ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

BBC ಸಾಕ್ಷ್ಯಚಿತ್ರ ವಿವಾದ: ದೆಹಲಿ ವಿವಿ ಆವರಣದಲ್ಲಿ ಗದ್ದಲ; ತನಿಖೆಗೆ ಸಮಿತಿ ರಚನೆ

Last Updated 28 ಜನವರಿ 2023, 10:16 IST
ಅಕ್ಷರ ಗಾತ್ರ

ನವದೆಹಲಿ: ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರ ಪ್ರದರ್ಶನದ ವಿಚಾರವಾಗಿ ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದ ಸಿಬ್ಬಂದಿ ಕಟ್ಟಡದ ಹೊರಗೆ ಜನವರಿ 27ರಂದು (ಶುಕ್ರವಾರ) ಗದ್ದಲ ಸೃಷ್ಟಿಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ವಿಶ್ವವಿದ್ಯಾಲಯವು 7 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.

ವಿಶ್ವವಿದ್ಯಾಲಯದ ಶಿಸ್ತುಪಾಲನಾಧಿಕಾರಿ ರಜನಿ ಅಬ್ಬಿ ಅವರು ಸಮಿತಿಯ ನೇತೃತ್ವ ವಹಿಸಿಕೊಂಡಿದ್ದು, ವಿವಿಯ ಉಪಕುಲಪತಿಯವರಿಗೆ ಜನವರಿ 30ರ ಸಂಜೆ 5ರ ಒಳಗೆ ವರದಿ ಸಲ್ಲಿಸಲಿದ್ದಾರೆ.

ವಿವಿಯ ಆವರಣದಲ್ಲಿ ಶಿಸ್ತು ಜಾರಿ ಮತ್ತು ಕಾನೂನು–ಸುವ್ಯವಸ್ಥೆ ಕಾಪಾಡುವ ಸಲುವಾಗಿ ಉಪಕುಲಪತಿಯವರು ಸಮಿತಿ ರಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಾಣಿಜ್ಯ ವಿಭಾಗದ ಪ್ರೊ. ಅಜಯ್‌ ಕುಮಾರ್‌ ಸಿಂಗ್‌, ಜಂಟಿ ಶಿಸ್ತುಪಾಲನಾಧಿಕಾರಿ ಪ್ರೊ.ಮನೋಜ್‌ ಕುಮಾರ್‌ ಸಿಂಗ್, ಸಾಮಾಜಿಕ ಅಧ್ಯಯನ ವಿಭಾಗದ ಪ್ರೊ. ಸಂಜಯ್‌ ರಾಯ್‌, ಹಂಸರಾಜ್‌ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮಾ, ಕಿರೋರಿಮಲ್‌ ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್‌ ಖಟ್ಟರ್‌ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಗಜೆ ಸಿಂಗ್‌ ಅವರು ಸಮಿಯಲ್ಲಿರುವ ಇತರರು.

'ಸಮಿತಿಯು ಮುಖ್ಯವಾಗಿ ದೆಹಲಿ ವಿಶ್ವವಿದ್ಯಾಯಲದ ಪ್ರವೇಶ ದ್ವಾರ ಸಂಖ್ಯೆ 4ರ ಎದುರು ಇರುವ ಕಲಾ ವಿಭಾಗದ ಸಿಬ್ಬಂದಿ ಕಟ್ಟಡದ ಹೊರಗೆ 2023ರ ಜನವರಿ 27ರಂದು (ಶುಕ್ರವಾರ) ನಡೆದ ಘಟನೆಯ ಬಗ್ಗೆ ಗಮನ ಹರಿಸಲಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ಶುಕ್ರವಾರ ಬಿಬಿಸಿಯ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ವಿವಿಯ ಆಡಳಿತಾಧಿಕಾರಿಗಳು ಮಧ್ಯಪ್ರವೇಶಿಸಿದರೂ ಗದ್ದಲ ಸೃಷ್ಟಿಯಾಗಿತ್ತು.

ನ್ಯಾಷನಲ್‌ ಸ್ಟೂಡೆಂಟ್‌ ಯೂನಿಯನ್‌ ಆಫ್‌ ಇಂಡಿಯಾ (ಎನ್‌ಎಸ್‌ಯುಐ) ಸಂಘಟನೆಗೆ ಸೇರಿದ 24 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಹೊರಗಿನವರು ಸಾಕ್ಷ್ಯಚಿತ್ರ ಪದರ್ಶನಕ್ಕೆ ಮುಂದಾಗಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ವಿವಿಯು ಹೇಳಿದೆ.

‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿದೆ. ಸಾಕ್ಷ್ಯಚಿತ್ರದ ಒಂದು ಕಂತು ಜನವರಿ 17ರಂದು ಬಿಡುಗಡೆಯಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರೋತ್ತರ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿದ್ದರು. ಪೊಲೀಸರ ವೈಫಲ್ಯದಲ್ಲಿ ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವೂ ಇತ್ತು ಎಂದು ಭಾರತದಲ್ಲಿ ಬ್ರಿಟನ್ ರಾಜತಾಂತ್ರಿಕರಾಗಿದ್ದ ಅಧಿಕಾರಿಗಳು ಹೇಳಿರುವುದನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT