ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡು ಮಸೂದೆಗಳು ಸರಳ ಭಾಷೆಯಲ್ಲಿರಲಿ: ಕಾನೂನು ಕುರಿತ ಸ್ಥಾಯಿ ಸಮಿತಿ ಶಿಫಾರಸು

10 ವರ್ಷದಿಂದ ಬಾಕಿ ಇರುವ ಪ್ರಕರಣ ವಿಲೇವಾರಿ: ಸಿಎಟಿಗೆ ಸೂಚನೆ
Last Updated 2 ಏಪ್ರಿಲ್ 2023, 12:42 IST
ಅಕ್ಷರ ಗಾತ್ರ

ನವದೆಹಲಿ: ಮಸೂದೆಗಳನ್ನು ಸರಳ ಭಾಷೆಯಲ್ಲಿ ಸಿದ್ಧಪಡಿಸಿದರೆ ಅವುಗಳನ್ನು ಸಾಮಾನ್ಯ ಜನರೂ ಅರ್ಥ ಮಾಡಿಕೊಳ್ಳುತ್ತಾರೆ. ಜೊತೆಗೆ, ಉದ್ದೇಶಿತ ಕಾಯ್ದೆಯನ್ನು ರೂಪಿಸಲು ಇರುವ ಕಾರಣಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಹೇಳಿದೆ.

ಬಿಜೆಪಿಯ ಸಂಸದ ಸುಶೀಲ್‌ ಕುಮಾರ್ ಮೋದಿ ನೇತೃತ್ವದ ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಈ ಸಂಬಂಧ ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಸಲ್ಲಿಸಿದೆ.

‘ಸದ್ಯ, ಸಚಿವಾಲಯದಡಿ ಕಾರ್ಯನಿರ್ವಹಿಸುವ ಶಾಸಕಾಂಗ ಇಲಾಖೆಯು ಸಿದ್ಧಪಡಿಸುವ ಮಸೂದೆಗಳು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಇರುವುದಿಲ್ಲ. ಬುದ್ಧಿವಂತರು ಅಥವಾ ಕಾನೂನಿಗೆ ಸಂಬಂಧಿಸಿ ವಿಶೇಷ ಜ್ಞಾನ ಇರುವವರು ಮಾತ್ರ ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಈ ಕರಡು ಮಸೂದೆಗಳು ಇರುತ್ತವೆ’ ಎಂದು ಸಮಿತಿ ಹೇಳಿದೆ.

‘ವೈಯಕ್ತಿಕ ಡಿಜಿಟಲ್ ಮಾಹಿತಿ ಸಂರಕ್ಷಣೆ ಮಸೂದೆ– 2022, ಭಾರತೀಯ ದೂರಸಂಪರ್ಕ ಮಸೂದೆ–2022 ಸೇರಿದಂತೆ ಇತ್ತೀಚೆಗೆ ಹಲವು ಮಸೂದೆಗಳನ್ನು ಕೇಂದ್ರ ಸರ್ಕಾರ ಮಂಡಿಸಿ, ಅನುಮೋದನೆ ಪಡೆದಿದೆ. ಇಂತಹ ಮಸೂದೆಗಳು ಉದ್ದೇಶ ಹಾಗೂ ಪರಿಣಾಮಗಳನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದಾದಲ್ಲಿ, ಮಸೂದೆಗಳನ್ನು ಸರಳವಾದ ಭಾಷೆಯಲ್ಲಿ ಸಿದ್ಧಪಡಿಸಬೇಕು’ ಎಂದು ಸಮಿತಿ ಪ್ರತಿಪಾದಿಸಿದೆ.

ಸಿಐಸಿಗೆ ನೇರ ನೇಮಕಾತಿ– ಪರಿಶೀಲನೆಗೆ ಸೂಚನೆ: ಕೇಂದ್ರೀಯ ಮಾಹಿತಿ ಆಯೋಗದಲ್ಲಿ (ಸಿಐಸಿ) ಸಾಕಷ್ಟು ಸಂಖ್ಯೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ನೌಕರರಿದ್ದಾರೆ. ಹೀಗಾಗಿ, ನೇರ ನೇಮಕಾತಿ ಮೂಲಕ ಆಯೋಗದ ಹುದ್ದೆಗಳ ಭರ್ತಿಗೆ ಇರುವ ಅಡೆತಡೆಗಳ ಕುರಿತು ಪರಿಶೀಲನೆ ನಡೆಸುವಂತೆ ಸಿಬ್ಬಂದಿ ನೇಮಕಾತಿ ಆಯೋಗಕ್ಕೆ (ಎಸ್‌ಎಸ್‌ಸಿ) ಸಿಬ್ಬಂದಿ, ಸಾರ್ವಜನಿಕರ ಕುಂದುಕೊರತೆಗಳು, ಕಾನೂನು ಹಾಗೂ ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಸೂಚಿಸಿದೆ.

‘ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಾಯಂ ನೌಕರರಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬಲ್ಲರು. ಆದರೆ, ಅವರಿಗೆ ಪರ್ಯಾಯವಾಗಲಾರರು’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

10 ವರ್ಷದಿಂದ ಬಾಕಿ ಇರುವ ಪ್ರಕರಣ ವಿಲೇವಾರಿ: ಸಿಎಟಿಗೆ ಸೂಚನೆ
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಸಿಎಟಿ) 1,350 ಪ್ರಕರಣಗಳು ವಿಚಾರಣೆಗಾಗಿ 10 ವರ್ಷದಿಂದಲೂ ಬಾಕಿ ಇದ್ದು, ಅವುಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡುವಂತೆ ಸಂಸದೀಯ ಸ್ಥಾಯಿ ಸಮಿತಿಯೊಂದು ಸಿಎಟಿಗೆ ಸೂಚಿಸಿದೆ.

ವಿಶೇಷವಾಗಿ, ಪಿಂಚಣಿದಾರರು ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಿಬ್ಬಂದಿ, ಸಾರ್ವಜನಿಕರ ಕುಂದುಕೊರತೆಗಳು, ಕಾನೂನು ಹಾಗೂ ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.

‘ಸಿಎಟಿ ನಿಯಮಗಳ ಪ್ರಕಾರ, ಸಲ್ಲಿಕೆಯಾಗುವ ಅರ್ಜಿಯನ್ನು ಅದು ನೋಂದಣಿಯಾದ ದಿನದಿಂದ ಆರು ತಿಂಗಳ ಒಳಗಾಗಿ ವಿಚಾರಣೆ ನಡೆಸಿ, ವಿಲೇವಾರಿ ಮಾಡಬೇಕು. ಆದರೆ, 10 ವರ್ಷಗಳಿಂದಲೂ ಬಾಕಿ ಇರುವ ಪ್ರಕರಣಗಳ ಸಂಖ್ಯೆ 1,350. ಪಿಂಚಣಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ 3,716’ ಎಂದು ಸಮಿತಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT