ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಧನ್ನಿಪುರ ಮಸೀದಿ ಯೋಜನೆ ಜನವರಿ 26ಕ್ಕೆ ಆರಂಭ

ಆಸ್ಪತ್ರೆ, ವಸ್ತು ಸಂಗ್ರಹಾಲಯ, ಗ್ರಂಥಾಲಯವೂ ನಿರ್ಮಾಣ
Last Updated 18 ಜನವರಿ 2021, 6:05 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣ ಯೋಜನೆಯು ಜನವರಿ 26ರಿಂದ ಅಧಿಕೃತವಾಗಿ ಆರಂಭವಾಗಲಿದೆ.

ಮಸೀದಿಯ ಜತೆಗೆ ಆಸ್ಪತ್ರೆ, ವಸ್ತು ಸಂಗ್ರಹಾಲಯ, ಗ್ರಂಥಾಲಯ, ಸಮುದಾಯ ಅಡುಗೆ ಮನೆ, ಇಂಡೋ ಇಸ್ಲಾಮಿಕ್‌ ಸಾಂಸ್ಕೃತಿಕ ಕೇಂದ್ರ, ಪ್ರಕಾಶನ ವಿಭಾಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

‘ಗಣರಾಜ್ಯೋತ್ಸವ ದಿನದಂದು ಧನ್ನಿಪುರ ಮಸೀದಿ ಯೋಜನೆಗೆ ಚಾಲನೆ ನೀಡಲು ಇಂಡೋ–ಇಸ್ಲಾಮಿಕ್‌ ಸಾಂಸ್ಕೃತಿ ಪ್ರತಿಷ್ಠಾನದ (ಐಐಸಿಎಫ್‌) ಸಭೆಯಲ್ಲಿ ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ ಹಾರಿಸಲಾಗುವುದು. ಜತೆಗೆ, ಮುಖ್ಯ ಟ್ರಸ್ಟಿ ಮತ್ತು ಸದಸ್ಯರು ವೈವಿಧ್ಯಮಯ ಸಸಿಗಳನ್ನು ನೆಡಲಿದ್ದಾರೆ’ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಅಥರ್‌ ಹುಸೇನ್‌ ತಿಳಿಸಿದ್ದಾರೆ.

‘ಐಐಸಿಎಫ್‌ನ ವರ್ಚುವಲ್‌ ಸಭೆಯಲ್ಲಿ ಅಧ್ಯಕ್ಷ ಝುಫರ್‌ ಅಹ್ಮದ್‌ ಮತ್ತು ಇತರ ಒಂಬತ್ತು ಟ್ರಸ್ಟಿಗಳು ಭಾಗವಹಿಸಿದ್ದರು.ಟ್ರಸ್ಟ್‌ನ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಪರಾಮರ್ಶಿಸಲಾಯಿತು. ಅಯೋಧ್ಯೆ ಜಿಲ್ಲಾ ಮಂಡಳಿಯಿಂದ ಯೋಜನೆಗೆ ಅನುಮೋದನೆ ಪಡೆಯುವುದು ಮತ್ತು ಐದು ಎಕರೆ ನಿವೇಶನದಲ್ಲಿನ ಮಣ್ಣಿನ ಪರೀಕ್ಷೆ ಕೈಗೊಳ್ಳುವ ಕುರಿತು ಚರ್ಚಿಸಲಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಹವಾಮಾನ ಬದಲಾವಣೆ ಮತ್ತು ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಸಹ ಯೋಜನೆಯ ಉದ್ದೇಶವಾಗಿದೆ. ಹೀಗಾಗಿ, ವಿವಿಧ ರೀತಿಯ ಸಸಿಗಳನ್ನು ನೆಡಲಾಗುವುದು. ಅಮೆಜಾನ್‌ ಅರಣ್ಯ ಪ್ರದೇಶ, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ಎಲ್ಲ ಭೌಗೋಳಿಕ ಪ್ರದೇಶಗಳಿಂದ ಸಸಿಗಳನ್ನು ತಂದು ಇಲ್ಲಿ ನೆಡಲಾಗುವುದು’ ಎಂದು ತಿಳಿಸಿದ್ದಾರೆ.

‘15 ಸಾವಿರ ಚದರ ಅಡಿ ಪ್ರದೇಶದಲ್ಲಿ ಮಸೀದಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಬಾಬ್ರಿ ಮಸೀದಿಯಷ್ಟೇ ದೊಡ್ಡದಾದ ಮಸೀದಿಯನ್ನು ಇಲ್ಲಿ ನಿರ್ಮಿಸಲಾಗುವುದು. ಇತರ ಮಸೀದಿಗಳಿಗಿಂತ ಈ ಮಸೀದಿಯ ಆಕಾರ ವಿಭಿನ್ನವಾಗಿರಲಿದೆ. ಮೆಕ್ಕಾದಲ್ಲಿನ ಕಾಬಾ ಷರೀಫ್‌ ರೀತಿಯ ಚೌಕಾಕಾರ ನಿರ್ಮಿಸುವ ಸಾಧ್ಯತೆ ಇದೆ. ವಾಸ್ತುಶಿಲ್ಪಿ ಎಸ್‌.ಎಂ. ಅಖ್ತಾರ್‌ ಇದೇ ರೀತಿ ನಿರ್ಮಿಸುವ ಒಲವು ಹೊಂದಿದ್ದಾರೆ ಎಂದು ಹುಸೇನ್‌ ವಿವರಿಸಿದ್ದಾರೆ.

ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಪ್‌‌ ಮಂಡಳಿಯು ಐದು ಎಕರೆ ಪ್ರದೇಶದಲ್ಲಿ ಮಸೀದಿ ನಿರ್ಮಾಣಕ್ಕೆ ಐಐಸಿಎಫ್‌ ಟ್ರಸ್ಟ್‌ ರಚಿಸಿತ್ತು. ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಧನ್ನಿಪುರದಲ್ಲಿ ನಿವೇಶನವನ್ನು ಹಂಚಿಕೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT