ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಆಸ್ತಿ ಜಪ್ತಿ ಮಾಡಿದ ಇ.ಡಿ

Last Updated 13 ಏಪ್ರಿಲ್ 2022, 12:28 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಜೈಲಿನಲ್ಲಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮತ್ತು ಅವರ ಕುಟಂಬ ಸದಸ್ಯರಿಗೆ ಸೇರಿದ 8 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯವು (ಇ.ಡಿ) ಬುಧವಾರ ಹೇಳಿದೆ.

‘ಮೊಹಮ್ಮದ್ ನವಾಬ್ ಮೊಹಮ್ಮದ್ ಇಸ್ಲಾಂ ಮಲಿಕ್ ಅಲಿಯಾಸ್ ನವಾಬ್ ಮಲಿಕ್, ಅವರ ಕುಟುಂಬ ಸದಸ್ಯರು, ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈ. ಲಿಮಿಟೆಡ್ ಮತ್ತು ಮಲಿಕ್ ಇನ್‌ಫ್ರಾಸ್ಟ್ರಕ್ಚರ್‌ಗೆ ಸೇರಿದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ’ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ.

ನವಾಬ್ ಅವರಿಗೆ ಸೇರಿರುವ ಗೋವಾಲಾ ಕಾಂಪೌಂಡ್ ಮತ್ತು ಮುಂಬೈನ ಉಪನಗರ ಕುರ್ಲಾದಲ್ಲಿರುವ ಕಮರ್ಷಿಯಲ್ ಯೂನಿಟ್, ಮೂರು ಫ್ಲ್ಯಾಟ್‌ಗಳು, ಬಾಂದ್ರಾದಲ್ಲಿರುವ ಎರಡು ವಸತಿ ಫ್ಲ್ಯಾಟ್‌ಗಳು ಹಾಗೂ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯಲ್ಲಿರುವ 147.79 ಎಕರೆ ಕೃಷಿ ಜಮೀನನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದೆ.

ವಿಚಾರಣೆಗೆ ಒಪ್ಪಿಗೆ: ಈ ನಡುವೆ ‘ತಮ್ಮನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ’ ಕೋರಿ ನವಾಬ್ ಮಲ್ಲಿಕ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಬುಧವಾರ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ನವಾಬ್ ಆಸ್ತಿಗೆ ದಾವೂದ್ ನಂಟು

ಮುಟ್ಟುಗೋಲು ಹಾಕಿಕೊಂಡಿರುವ ನವಾಬ್ ಮಲಿಕ್ ಅವರ ಆಸ್ತಿಗಳಲ್ಲಿ ಹಲವು ಆಸ್ತಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಅವರ ಸಹಚರರೊಂದಿಗೆ ನಂಟು ಹೊಂದಿರುವ ಕುರಿತು ಜಾರಿ ನಿರ್ದೇಶನಾಲಯವು ದೃಢೀಕರಿಸಿದೆ.

‘ದಾವೂದ್ ಇಬ್ರಾಹಿಂ ಭಾರತವನ್ನು ತೊರೆದ ನಂತರ ಹಸೀನಾ ಪರ್ಕರ್ (ದಾವೂದ್ ಸಹೋದರಿ) ಮತ್ತು ಇತರರ ಮೂಲಕ ಭಾರತದಲ್ಲಿ ತನ್ನ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಾರಂಭಿಸಿದನು’ ಎನ್‌ಐಎ ತನ್ನ ಎಫ್‌ಐಆರ್‌ನಲ್ಲಿ ತಿಳಿಸಿದೆ.

ಇದಕ್ಕೆ ಸಾಕ್ಷ್ಯವೆಂಬಂತೆ ಮುನಿರಾ ಪ್ಲಂಬರ್ ಎಂಬುವರಿಗೆ ಸೇರಿದ್ದ ಆಸ್ತಿಯನ್ನು ನವಾಬ್ ಮಲಿಕ್ ನೇತೃತ್ವದ ಹಾಗೂ ಅವರ ಕುಟುಂಬ ಸದಸ್ಯರ ಒಡೆತನದ ಸಾಲಿಡಸ್ ಇನ್ವೆಸ್ಟ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ ಅತಿಕ್ರಮಿಸಿಕೊಂಡಿದೆ. ಇದಕ್ಕೆ ಹಸೀನಾ ಪಾರ್ಕರ್ ಸೇರಿದಂತೆ ದಾವೂದ್ ಇಬ್ರಾಹಿಂ ಗ್ಯಾಂಗ್ (ಡಿ ಗ್ಯಾಂಗ್‌) ಸದಸ್ಯರ ಸಕ್ರಿಯ ಸಹಕಾರವಿತ್ತು’ ಎಂದು ಇ.ಡಿ ಮಾಹಿತಿ ನೀಡಿದೆ.

‘ಮುನಿರಾ ಪ್ಲಂಬರ್ ಮತ್ತು ಅವರ ತಾಯಿ ಮರಿಯಂಬಾಯಿ ಅವರಿಗೆ ಸೇರಿದ ಆಸ್ತಿಯನ್ನು ನವಾಬ್ ಒಡೆತನದ ಕಂಪನಿಯು ಕಾನೂನುಬಾಹಿರವಾಗಿ ಸ್ವಾಧೀನಪಡಿಸಿಕೊಂಡಿದೆ. ಇದರ ಜತೆಗೆ ಮುಂಬೈನಲ್ಲಿರುವ ಮೂರು ಎಕರೆ ಭೂಮಿ ಮತ್ತು ಕಟ್ಟಡಗಳನ್ನೂ ಕಬಳಿಸಲಾಗಿದೆ. ನಕಲಿ ದಾಖಲೆಗಳ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡಿಕೊಳ್ಳಲಾಗಿದೆ’ ಎಂದೂ ಇ.ಡಿ ಆರೋಪಿಸಿದೆ.

‘ಮೂರು ದಶಕಗಳ ಹಿಂದೆ ಪ್ರಾಮಾಣಿಕವಾಗಿ ದುಡಿದು ಆಸ್ತಿಯನ್ನು ಖರೀದಿಸಿದ್ದೇನೆ’ ಎಂದು ಮಲಿಕ್ ಹೈಕೋರ್ಟ್‌ನಲ್ಲಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT