ಭಾನುವಾರ, ಮಾರ್ಚ್ 7, 2021
32 °C

ಕೃಷಿ ಕಾಯ್ದೆಗಳ ಅಮಾನತನ್ನು ತಪ್ಪಾಗಿ ಭಾವಿಸಬೇಡಿ: ರೈತರಿಗೆ ನರೇಂದ್ರ ಸಿಂಗ್ ತೋಮರ್

ಪಿಟಿಐ Updated:

ಅಕ್ಷರ ಗಾತ್ರ : | |

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್

ನವದೆಹಲಿ: ಪ್ರತಿಭಟನಾ ನಿರತ ರೈತರೊಂದಿಗೆ ಸರ್ಕಾರದ ದೀರ್ಘಕಾಲದ ಮಾತುಕತೆ ಶುಕ್ರವಾರ ಅಂತ್ಯಗೊಂಡಿದೆ. ಬಳಿಕ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಮೂರು ಕೃಷಿ ಕಾನೂನುಗಳನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ಕಾಯಿದೆಗಳಲ್ಲಿ ಯಾವುದೋ ಲೋಪವಿದೆ ಎಂದು ಒಪ್ಪಿಕೊಂಡಿರುವುದಾಗಿ ತಪ್ಪಾಗಿ ಭಾವಿಸಬಾರದು ಎಂದು ರೈತ ಮುಖಂಡರಿಗೆ ತಿಳಿಸಿದ್ದಾರೆ.

ಈ ವಿಷಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾಪವನ್ನು ಮಾಡಲಾಗಿದೆ ಮತ್ತು ಕೃಷಿ ಸಮುದಾಯದ ಹಿತದೃಷ್ಟಿಯಿಂದ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ಉತ್ಸುಕವಾಗಿದೆ ಎಂದಿದ್ದಾರೆ.

11ನೇ ಸುತ್ತಿನ ಮಾತುಕತೆ ಅನಿರ್ದಿಷ್ಟವಾಗಿ ಕೊನೆಗೊಂಡ ಕೆಲವೇ ಗಂಟೆಗಳ ನಂತರ, ಕೃಷಿ ಸಚಿವಾಲಯವು ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ತೋಮರ್, ರೈತರ ಹಿತಾಸಕ್ತಿಯ ಬಗ್ಗೆ ಯೋಚಿಸುವಂತೆ ರೈತ ಮುಖಂಡರನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 

'ಪ್ರಜಾಪ್ರಭುತ್ವದಲ್ಲಿ ಒಪ್ಪಂದಗಳು ಮತ್ತು ಭಿನ್ನಾಭಿಪ್ರಾಯಗಳು ಸಹಜ. ಆದರೆ, ಮಾತುಕತೆಯ ಮೂಲಕ ಒಂದು ಮಾರ್ಗವನ್ನು ಕಂಡುಕೊಳ್ಳುವ ದೃಷ್ಟಿಕೋನ ಇರಬೇಕು'. ಹಲವು ಸುತ್ತಿನ ಮಾತುಕತೆಯ ನಂತರವೂ ಇನ್ನೂ ಯಾವುದೇ ನಿರ್ಣಯವನ್ನು ಕೈಗೊಳ್ಳಲು ಆಗದಿರುವುದು ದುರದೃಷ್ಟಕರ. ಆದರೆ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿರುವುದಕ್ಕಾಗಿ ರೈತ ಸಂಘಟನೆಗಳಿಗೆ ಧನ್ಯವಾದಗಳು ಎಂದು ಸಚಿವರು ಹೇಳಿದರು.

'ಸಾಮಾನ್ಯವಾಗಿ, ಮಾತುಕತೆ ನಡೆಯುತ್ತಿರುವಾಗ ಹೊಸ ರೀತಿಯ ಪ್ರತಿಭಟನೆಯನ್ನು ಘೋಷಿಸಲಾಗುವುದಿಲ್ಲ. ನೀವು ಮಾತುಕತೆಗಳಲ್ಲಿ ಭಾಗವಹಿಸಿದ್ದೀರಿ ಮತ್ತು ಅದೇ ಸಮಯದಲ್ಲಿ ಹೊಸ ರೀತಿಯ ಪ್ರತಿಭಟನೆಯನ್ನು ಘೋಷಿಸುತ್ತಲೇ ಇದ್ದೀರಿ ಮತ್ತು ಅದರಲ್ಲಿ ಯಶಸ್ವಿಯಾಗಿದ್ದೀರಿ. ಆದರೆ ನಾವು ಈ ವಿಷಯವನ್ನು ಎಂದಿಗೂ ಎತ್ತಲಿಲ್ಲ.

'ಚರ್ಚೆಯಲ್ಲಿ ಅಗತ್ಯವಿರುವ ದೃಷ್ಟಿಕೋನವು ಕಾಣೆಯಾಗಿದೆ ಎಂದು ಭಾರವಾದ ಹೃದಯದಿಂದ ನಾನು ನಿಮಗೆ ಹೇಳಲು ಬಯಸುತ್ತೇನೆ. ಹೀಗಾಗಿಯೇ ಎಷ್ಟೇ ಸುತ್ತಿನ ಮಾತುಕತೆ ನಡೆಸಿದರೂ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರಲು ನಮಗೆ ಸಾಧ್ಯವಾಗಲಿಲ್ಲ' ಎಂದು ತೋಮರ್ ವಿಡಿಯೊದಲ್ಲಿ ಹೇಳಿದ್ದಾರೆ.

ಸಮಸ್ಯೆಯನ್ನು ಪರಿಹರಿಸುವಲ್ಲಿ ಸರ್ಕಾರವು ತನ್ನ ಅತ್ಯುತ್ತಮ ಪ್ರಸ್ತಾಪವನ್ನು ರೈತರ ಮುಂದಿಟ್ಟಿದೆ. ಅದನ್ನು ಮರುಪರಿಶೀಲಿಸುವಂತೆ ನಾನು ನಿಮ್ಮನ್ನು ಕೋರುತ್ತೇನೆ ಮತ್ತು ನೀವೊಂದು ನಿರ್ಧಾರಕ್ಕೆ ಬಂದು ಮುಂದೆ ಬಂದರೆ ನಾವು ನಿಮ್ಮನ್ನು ಸ್ವಾಗತಿಸಲು ಸಿದ್ಧರಾಗುತ್ತೇವೆ ಎಂದು ಕೃಷಿ ಸಚಿವರು ಹೇಳಿದರು.

ಕಾರ್ಪೊರೇಟ್ ಪರವಾಗಿ ಕಂಡುಬರುವ ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ನೀಡುವಂತೆ ರೈತ ಮುಖಂಡರು ತಮ್ಮ ಬೇಡಿಕೆಗಳಿಗೆ ಅಂಟಿಕೊಂಡಿದ್ದರಿಂದ ಪ್ರತಿಭಟನಾನಿರತ ಕೃಷಿ ಸಂಘಟನೆಗಳೊಂದಿಗಿನ ಶುಕ್ರವಾರ ನಡೆದ 11 ಸುತ್ತಿನ ಮಾತುಕತೆಯಲ್ಲೂ ಯಾವುದೇ ನಿರ್ಣಯಕ್ಕೆ ಬರಲಾಗಲಿಲ್ಲ. ಸರ್ಕಾರವು ಈಗಾಗಲೇ 12-18 ತಿಂಗಳವರೆಗೆ ಕಾಯಿದೆಗಳನ್ನು ಸ್ಥಗಿತಗೊಳಿಸುವ ಪ್ರಸ್ತಾಪವನ್ನು ರೈತರ ಮುಂದಿಟ್ಟಿದೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದ ಹಾಗೂ ಕೇಂದ್ರ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ರೈತ ನಾಯಕರ ಜೊತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು