ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಕೋವಿಡ್–19 ಪ್ರಕರಣ ಇಳಿಮುಖ: ಸಕ್ರಿಯ ಪ್ರಕರಣಗಳು 5 ಲಕ್ಷಕ್ಕಿಂತ ಕಡಿಮೆ

Last Updated 17 ನವೆಂಬರ್ 2020, 17:42 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19 ದೃಢಪಟ್ಟ ಪ್ರಕರಣಗಳ ಸಂಖ್ಯೆ ನಾಲ್ಕು ತಿಂಗಳ ಬಳಿಕ 30,000ಕ್ಕಿಂತ ಕಡಿಮೆ ದಾಖಲಾಗಿದೆ. ಆದರೆ, ದುರ್ಗಾ ಪೂಜೆ, ದೀಪಾವಳಿ ಮತ್ತು ಬಿಹಾರ ಚುನಾವಣೆಯಿಂದಾಗಿ ಕೋವಿಡ್‌ ಹರಡುವಿಕೆ ಹೆಚ್ಚಬಹುದು. ದೆಹಲಿಯಲ್ಲಿಯೂ ಪರಿಸ್ಥಿತಿ ಗಂಭೀರವಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.ಪ್ರಸ್ತುತ ಒಟ್ಟು ಕೋವಿಡ್–19 ಪ್ರಕರಣಗಳ ಸಂಖ್ಯೆ 88.74 ಲಕ್ಷ ತಲುಪಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳಿಂದ ತಿಳಿದು ಬಂದಿದೆ.

ದೇಶದಲ್ಲಿ ನಿತ್ಯ ದಾಖಲಾಗುತ್ತಿರುವ ಕೋವಿಡ್‌–19 ಹೊಸ ಪ್ರಕರಣಗಳ ಸಂಖ್ಯೆ ಜುಲೈ 15ರಂದು 30 ಸಾವಿರಕ್ಕಿಂತ ಕಡಿಮೆ ವರದಿಯಾಗಿತ್ತು. ಅನಂತರ ಇದೇ ಮೊದಲ ಬಾರಿಗೆ 29,163 ಹೊಸ ಪ್ರಕರಣಗಳು ದಾಖಲಾಗಿದೆ. ಒಟ್ಟು 88,74,290 ಸೋಂಕು ಪ್ರಕರಣಗಳಿದ್ದು, ಸೋಂಕಿನಿಂದ 1,30,519 ಮಂದಿ ಸಾವಿಗೀಡಾಗಿದ್ದಾರೆ.

ದೇಶದಲ್ಲಿ ಈವರೆಗೂ 12.65 ಕೋಟಿ ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌–19 ಪರೀಕ್ಷೆ ನಡೆಸಲಾಗಿದೆ. ಸೋಮವಾರ ಒಂದೇ ದಿನ 8.44 ಲಕ್ಷ ಪರೀಕ್ಷೆಗಳನ್ನು ನಡೆಸಿರುವುದಾಗಿ ಐಸಿಎಂಆರ್‌ ಹೇಳಿದೆ.

ದುರ್ಗಾಪೂಜೆ, ದೀಪಾವಳಿ ಮತ್ತು ಬಿಹಾರ ಚುನಾವಣೆಯಿಂದಾಗಿ ಸೋಂಕು ಹೆಚ್ಚಬಹುದು. ಈ ವಾರ ಮತ್ತು ಮುಂದಿನ ವಾರ ಈ ವಿಚಾರದಲ್ಲಿ ನಿಕಟ ನಿಗಾ ಇರಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.

ಒಂಬತ್ತು ವಾರಗಳಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ಸಾಗಿದೆ. ಮಂಗಳವಾರ ಬೆಳಗ್ಗಿನವರೆಗಿನ 24 ತಾಸುಗಳಲ್ಲಿ 29,163 ಪ್ರಕರಣಗಳು ವರದಿಯಾಗಿವೆ. ಆದರೆ, ಎರಡು ದಿನಗಳ ಹಿಂದಿನವರೆಗೆ ದೆಹಲಿಯಲ್ಲಿ ಪ್ರತಿ ದಿನ ಏಳು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದು ದೊಡ್ಡ ಸವಾಲಾಗಿದೆ.

ದೆಹಲಿಯಲ್ಲಿ ಕೋವಿಡ್‌ ಹರಡುವುದನ್ನು ತಡೆಯಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೀವ್ರ ನಿಗಾ ಘಟಕಗಳು ಮತ್ತು ವೆಂಟಿಲೇಟರ್‌ ಇರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.

ಹಬ್ಬಗಳ ಸಂದರ್ಭದಲ್ಲಿ ಕೋವಿಡ್‌ ನಿರ್ಬಂಧಗಳಲ್ಲಿನ ಸಡಿಲಿಕೆಯಿಂದಾಗಿ ಗುಜರಾತ್‌ನಲ್ಲಿ ಸೋಂಕು ಹರಡುವಿಕೆ ಹೆಚ್ಚಿದೆ. ರಾಜ್ಯದಲ್ಲಿ 1,125 ಹೊಸ ಪ್ರಕರಣಗಳು ಮಂಗಳವಾರ ವರದಿಯಾಗಿವೆ. ಇದರಲ್ಲಿ 218 ಪ್ರಕರಣಗಳು ಅಹಮದಾಬಾದ್‌ ನಗರದಲ್ಲಿಯೇ ದೃಢಪಟ್ಟಿವೆ. ಒಂದು ವಾರದ ಹಿಂದಿನವರೆಗೆ ನಿತ್ಯ ಪ್ರಕರಣಗಳ ಏರಿಕೆ ಸಂಖ್ಯೆಯು ಸಾವಿರದ ಒಳಗೇ ಇತ್ತು.

ಈಗ, ಪ್ರಕರಣಗಳ ಸಂಖ್ಯೆ ಹೆಚ್ಚಳದಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ.

ನವೆಂಬರ್‌ 14ರಿಂದ ನಿತ್ಯ 9 ಲಕ್ಷಕ್ಕೂ ಕಡಿಮೆ ಕೋವಿಡ್‌–19 ಪರೀಕ್ಷೆಗಳನ್ನು ನಡೆಸಲಾಗಿದೆ. ನವೆಂಬರ್‌ 13ಕ್ಕೂ ಮುನ್ನ ದೇಶದಲ್ಲಿ ಸರಾಸರಿ 11 ಲಕ್ಷ ಗಂಟಲು ದ್ರವ ಮಾದರಿಗಳಿಗೆ ಕೋವಿಡ್‌–19 ಪರೀಕ್ಷೆ ನಡೆಸಲಾಗಿದೆ.

ದೇಶದಲ್ಲಿ ಸತತ ಏಳನೇ ದಿನವು ಸಕ್ರಿಯ ಪ್ರಕರಣಗಳ ಸಂಖ್ಯೆ 5 ಲಕ್ಷಕ್ಕಿಂತ ಕಡಿಮೆ ಇದೆ. ಒಟ್ಟು ಕೋವಿಡ್‌ ಪ್ರಕರಣಗಳಲ್ಲಿ ಶೇ 5.11ರಷ್ಟು, ಅಂದರೆ 4,53,401 ಸಕ್ರಿಯ ಪ್ರಕರಣಗಳಿವೆ. ಕೊರೊನಾ ವೈರಸ್‌ ಸೋಂಕಿನಿಂದ ಗುಣಮುಖರಾಗಿರುವ ಪ್ರಮಾಣ ಶೇ 93.42 ತಲುಪಿದ್ದು, ಈವರೆಗೂ 82,90,370 ಮಂದಿ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಕೋವಿಡ್‌–19 ಪ್ರಕರಣಗಳು ಆಗಸ್ಟ್‌ 7ರಂದು 20 ಲಕ್ಷ ದಾಟಿತು, ಆಗಸ್ಟ್‌ 23ರಂದು 30 ಲಕ್ಷ, ಸೆಪ್ಟೆಂಬರ್‌ 5ಕ್ಕೆ 40 ಲಕ್ಷ, ಸೆಪ್ಟೆಂಬರ್‌ 16ಕ್ಕೆ 50 ಲಕ್ಷ, ಸೆಪ್ಟೆಂಬರ್‌ 28ಕ್ಕೆ 60 ಲಕ್ಷ, ಅಕ್ಟೋಬರ್‌ 11ಕ್ಕೆ 70 ಲಕ್ಷ ಹಾಗೂ ಅಕ್ಟೋಬರ್‌ 29ಕ್ಕೆ 80 ಲಕ್ಷ ಗಡಿ ದಾಟಿದೆ.

ಮಂಗಳವಾರ ಬೆಳಗ್ಗಿನ ವರೆಗೂ ಕಳೆದ 24 ಗಂಟೆಗಳಲ್ಲಿ 449 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು 1,30,519 ಮೃತರ ಪೈಕಿ, ಮಹಾರಾಷ್ಟದಲ್ಲಿಯೇ 46,034 ಮಂದಿ ವರದಿಯಾಗಿದೆ. ಕರ್ನಾಟಕದಲ್ಲಿ 11,541 ಜನ, ತಮಿಳುನಾಡಿನಲ್ಲಿ 11,495, ಪಶ್ಚಿಮ ಬಂಗಾಳದಲ್ಲಿ 7,714, ದೆಹಲಿಯಲ್ಲಿ 7,713, ಉತ್ತರ ಪ್ರದೇಶದಲ್ಲಿ 7,393, ಆಂಧ್ರ ಪ್ರದೇಶದಲ್ಲಿ 6,881, ಪಂಜಾಬ್‌ನಲ್ಲಿ 4,480 ಹಾಗೂ ಗುಜರಾತ್‌ನಲ್ಲಿ 3,808 ಮಂದಿ ಸಾವಿಗೀಡಾಗಿದ್ದಾರೆ.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ ಕಾಯಿಲೆಗಳು ಸೇರಿದಂತೆ ಇತರೆ ಕಾಯಿಲೆಗಳು ಇದ್ದವರ ಪೈಕಿ ಕೋವಿಡ್‌–19 ಕಾಣಿಸಿಕೊಂಡು ಮೃತಪಟ್ಟಿರುವ ಸಂಖ್ಯೆ ಅಧಿಕ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಒಟ್ಟು ಸಾವಿನ ಪ್ರಕರಣಗಳ ಪೈಕಿ ಶೇ 70ರಷ್ಟು ಸಾವು ಕೋವಿಡ್‌–19 ಜೊತೆಗೆ ಇತರೆ ಕಾಯಿಲೆಗಳಿಗೂ ಒಳಗಾಗಿರುವುದರಿಂದ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT