ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗ ನಿರ್ಮಾಣವಾಯ್ತು, ವಾಜಪೇಯಿ ಗೆಳೆಯನ ಕನಸು ನನಸಾಯ್ತು...

‘ಅಟಲ್ ಸುರಂಗ‘: ಲಹೌಲ್–ಸ್ಪಿತಿ ಕಣಿವೆ ಜಿಲ್ಲೆಗಳಲ್ಲಿ ಸಂಭ್ರಮ
Last Updated 3 ಅಕ್ಟೋಬರ್ 2020, 11:04 IST
ಅಕ್ಷರ ಗಾತ್ರ

ಥೊಲಾಂಗ್‌ (ಹಿಮಾಚಲ ಪ್ರದೇಶ): ‘ಇಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಬೇಕೆಂಬುದು ನಮ್ಮ ತಂದೆಯ ದಶಕಗಳ ಕನಸಾಗಿದ್ದು. ಅಟಲ್ ಸುರಂಗ ಉದ್ಘಾಟನೆಯಾಗುವ ಮೂಲಕ ತಂದೆಯವರ ದಶಕಗಳ ಕನಸು ನನಸಾಗಿದೆ. ಲೌಹಲ್– ಸ್ಪಿತಿ ಕಣಿವೆಯ ಜನರ ಸಂಚಾರ ಸಂಕಷ್ಟ ಕೊನೆಯಾಗಿದೆ..

ಹೀಗೆ ಸಂತಸದಿಂದ ಮಾತನಾಡಿದವರು ಸ್ಪಿತಿ ಕಣಿವೆಯ 75ರ ಹರೆಯದ ಅಮರ್‌ ಸಿಂಗ್(75)‌. ಇವರು ಅರ್ಜುನ್ ಗೋಪಾಲ್ ಅಲಿಯಾಸ್ ತ್ಸಿದವ ಅವರ ಮಗ. ಇವರ ಇನ್ನೊಬ್ಬ ಮಗನ ಹೆಸರು ರಾಮ್‌ದೇವ್(61).ಅಮರ್‌ಸಿಂಗ್‌ ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕರಾಗಿದ್ದರು. ರಾಮ್‌ದೇವ್ (61) ವಾರ್ತಾ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದರು. ಈಗ ಇಬ್ಬರೂ ನಿವೃತ್ತರಾಗಿದ್ದಾರೆ. ‘ಅಟಲ್ ಟನಲ್‌‘ ನಿರ್ಮಾಣದ ಕನಸಿನ ಬೀಜ ಬಿತ್ತಿದವರು ಅರ್ಜುನ್ ಗೋಪಾಲ್‌.

ಅರ್ಜುನ್ ಗೋಪಾಲ್ ಅಲಿಯಾಸ್ ತ್ಸಿದವ, ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಆಪ್ತ ಗೆಳೆಯ. ಇವರಿಗೆ ಅಮರ್‌ಸಿಂಗ್ ಮತ್ತು ರಾಮ್‌ದೇವ್ ಇಬ್ಬರು ಮಕ್ಕಳು. ಈ ಅರ್ಜುನ್ ಗೋಪಾಲ್ ಅವರೇ, ವಾಜಪೇಯಿಯವರಿಗೆ ಸುರಂಗ ಮಾರ್ಗದ ಐಡಿಯಾ ನೀಡಿದ್ದು. ಇದನ್ನುಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಕೂಡ ನೆನಪಿಸಿಕೊಂಡಿದ್ದಾರೆ.

1998ರಲ್ಲಿ ಪ್ರಸ್ತಾವನೆ

ಗುಜರಾತ್‌ನ ವಡೋದರದಲ್ಲಿ 1942ರಲ್ಲಿ ನಡೆದಿದ್ದ ಆರ್‌ಎಸ್‌ಎಸ್‌ನ ಶಿಬಿರವೊಂದರಲ್ಲಿ ವಾಜಪೇಯಿ ಮತ್ತು ಅರ್ಜುನ್ ಗೋಪಾಲ್‌ ಗೆಳೆಯರಾಗಿದ್ದರು. ಆ ಗೆಳೆತನ ಅವರು ಪ್ರಧಾನಿಯಾದ ನಂತರವೂ ಮುಂದುವರಿದಿತ್ತು.

ಏತನ್ಮಧ್ಯೆ, ಲಹೌಲ್ – ಸ್ಪಿತಿ ಕಣಿವೆಯ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರೊಹ್ಟಂಗ್‌ ಸಮೀಪ ಸುರಂಗ ಮಾರ್ಗ ನಿರ್ಮಿಸಬೇಕೆಂದು ಅರ್ಜುನ್ ಗೋಪಾಲ್ ಯೋಚಿಸಿದರು. 1998ರಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಚಮನ್‌ಲಾಲ್ ಎಂಬುವವರ ಮೂಲಕ ಪ್ರಧಾನಿ ವಾಜಪೇಯಿಯವರನ್ನು ಭೇಟಿಯಾದರು. ಅವರಿಗೆ ಸುರಂಗ ನಿರ್ಮಿಸುವ ಕುರಿತು ಮನವಿ ಸಲ್ಲಿಸಿದರು.

ಅಷ್ಟೇ ಅಲ್ಲ, ಮುಂದೆ ಸುರಂಗ ನಿರ್ಮಾಣಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಹಾಗೂ ಪತ್ರ ವ್ಯವಹಾರ ಮಾಡುವುದಕ್ಕಾಗಿ ಗೋಪಾಲ್ ಅವರ ನೇತೃತ್ವದಲ್ಲಿ ‘ಲಹೌಲ್-ಸ್ಪಿಟಿ-ಪಂಗಿ ಜಂಜತಿ ಸೇವಾ ಸಮಿತಿ’ ರಚಿಸಲಾಯಿತು. ಗೋಪಾಲ್ ಅದಕ್ಕೆ ಸಂಸ್ಥಾಪಕ ಅಧ್ಯಕ್ಷರಾಗಿದ್ದರು.

2000ರಲ್ಲಿ ಅನುಮೋದನೆ

ಅರ್ಜುನ್ ಗೋಪಾಲ್ ಅವರ ಮನವಿ ಸ್ವೀಕರಿಸಿದ್ದ ವಾಜಪೇಯಿಯವರು, ಆ ಮನವಿಯ ಜತೆಗೆ ಪ್ರಸ್ತಾವನೆಯನ್ನು ರಕ್ಷಣಾ ಇಲಾಖೆ, ಹಣಕಾಸು ಇಲಾಖೆ ಮತ್ತು ಸಾರಿಗೆ ಸಚಿವಾಲಯಗಳಿಗೆ ಪತ್ರವ್ಯವಹಾರ ನಡೆಸಿದ್ದರು.

‘ಆರಂಭದಲ್ಲಿ ರಕ್ಷಣಾ ಸಚಿವಾಲಯ ಆಕ್ಷೇಪಣೆ ವ್ಯಕ್ತಪಡಿಸಿದ ನಂತರ, 2000ನೇ ಇಸವಿಯಲ್ಲಿ ಸರ್ಕಾರ ಸುರಂಗ ನಿರ್ಮಾಣಕ್ಕೆ ಅನುಮೋದನೆ ನೀಡಿತು. ಅದೇ ವರ್ಷದ ಜೂನ್‌ನಲ್ಲಿ ಕಿಲಾಂಗ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಾಜಪೇಯಿಯವರು ಸುರಂಗ ಮಾರ್ಗ ನಿರ್ಮಾಣದ ಯೋಜನೆಯನ್ನು ಘೋಷಿಸಿದರು‘ ಎಂದು ಅಮರ್‌ ಸಿಂಗ್‌ ನೆನಪಿಸಿಕೊಂಡಿದ್ದಾರೆ.

‘ನಮ್ಮ ತಂದೆ 2008ರಲ್ಲಿ ನಿಧನರಾದರು. ‘ಅಟಲ್ ಸುರಂಗ‘ ಉದ್ಘಾಟನೆಯ ಮೂಲಕಅವರು ಕಂಡ ಸುರಂಗದ ಕನಸು ನನಸಾಗಿದೆ‘ ಎಂದು ಅಮರ್‌ ಸಿಂಗ್ ಹೇಳಿದರು. ‘ಈ ಸುರಂಗ ಮಾರ್ಗದಿಂದ ಲೌಹಾಲ್ ಮತ್ತು ಸ್ಪಿತಿ ಕಣಿವೆಯ ಸುತ್ತಮುತ್ತಲಿನ ಜನರ ಆರ್ಥಿಕ ಸ್ಥಿತಿ ಉತ್ತಮವಾಗುವ ವಿಶ್ವಾಸವಿದೆ‘ ಎಂದು ಇನ್ನೊಬ್ಬ ಮಗ ರಾಮ್‌ದೇವ್ ಅಭಿಪ್ರಾಯಪಟ್ಟರು.

ಕಣಿವೆ ಜಿಲ್ಲೆಗಳಲ್ಲಿ ಅಭಿವೃದ್ಧಿ ಕನಸು

‘ಪ್ರತಿ ವರ್ಷ ಚಳಿಗಾಲದಲ್ಲಿ ಹಿಮಪಾತದಿಂದಾಗಿ ಈ ಭಾಗದ ರಸ್ತೆಗಳು ಬಂದ್‌ ಆಗುತ್ತವೆ. ಆ ಸಮಯದಲ್ಲಿ ಐದು ತಿಂಗಳು ಈ ಜಿಲ್ಲೆಗಳ ಜನ ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾರೆ. ಈಗ ಅಟಲ್ ಸುರಂಗ ಮಾರ್ಗ ಆ ಸಮಸ್ಯೆಗೆ ಬಹುದೊಡ್ಡ ಪರಿಹಾರ ನೀಡಿದೆ. ಮುಂದಿನ ದಿನಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳ ಬದಲಾವಣೆಗಳಾಗುತ್ತವೆ‘ ಎಂದು ರಾಮ್‌ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕಿರ್ಟಿಂಗ್‌ ಗ್ರಾಮದ ಪುಷ್ಪಾ ಸುರಂಗ ನಿರ್ಮಾಣವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ಇನ್ನುಮುಂದೆ ವೈದ್ಯಕೀಯ ನೆರವಿಗಾಗಿ ಬೇರೆ ಜಿಲ್ಲೆಗಳಿಗೆ ಹೋಗುವ ಅಗತ್ಯವಿಲ್ಲ. ಹಿಂದೆ ಗರ್ಭಿಣಿಯರನ್ನು ಹೆರಿಗೆ ಮಾಡಿಸಲು ಕುಲು–ಮನಾಲಿಗೆ ಕರೆದುಕೊಂಡು ಹೋಗಬೇಕಿತ್ತು. ಇನ್ನು ಮುಂದೆ ಆ ಸಮಸ್ಯೆ ಇರುವುದಿಲ್ಲ‘ ಎನ್ನುತ್ತಾರೆ.

‘ಚಳಿಗಾಲದಲ್ಲಿ ಕೆಟ್ಟ ಹವಾಮಾನದಿಂದಾಗಿ, ಇಲ್ಲಿಗೆ ಹೆಲಿಕಾಪ್ಟರ್‌ಗಳು ಬರುತ್ತಿರಲಿಲ್ಲ. ಹೀಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳಿಗೆ ಕರೆದೊಯ್ಯಲು ಆಗುತ್ತಿರಲಿಲ್ಲ. ಇದರಿಂದ ರೋಗಿಗಳು ಬಹಳ ತೊಂದರೆ ಅನುಭವಿಸುತ್ತಿದ್ದರು. ಈ ಸುರಂಗದ ಮೂಲಕ ರಸ್ತೆ ಸಂಪರ್ಕ ಕಲ್ಪಿಸಿರುವುದರಿಂದ ವರ್ಷಪೂರ್ತಿ ಸಂಚಾರ ಮಾಡಬಹುದು‘ ಎಂದು ಸಂತಸ ವ್ಯಕ್ತಪಡಿಸಿದರು ಗಹರ್ ಕಣಿವೆಯ ಸಂಜಯ್ ಷರ್ಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT