ಗೋವಾ: ಈ ತಿಂಗಳ ಆರಂಭದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ದೆಹಲಿಯ ಕುಟುಂಬವೊಂದರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗೋವಾ ಪೊಲೀಸರು ಮೂವರನ್ನು ಕೊಲೆ ಯತ್ನ ಆರೋಪದಡಿ ಬಂಧಿಸಿದ್ದಾರೆ.
ದೆಹಲಿ ಮೂಲದ ಪ್ರವಾಸಿಗರ ಕುಟುಂಬದ ಮೇಲೆ ಇಲ್ಲಿನ ಅಂಜುನಾ ಪ್ರದೇಶದಲ್ಲಿ ದಾಳಿ ನಡೆದಿದೆ. ದಾಳಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಘಟನೆಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.
ದೆಹಲಿ ನಿವಾಸಿ 47 ವರ್ಷದ ಅಶ್ವಿನಿ ಕುಮಾರ್ ಚಂದ್ರಾನಿ ಎಂಬುವವರ ಮೇಲೆ ಮಾರ್ಚ್ 5 ರಂದು ಸಂಜೆ 5 ಗಂಟೆ ಸುಮಾರಿಗೆ ಅಂಜುನ ಪ್ರದೇಶದ ಗುಂಪೊಂದು ದಾಳಿ ನಡೆಸಿದೆ. ಬೆಲ್ಟ್, ಬೇಸ್‌ಬಾಲ್ ಬ್ಯಾಟ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಅಶ್ವಿನಿ ಕುಮಾರ್ ದೇಹದ ತುಂಬ ಚಾಕು ಇರಿತದ, ಕತ್ತಿಯಿಂದ ಗಾಯಗಳಿವೆ. ರಕ್ತ ಸ್ರಾವವಾಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ದಾಳಿಯಲ್ಲಿ ಕುಟುಂಬದವರು ಗಾಯಗೊಂಡಿದ್ದಾರೆ. ರೋಷನ್ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತನಿಖೆಯ ಸಂದರ್ಭದಲ್ಲಿ, ದೇಹದ ಪ್ರಮುಖ ಭಾಗಗಳ ಮೇಲೆ ಚಾಕು ಮತ್ತು ಇತರ ಆಯುಧಗಳಿಂದ ಹಲ್ಲೆ ನಡೆಸಿರುವುದು ಗೊತ್ತಾಗಿದೆ. ಸೆಕ್ಷನ್ 307ರ ಅನ್ವಯ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಅಂಜುನಾ ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ, ಪೊಲೀಸರು ದಾಳಿಯ ಆರೋಪಿಗಳನ್ನು ಗುರುತಿಸಿದ್ದಾರೆ. ಸ್ಥಳೀಯ ನಿವಾಸಿಗಳಾದ ರಾಯ್‌ಸ್ಟನ್ ರೆಜಿನಾಲ್ಡೋ ಡಯಾಸ್ ಮಿತ್ರರಾದ ರೋಶನ್, ನೈರಾನ್ ರೆಜಿನಾಲ್ಡೋ ಡಯಾಸ್ ಅವರನ್ನು ಬಂಧಿಸಲಾಗಿದೆ. ದಾಳಿಯಲ್ಲಿ ಭಾಗಿಯಾಗಿರುವ ಇತರರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.