ಎಂದಿಗೂ ಚಿಂತನೆ ಮಾಡಿರಲಿಲ್ಲ‘ ಎಂದು ಕುಟುಂಬದ ಸದಸ್ಯರು ಪ್ರತಿಪಾದಿಸಿದ್ದಾರೆ.

ಸಿಖ್‌ ಧರ್ಮಗ್ರಂಥಕ್ಕೆ ಅಗೌರವ ತೋರಿದ್ದರು ಎಂದು ಆರೋಪಿಸಿ ಸಿಖ್‌ ಸಂಘಟನೆಯೊಂದರ ಸದಸ್ಯರು ಕೃಷಿ ಕಾರ್ಮಿಕನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ಮೃತನ ಪತ್ನಿ ಜಸ್‌ಪ್ರೀತ್‌ ಕೌರ್, 12, 11 ಮತ್ತು 8 ವರ್ಷ ವಯಸ್ಸಿನ ಮೂವರು ಹೆಣ್ಣು ಮಕ್ಕಳು ತಾತ್ಕಾಲಿಕ ಗುಡಿಸಿಲಿನಲ್ಲಿ ಚೀಮಾ ಕಲನ್ ಗ್ರಾಮದಲ್ಲಿ ವಾಸವಿದ್ದರು. ಅವರ ಮಗ ಎರಡು ವರ್ಷದ ಹಿಂದೆ ತೀರಿಕೊಂಡಿದ್ದ.

‘ಲಖ್‌ಬಿರ್ ದುಡಿಯುವಾಗ ಕುಟುಂಬಕ್ಕೆ ಎರಡು ಹೊತ್ತು ಊಟ ಸಿಗುತ್ತಿದ್ದು, ಆತನೇ ಆಧಾರವಾಗಿದ್ದ. ಈಗ ಆತನ ಕುಟುಂಬಕ್ಕೆ ಯಾರು ಆಧಾರ. ಯಾರು ನೆರವಾಗುತ್ತಾರೆ’ ಎಂದು ಮೃತನ ತಂಗಿ ರಾಜ್‌ ಕೌರ್ ಪ್ರಶ್ನಿಸಿದರು.

35 ವರ್ಷದ ಲಖ್‌ಬಿರ್‌ನ ಶವವನ್ನು ತಿರುವುಮುರುವಾಗಿ ಪೊಲೀಸ್‌ ಬ್ಯಾರಿಕೇಡ್‌ಗೆ ಕಟ್ಟಲಾಗಿತ್ತು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಿಂಘು ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದ ಸ್ಥಳದ ಸಮೀಪವೇ ಶವ ‍ಪತ್ತೆಯಾಗಿದ್ದು, ಎಡಗೈಯನ್ನು ಕತ್ತರಿಸಲಾಗಿತ್ತು. ದೇಹದಲ್ಲಿ ಹಲವು ಗಾಯದ ಗುರುತುಗಳಿದ್ದವು. ಸಿಖ್‌ ಧರ್ಮ ಗ್ರಂಥಕ್ಕೆ ಅಗೌರವ ತೋರಿದ್ದಕ್ಕಾಗಿ ತಾನೇ ಹತ್ಯೆ ಮಾಡಿದ್ದಾಗಿತದನಂತರ ಸರಬ್‌ಜಿತ್ ಸಿಂಗ್‌ ಎಂಬಾತ ಒಪ್ಪಿಕೊಂಡಿದ್ದ.

ಧರ್ಮಗ್ರಂಥಕ್ಕೆ ಅಗೌರವ ತೋರಿದ ಎಂಬ ಹೇಳಿಕೆಯನ್ನು ನಿರಾಕರಿಸಿರುವ ಜಸ್‌ಪ್ರೀತ್‌ ಕೌರ್ ಮತ್ತು ರಾಜ್‌ ಕೌರ್ ಅವರು, ಲಖ್‌ಬಿರ್‌ಗೆ ಧರ್ಮಗ್ರಂಥದ ಮೇಲೆ ಅಪಾರ ಗೌರವವಿತ್ತು ಎಂದು ಹೇಳಿದ್ದಾರೆ. ಆತ ಗುರುದ್ವಾರಕ್ಕೆ ಭೇಟಿ ನೀಡಿದ್ದಾಗಲೆಲ್ಲಾ ಕುಟುಂಬ ಮತ್ತು ಸಮಾಜದ ಹಿತಕ್ಕಾಗಿ ಪ್ರಾರ್ಥಿಸುತ್ತಿದ್ದ ಎಂದು ಹೇಳಿದರು.

ಆತನ ವಿರುದ್ಧ ಕ್ರಿಮಿನಲ್ ದಾಖಲೆಗಳಿಲ್ಲ. ಕೆಟ್ಟ ವರ್ತನೆ ಕುರಿತ ದೂರುಗಳು ಇರಲಿಲ್ಲ. ಈ ಅಂಶಗಳ ಹಿನ್ನೆಲೆಯಲ್ಲಿ ಕೃತ್ಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.

ಭದ್ರತೆ ಚುರುಕು:ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧಾರ

ಸಿಂಘು ಗಡಿಯಲ್ಲಿ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಿದ್ದು, ಭದ್ರತೆ ಬಿಗಿಪಡಿಸಲಾಗುವುದು ಎಂದು ರೈತ ಮುಖಂಡರು ಹೇಳಿದ್ದಾರೆ.

ಈ ಘಟನೆಯು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಿಂಘು ಗಡಿಯ ಬಳಿ ನಡೆಯುತ್ತಿರುವ ಪ್ರತಿಭಟನೆಯ ಮೇಲೆ ಯಾವುದೇ ಪರಿಣಾಮ ಬೀರದು. ಕಾರ್ಯಕರ್ತರ ಹಾಜರಾತಿ ಹೆಚ್ಚುತ್ತಿದೆ ಎಂದು ಹೇಳಿದರು.

ಕೃಷಿಕರ ಕೇಂದ್ರ ಸಂಘಟನೆಯಾದ ಸಂಯುಕ್ತ ಕಿಸಾನ್‌ ಮೋರ್ಚಾ, ಈ ಘಟನೆಯಿಂದ ದೂರ ಉಳಿಯಲು ನಿರ್ಧರಿಸಿತು. ಮೃತ ವ್ಯಕ್ತಿ, ನಿಹಾಂಗ್ ಗುಂಪಿಗೂ ಮೋರ್ಚಾಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿತು.

ಗಾಜಿಪುರ್‌ನಲ್ಲಿ ಪ್ರತಿಭಟನೆ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್‌, ಪ್ರತಿಭಟನಾ ಸ್ಥಳದಲ್ಲಿ ಮುಂಜಾಗ್ರತೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇವೆ ಎಂದು ತಿಳಿಸಿತು.

ಮಾಯಾವತಿ ಖಂಡನೆ, ಪರಿಹಾರಕ್ಕೆ ಆಗ್ರಹ

ಕೃಷಿಕರು ಪ್ರತಿಭಟನೆ ನಡೆಸುತ್ತಿದ್ದ ದೆಹಲಿ,ಹರಿಯಾಣ ಗಡಿ ಭಾಗದಲ್ಲಿ ದಲಿತ ವ್ಯಕ್ತಿಯ ಭೀಕರ ಹತ್ಯೆ ಪ್ರಕರಣವು ನಾಚಿಕೆಗೇಡಿನದು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥ ಮಾಯಾವತಿ ಹೇಳಿದ್ದಾರೆ.

ಪಂಜಾಬ್‌ ಮುಖ್ಯಮಂತ್ರಿಯು ಮೃತನ ಕುಟುಂಬಕ್ಕೆ ₹ 50 ಲಕ್ಷ ಆರ್ಥಿಕ ನೆರವು ಒದಗಿಸಬೇಕು. ಅವಲಂಬಿತರಿಗೆ ನೌಕರಿ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆರೋಪಿ ಪೊಲೀಸ್‌ ವಶಕ್ಕೆ

ಸೋನಿಪತ್‌: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ನಡೆದಿದ್ದ ಭೀಕರ ಹತ್ಯೆ ಪ್ರಕರಣದ ಆರೋಪಿ, ಸರಬ್ಜಿತ್‌ ಸಿಂಗ್‌ನನ್ನು ಏಳು ದಿನಗಳ ಪೊಲೀಸ್‌ ವಶಕ್ಕೆ ಶನಿವಾರ ನೀಡಲಾಯಿತು.

ಪ್ರಕರಣಕ್ಕೆ ಸಂಬಂಧಿಸಿದ ಎರಡನೇ ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ಸಿಖ್‌ ನಿಹಾಂಗ್‌ ಪಂಗಡಕ್ಕೆ ಸೇರಿರುವ ನರೈನ್‌ ಸಿಂಗ್‌ ಬಂಧಿಸಲ್ಪಟ್ಟಿರುವ ಎರಡನೇ ಆರೋಪಿ. ಅಮೃತಸರದ ಅಮರ್‌ಕೋಟ್‌ ಗ್ರಾಮದ ಬಳಿ ಆತನನ್ನು ಅಮೃತಸರ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT