ಶುಕ್ರವಾರ, ಜನವರಿ 27, 2023
17 °C
ಹೊಸ ತಂತ್ರಜ್ಞಾನದಿಂದ ಕಾಗದ ರಹಿತ, ತಡೆ ರಹಿತ ಚೆಕ್‌ ಇನ್‌ಗೆ ಅನುಕೂಲವಾಗಲಿದೆ.

ಬೆಂಗಳೂರು ಸೇರಿ 3 ಏರ್‌ಪೋರ್ಟ್‌ಗಳಲ್ಲಿ ಇಂದಿನಿಂದ ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಯಾಣಿಕರಿಗೆ ವಿಮಾನ ನಿಲ್ದಾಣದೊಳಗೆ ಹೆಚ್ಚು ಅಡೆತಡೆ ಇಲ್ಲದೆ ಪ್ರವೇಶ ಕಲ್ಪಿಸುವ ಹಾಗೂ ವಿಮಾನ ಹತ್ತುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ‘ಡಿಜಿ ಯಾತ್ರಾ’ ಸೇವೆಗೆ ಗುರುವಾರ ಚಾಲನೆ ನೀಡಲಾಗಿದೆ. 

ಮೊದಲ ಹಂತದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–3 (ಟಿ–3) ಹಾಗೂ ವಾರಾಣಸಿಯ ವಿಮಾನ ನಿಲ್ದಾಣದಲ್ಲಿ ಈ ಸೇವೆ ಆರಂಭವಾಗಲಿದೆ. 

ಈ ಸೇವೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ‘ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಈ ಸೇವೆಯನ್ನು ಹೈದರಾಬಾದ್‌, ಪುಣೆ, ವಿಜಯವಾಡ ಹಾಗೂ ಕೋಲ್ಕತ್ತದ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗುತ್ತದೆ’ ಎಂದರು.

‘ಆ್ಯಪ್‌ನಲ್ಲಿ ಪ್ರಯಾಣಿಕರು ದಾಖಲಿಸುವ ಮಾಹಿತಿಯನ್ನು ಗೂಢ ಲಿಪೀಕರಣ ಮಾದರಿಯಲ್ಲಿ ಸಂಗ್ರಹಿಸಿಡಲಾಗಿರುತ್ತದೆ. ಈ ಮಾಹಿತಿಯು ವಿಕೇಂದ್ರೀಕೃತ ಸ್ವರೂಪದಲ್ಲಿರುವುದರಿಂದ ಅದನ್ನು ಕದಿಯಲು ಅವಕಾಶ ಇರುವುದಿಲ್ಲ. ಇದರಿಂದ ಪ್ರಯಾಣಿಕರ ಗೌಪ್ಯತೆಗೂ ಧಕ್ಕೆ ಉಂಟಾಗುವುದಿಲ್ಲ’ ಎಂದಿದ್ದಾರೆ. 

‘ಪ್ರಯಾಣಿಕರ ಮಾಹಿತಿಯು ಅವರ ಮೊಬೈಲ್‌ನಲ್ಲಿ ಮಾತ್ರ ಲಭ್ಯವಿರಲಿದೆ. ಪ್ರಯಾಣ ಪೂರ್ಣಗೊಂಡ 24 ಗಂಟೆಗಳ ಬಳಿಕ ಅದನ್ನು ವಿಮಾನ ನಿಲ್ದಾಣದ ಸರ್ವರ್‌ನಿಂದ ಕಡ್ಡಾಯವಾಗಿ ಅಳಿಸಿಹಾಕಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಏನಿದು ಡಿಜಿ ಯಾತ್ರಾ?
ಇದು ಆ್ಯಪ್‌ ಆಧಾರಿತ ಸೇವೆಯಾಗಿದ್ದು, ಮುಖ ಗುರುತಿಸುವಿಕೆ ತಂತ್ರಜ್ಞಾನ (ಫೇಸಿಯಲ್‌ ರೆಕಗ್ನೈಸೇಷನ್‌) ಒಳಗೊಂಡಿರಲಿದೆ. ಈ ಆ್ಯಪ್‌ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ವೇದಿಕೆಗಳಲ್ಲಿ ಲಭ್ಯವಿರುತ್ತದೆ. 

ಈ ಸೇವೆ ಬಳಸಲು ಇಚ್ಛಿಸುವ ಪ್ರಯಾಣಿಕರು ಆಧಾರ್‌ ಕಾರ್ಡ್‌ನಲ್ಲಿನ ಮಾಹಿತಿಗಳನ್ನು ಆ್ಯಪ್‌ನಲ್ಲಿ ದಾಖಲಿಸಬೇಕಾಗುತ್ತದೆ. ತಾವೇ ಫೋಟೊ ಕ್ಲಿಕ್ಕಿಸಿಕೊಂಡ ಬಳಿಕ ‘ಬೋರ್ಡಿಂಗ್‌ ಪಾಸ್‌’ ಸ್ಕ್ಯಾನ್‌ ಮಾಡಬೇಕು. ಹೀಗೆ ಒದಗಿಸಿದ ಮಾಹಿತಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ರವಾನೆಯಾಗಲಿದೆ. 

ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಮೊದಲು ಇ–ಗೇಟ್‌ನಲ್ಲಿ ಬಾರ್‌ ಕೋಡ್‌ ಒಳಗೊಂಡ ಬೋರ್ಡಿಂಗ್‌ ಪಾಸ್‌ ಸ್ಕ್ಯಾನ್‌ ಮಾಡಬೇಕು. ಫೇಶಿಯಲ್‌ ರೆಕಗ್ನೈಸೇಷನ್‌ ಪೂರ್ಣಗೊಳಿಸಬೇಕು. ಅದು ಪ್ರಯಾಣಿಕರ ಗುರುತನ್ನು ಮೌಲ್ಯೀಕರಿಸುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ನಿಲ್ದಾಣದೊಳಗೆ ಪ್ರವೇಶಿಸಬಹುದು. ಭದ್ರತಾ ತಪಾಸಣೆಯ ಸಾಮಾನ್ಯ ಪ್ರಕ್ರಿಯೆ ಮುಗಿಸಿದ ನಂತರ ನೇರವಾಗಿ ವಿಮಾನ ಏರಬಹುದು. ಅಟ್ಲಾಂಟ ವಿಮಾನ ನಿಲ್ದಾಣದಲ್ಲಿ ಈ ಪ್ರಕ್ರಿಯೆಗೆ ಕೇವಲ 9 ನಿಮಿಷ ತಗಲುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು