ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಪುಟ್ನಿಕ್–ವಿ’: ಪರಿಷ್ಕೃತ ಅರ್ಜಿ ಸಲ್ಲಿಸಲು ರೆಡ್ಡೀಸ್‌ ಲ್ಯಾಬ್‌ಗೆ ಸೂಚನೆ

Last Updated 6 ಅಕ್ಟೋಬರ್ 2020, 6:17 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ‘ಸ್ಪುಟ್ನಿಕ್–ವಿ’ ಕೋವಿಡ್‌ ಲಸಿಕೆಯ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್‌ ಟ್ರಯಲ್ಸ್ (ಮಾನವನ ಮೇಲೆ ಪರೀಕ್ಷೆ)‌ ನಡೆಸಲು ಪರಿಷ್ಕೃತ ಅರ್ಜಿ ಸಲ್ಲಿಸುವಂತೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿಯು ಡಾ.ರೆಡ್ಡೀಸ್‌ ಲ್ಯಾಬೊರೇಟರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಲಸಿಕೆಯ ಮೂರನೇ ಹಂತದ ಮಾನವನ ಮೇಲಿನ ಪರೀಕ್ಷೆಗೆ ಅನುಮತಿ ನೀಡುವಂತೆ ರೆಡ್ಡೀಸ್‌ ಲ್ಯಾಬ್‌ ಕಳೆದ ವಾರ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಸಂಸ್ಥೆಗೆ (ಡಿಸಿಜಿಐ) ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಸಿಡಿಎಸ್‌ಸಿಒನ ವಿಷಯ ತಜ್ಞ ಸಮಿತಿ (ಎಸ್‌ಇಸಿ) ಸೋಮವಾರ ಸಭೆ ನಡೆಸಿ, ಈ ವಿಷಯವನ್ನು ಚರ್ಚಿಸಿತ್ತು.

‘ಪರಿಷ್ಕೃತ ಅರ್ಜಿಯ ಜೊತೆಗೆ ಟ್ರಯಲ್ಸ್‌ ಕುರಿತ ಇನ್ನಷ್ಟು ಮಾಹಿತಿಗಳನ್ನು ಒದಗಿಸುವಂತೆ ರೆಡ್ಡೀಸ್‌ ಲ್ಯಾಬ್‌ಗೆ ವಿಷಯ ತಜ್ಞ ಸಮಿತಿ ಸೂಚಿಸಿದೆ. ಈ ಮಾಹಿತಿ ನೀಡದೇ, ರೆಡ್ಡೀಸ್‌ ಲ್ಯಾಬೊರೇಟರಿಯು ನೇರವಾಗಿ ಮೂರನೇ ಹಂತದ ಟ್ರಯಲ್ಸ್‌ ನಡೆಸುವಂತಿಲ್ಲ’ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ‘ಸ್ಪುಟ್ನಿಕ್‌–ವಿ’ ಲಸಿಕೆ ಮಾರಾಟ ಹಾಗೂ ಕ್ಲಿನಿಕಲ್‌ ಟ್ರಯಲ್ಸ್‌ ನಡೆಸಲು ರಷ್ಯಾದ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್‌ ಫಂಡ್‌ (ಆರ್‌ಡಿಐಎಫ್‌) ಹೈದರಾಬಾದ್‌ನ ರೆಡ್ಡೀಸ್‌ ಲ್ಯಾಬೊರೇಟರಿ ಜೊತೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಅನ್ವಯಆರ್‌ಡಿಐಎಫ್ ತಮಗೆ 10 ಕೋಟಿ ಡೋಸ್‌ಗಳನ್ನು ಒದಗಿಸಲಿದೆ ಎಂದು ಇತ್ತೀಚೆಗೆರೆಡ್ಡೀಸ್‌ ಲ್ಯಾಬೊರೇಟರಿ ತಿಳಿಸಿತ್ತು.

ಗಮಾಲೆಯಾ ನ್ಯಾಷನಲ್‌ ರೀಸರ್ಚ್‌ ಸೆಂಟರ್‌ ಆಫ್‌ ಎಪಿಡೆಮಿಯೊಲಜಿ ಆ್ಯಂಡ್‌ ಮೈಕ್ರೊಬಯಾಲಜಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌–ವಿ ಲಸಿಕೆಯ ಮೂರನೇ ಹಂತದ ಟ್ರಯಲ್ಸ್‌ ರಷ್ಯಾದಲ್ಲಿ ಈಗಾಗಲೇ ಶುರುವಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT