ಸೋಮವಾರ, ಆಗಸ್ಟ್ 8, 2022
24 °C
ಟೂಲ್‌ಕಿಟ್ ಪ್ರಕರಣ

ಟ್ವಿಟರ್ ಎಂಡಿ ವಿಚಾರಣೆ: ಬೆಂಗಳೂರಿಗೆ ಬಂದಿದ್ದ ದೆಹಲಿ ಪೊಲೀಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ, ಟ್ವಿಟರ್‌ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ದಿನೇಶ್ ಮಹೇಶ್ವರಿ ಅವರನ್ನು ದೆಹಲಿ ಪೊಲೀಸರು ಕಳೆದ ತಿಂಗಳು ವಿಚಾರಣೆ ನಡೆಸಿದ್ದರು.

ವಿಚಾರಣೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ, ಟ್ವಿಟರ್ ಬಳಕೆದಾರರ ಟ್ವೀಟ್‌ಗಳಿಗೆ ‘ತಿರುಚಿದ ಮಾಹಿತಿ’ ಎಂಬ ಹಣೆಪಟ್ಟಿ ಹಚ್ಚುವ ಕಂಪನಿಯ ನೀತಿಯ ಬಗ್ಗೆ ಪೊಲೀಸರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಅವರು ಇತ್ತೀಚೆಗೆ ಮಾಡಿದ್ದ ಟ್ವೀಟ್‌ಗೆ ಟ್ವಿಟರ್ ಸಂಸ್ಥೆಯು ಈ ರೀತಿಯ ಹಣೆಪಟ್ಟಿ ಬಳಸಿತ್ತು.

ಟೂಲ್‌ಕಿಟ್ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ತಂಡವು ಮಹೇಶ್ವರಿ ಅವರನ್ನು ವಿಚಾರಣೆ ನಡೆಸುವ ಸಲುವಾಗಿ ಮೇ 31ರಂದು ಬೆಂಗಳೂರಿಗೆ ತೆರಳಿತ್ತು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಎಫ್‌ಐಆರ್ ಹಿಂಪಡೆಯಲು ಒತ್ತಾಯ
ಮುಸ್ಲಿಂ ವ್ಯಕ್ತಿಯೊಬ್ಬರ ವಿಡಿಯೊ ಹಂಚಿಕೊಂಡ ಕಾರಣಕ್ಕೆ ಉತ್ತರ ಪ್ರದೇಶದ ಸುದ್ದಿಸಂಸ್ಥೆ ಮತ್ತು ಕೆಲವು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಸಂಪಾದಕರ ಕೂಟ (ಇಜಿಐ) ಖಂಡಿಸಿದ್ದು, ದೂರು ಹಿಂಪಡೆಯುವಂತೆ ಒತ್ತಾಯಿಸಿದೆ.

ವಯಸ್ಸಾದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಟ್ವೀಟ್ ಮಾಡಿದ್ದಕ್ಕಾಗಿ ‘ದಿ ವೈರ್’ ಮತ್ತು ಹಲವಾರು ಪತ್ರಕರ್ತರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಎಫ್ಐಆರ್ ಹಾಕಿದೆ.

ಟ್ವಿಟರ್ ಐಎನ್‌ಸಿ, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ, ದಿ ವೈರ್‌ ನ್ಯೂಸ್ ಪೋರ್ಟಲ್, ಪತ್ರಕರ್ತರಾದ ಮೊಹಮ್ಮದ್ ಜುಬೈರ್, ರಾಣಾ ಅಯೂಬ್, ಸಬಾ ನಖ್ವಿ ಮತ್ತು ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಮತ್ತು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಾಮ ಮೊಹಮ್ಮದ್ ವಿರುದ್ಧ ಪ್ರಕರಣ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು