ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೂಲ್‌ಕಿಟ್‌’ ಸಿದ್ಧಪಡಿಸಿದ ಆರೋಪ‌: ಬೆಂಗಳೂರಿನ ಯುವತಿ ಸೆರೆ

ರೈತರಿಗೆ ಬೆಂಬಲ ನೀಡಿದ ಪರಿಸರ ಕಾರ್ಯಕರ್ತೆ ದಿಶಾ ರವಿ
Last Updated 14 ಫೆಬ್ರುವರಿ 2021, 21:41 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ‘ಟೂಲ್‌ಕಿಟ್‌’ ಸಿದ್ಧಪಡಿಸಿದ ಆರೋಪದಲ್ಲಿ ಬೆಂಗಳೂರಿನ 21 ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಎಂಬವರನ್ನು ಬಂಧಿಸಲಾಗಿದೆ. ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಸೇರಿ ಹಲವು ಗಣ್ಯರು ಈ ಟೂಲ್‌ಕಿಟ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ದಿಶಾ ಅವರನ್ನು ಬೆಂಗಳೂರಿನ ನಿವಾಸದಿಂದ ಶನಿವಾರ ಬಂಧಿಸಲಾಗಿದೆ. ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿ ಫೆ. 4ರಂದು ದೆಹಲಿಯ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಅದರ ಆಧಾರದಲ್ಲಿ ದಿಶಾ ಅವರನ್ನು ಬಂಧಿಸಲಾಗಿದೆ. ಅವರನ್ನು ಶನಿವಾರ ರಾತ್ರಿಯೇ ದೆಹಲಿಗೆ ಕರೆದೊಯ್ಯಲಾಗಿದೆ.

ದೆಹಲಿಯ ನ್ಯಾಯಾಲಯವು ದಿಶಾ ಅವರನ್ನು ಐದು ದಿನ ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಅವರು ನ್ಯಾಯಾಧೀಶರ ಮುಂದೆ ಅತ್ತರು. ರೈತರ ಪ್ರತಿಭಟನೆಯನ್ನು ಬೆಂಬಲಿಸಲು ತಾನು ಬಯಸಿದ್ದೆ. ಅದಕ್ಕಾಗಿ ಟೂಲ್‌ಕಿಟ್‌ನ ಎರಡು ಸಾಲನ್ನು ತಿದ್ದಿ ಕೊಟ್ಟಿದ್ದೆ ಎಂದು ಅವರು ನ್ಯಾಯಾಧೀಶರಿಗೆ ತಿಳಿಸಿದರು.

ದಿಶಾ ಅವರು ಫೆ. 3ರಂದು ಟೂಲ್‌ಕಿಟ್‌ ಅನ್ನು ತಿದ್ದಿದ್ದಾರೆ. ಟೂಲ್ಕಿಟ್‌ ಸಿದ್ಧಪಡಿಸಿ ಹಂಚಿಕೊಳ್ಳುವುದರಲ್ಲಿ ಹಲವರು ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

‘ಅವರು ವಾಟ್ಸ್‌ಆ್ಯಪ್‌ ಗುಂಪೊಂದನ್ನು ರಚಿಸಿ, ಟೂಲ್‌ಕಿಟ್‌ ಸಿದ್ಧಪಡಿಸುವ ಕೆಲಸದಲ್ಲಿ ಇತರರನ್ನು ಸೇರಿಸಿಕೊಂಡಿದ್ದಾರೆ. ಟೂಲ್‌ಕಿಟ್‌ನ ಕರಡು ಸಿದ್ಧಪಡಿಸುವ ಕೆಲಸದಲ್ಲಿಯೂ ಅವರು ಭಾಗಿಯಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಖಾಲಿಸ್ತಾನಿ ಹೋರಾಟದ ಪರವಾಗಿರುವ ಪೋಯೆಟಿಕ್‌ ಜಸ್ಟೀಸ್‌ ಫೌಂಡೇಶನ್‌ ಎಂಬ ಸಂಘಟನೆಯ ಜತೆಗೂಡಿದ್ದಾರೆ. ಗ್ರೇಟಾ ಅವರ ಜತೆಗೆ ದಿಶಾ ಅವರೇ ಈ ಟೂಲ್‌ಕಿಟ್‌ ಹಂಚಿಕೊಂಡಿದ್ದಾರೆ’ ಎಂದೂ ಪೊಲೀಸರು ಆರೋಪಿಸಿದ್ದಾರೆ.

‘ಈ ಟೂಲ್‌ಕಿಟ್‌ ಬಹಿರಂಗವಾದ ಬಳಿಕ ಅದನ್ನು ಅಳಿಸಿ ಹಾಕುವಂತೆ ಗ್ರೇಟಾ ಅವರನ್ನು ದಿಶಾ ಕೇಳಿಕೊಂಡಿದ್ದಾರೆ. ಹಾಗಾಗಿ, ದಿಶಾ ಹೇಳಿದಂತೆ ಇದು ಎರಡು ಸಾಲು ತಿದ್ದಿದ್ದಷ್ಟೇ ಅಲ್ಲ, ಅದಕ್ಕಿಂತ ಹಲವು ಪಟ್ಟು ದೊಟ್ಟ ಅಪರಾಧ’ ಎಂದು ಪೊಲೀಸರು ಹೇಳಿದ್ದಾರೆ.

ಗ್ರೇಟಾ ಮತ್ತು ಇತರರು ಹಂಚಿಕೊಂಡ ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಇ–ಮೇಲ್‌ ವಿಳಾಸ, ಯುಆರ್‌ಎಲ್‌ ಮತ್ತು ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿ ನೀಡುವಂತೆ ಪೊಲೀಸರು ಗೂಗಲ್‌ ಸಂಸ್ಥೆ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳನ್ನುಕೋರಿದ್ದರು.

ದಿಶಾ ಅವರ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅವರು ಇನ್ನಷ್ಟು ಜನರ ಜತೆಗೆ ಸಂಪರ್ಕದಲ್ಲಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಜನವರಿ 26ರಂದು ನಡೆಸಿದ ಟ್ರ್ಯಾಕ್ಟರ್‌ ರ್‍ಯಾಲಿಯಲ್ಲಿ ಹಿಂಸಾಚಾರ ಉಂಟಾಗಿತ್ತು. ಕೆಂಪು ಕೋಟೆಗೆ ನುಗ್ಗಿದ್ದ ಕೆಲವರು ಅಲ್ಲಿ ಧಾರ್ಮಿಕ ಧ್ವಜವೊಂದನ್ನು ಹಾರಿಸಿದ್ದರು. ಹಲವು ವಾಹನಗಳನ್ನು ಮಗುಚಿ ಹಾಕಿದ್ದರು. ಗಲಭೆಯಲ್ಲಿ 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು.

ಟೂಲ್‌ಕಿಟ್‌ನಲ್ಲಿ ಕರೆಕೊಟ್ಟ ರೀತಿಯಲ್ಲಿಯೇ ಜನವರಿ 26ರಂದು ಗಲಭೆ ನಡೆದಿದೆ. ಭಾರತದ ವಿರುದ್ಧ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು‍ಪ್ರಾದೇಶಿಕ ಸಮರ ಸಾರುವಂತೆ ಟೂಲ್‌ಕಿಟ್‌ನಲ್ಲಿ ಕರೆ ಕೊಡಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ದಿಶಾಗೆ ಕಾಂಗ್ರೆಸ್‌ ಬೆಂಬಲ
ದಿಶಾ ಅವರ ಬಂಧನವನ್ನು ಕಾಂಗ್ರೆಸ್‌ ಸಂಸದರಾದ ಜೈರಾಮ್ ರಮೇಶ್‌ ಮತ್ತು ಶಶಿ ತರೂರ್‌ ಖಂಡಿಸಿದ್ದಾರೆ. ಯುವ ಕಾರ್ಯಕರ್ತೆಗೆ ಅವರು ಬೆಂಬಲ ಸೂಚಿಸಿದ್ದಾರೆ. ‘ಇದು ನೀಚ ಕೃತ್ಯ. ಇದು ಅನಪೇಕ್ಷಿತ ಕಿರುಕುಳ ಮತ್ತು ಬೆದರಿಕೆ. ದಿಶಾ ರವಿ ಅವರಿಗೆ ನನ್ನ‍ಪೂರ್ಣ ಬೆಂಬಲ ಇದೆ’ ಎಂದು ಜೈರಾಮ್ ಟ್ವೀಟ್‌ ಮಾಡಿದ್ದಾರೆ.

ಭಯೋತ್ಪಾದನೆ ಕೃತ್ಯದ ಅರೋಪಿ, ಮಾಜಿ ಡಿವೈಎಸ್‌ಪಿ ದಾವಿಂದರ್‌ ಸಿಂಗ್‌ ಅವರು ಜಾಮೀನು ಪಡೆದು ಹೊರಗೆ ಬಂದಿರುವುದನ್ನು ಉಲ್ಲೇಖಿಸಿ ತರೂರ್‌ ಹೀಗೆ ಟ್ವೀಟ್‌ ಮಾಡಿದ್ದಾರೆ: ‘ಸಾಮಾಜಿಕ ಹೋರಾಟಗಾರರು ಜೈಲಿನಲ್ಲಿದ್ದರೆ ಭಯೋತ್ಪಾದನೆ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಪುಲ್ವಾಮಾ ದಾಳಿಯ ಎರಡನೇ ವಾರ್ಷಿಕ ದಿನದಂದು ನಮ್ಮ ಸರ್ಕಾರ ಇದನ್ನು ಹೇಗೆ ಆಚರಿಸುತ್ತದೆ ನೋಡಬೇಕು’.

‘ರೈತರ ಪರವಾಗಿ ನಿಂತಿರುವ, ನಮ್ಮ ಗ್ರಹದ ಉಳಿವಿಗೆ ಹೋರಾಡುತ್ತಿರುವ ಕಾರ್ಯಕರ್ತೆಯನ್ನು ಕ್ಷುಲ್ಲಕ ಕಾರಣ ನೀಡಿ ಬಂಧಿಸಲಾಗಿದೆ. ಸರ್ಕಾರವು ಸಮಚಿತ್ತ ಕಳೆದುಕೊಂಡಿದೆಯೇ? ಸಾಮಾಜಿಕ ಜಾಲತಾಣದ ಸಾಮಾನ್ಯ ಚಟುವಟಿಕೆಯಲ್ಲಿಯೂ ಒಳಸಂಚನ್ನು ಕಾಣುವುದು ಪ್ರಜಾಪ್ರಭುತ್ವಕ್ಕೆ ಇನ್ನಷ್ಟು ಹಾನಿ ಮಾಡುವುದಿಲ್ಲವೇ?’‍ ಎಂದು ಕಾಂಗ್ರೆಸ್‌ ಮುಖಂಡ ರಾಜೀವ್ ಗೌಡ ಟ್ವೀಟ್‌ ಮಾಡಿದ್ದಾರೆ.

ದಿಶಾ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಎನ್‌ವಿರಾನ್‌ಮೆಂಟ್‌ ಸಪೋರ್ಟ್ ಗ್ರೂಪ್‌ ಸಂಘಟನೆಯು ಸಹಿ ಸಂಗ್ರಹ ಅಭಿಯಾನ ಆರಂಭಿಸಿದೆ.

‘ಏಕಾಂಗಿ’ ಹೋರಾಟಗಾರ್ತಿ
ಬೆಂಗಳೂರು ವರದಿ: ದಿಶಾ ರವಿ ಅವರು ಗ್ರೇಟಾ ಥನ್‌ಬರ್ಗ್ ಅವರು ಸ್ಥಾಪಿಸಿದ ‘ಫ್ರೈಡೇ ಫಾರ್‌ ಫ್ಯೂಚರ್‌’ ಹೆಸರಿನ ಸಂಘಟನೆಯ ಸಹ ಸಂಸ್ಥಾಪಕಿ. ನಗರದ ಹೊರವಲಯದಲ್ಲಿರುವ ಚಿಕ್ಕಬಾಣಾವರದಲ್ಲಿ ನೆಲೆಸಿರುವ ಅವರು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ನಗರದ ಖಾಸಗಿ ಕಂಪನಿಯೊಂದರಲ್ಲಿ ವ್ಯವಸ್ಥಾಪಕಿ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಹವಾಮಾನ ಸಂಬಂಧಿತ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಪ್ರತಿ ಶುಕ್ರವಾರವೂ ಹೋರಾಟ ಮಾಡುತ್ತಿದ್ದರು. ಕೆಲವು ಬಾರಿ ಅವರ ಹೋರಾಟಕ್ಕೆ ಯಾರೂ ಬರುತ್ತಿರಲಿಲ್ಲ. ಹೀಗಾಗಿ, ಅವರೊಬ್ಬರೇ ರಸ್ತೆಯಲ್ಲಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಗಳ ಪ್ರಚಾರಕ್ಕೆ ಹಾಗೂ ಪ್ರತಿಭಟನೆಗೆ ಜನರನ್ನು ಸೇರಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು. ರಾಜ್ಯ, ನಗರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಭೆಗಳಲ್ಲೂ ಇವರು ಪಾಲ್ಗೊಳ್ಳುತ್ತಿದ್ದರು. ದಿಶಾ ಅವರ ತಂದೆ ಕ್ರೀಡಾ ಕೋಚ್‌ ಆಗಿದ್ದು, ತಾಯಿ ಗೃಹಿಣಿ.

ದಿಶಾ ಬಂಧನವನ್ನು ಕೆಲವು ಸ್ನೇಹಿತರು ಖಂಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ನಾನು ದಿಶಾ ಅವರನ್ನು ಬೆಂಗಳೂರು ನಾಗರಿಕರ ಸಭೆಯೊಂದರಲ್ಲಿ ಭೇಟಿಯಾಗಿದ್ದೆ. ವಿಶ್ವ ಮಟ್ಟದ ಒಂದು ಹೋರಾಟದ ಭಾಗವಾಗಿ ಬೆಂಗಳೂರಿನಲ್ಲಿ ನಾಯಕತ್ವ ವಹಿಸಿಕೊಂಡು ಅವರು ಕೆಲಸ ಮಾಡುತ್ತಿರುವುದು ತಿಳಿಯಿತು. ಅವರ ಕೆಲಸಗಳ ಚಿತ್ರ ನೋಡಿ ಅಚ್ಚರಿ ಮತ್ತು ಹೆಮ್ಮೆ ಆಯಿತು. ಅವರು ನಿಜವಾಗಲೂ ಚಿಕ್ಕ ವಯಸ್ಸಿನಲ್ಲೇ ಯಾರೂ ಯೋಚಿಸಲಾಗದ ವಿಚಾರದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ’ ಎಂದು ಎಎಪಿ ಯುವ ಘಟಕದ ಮುಕುಂದ್ ಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT