ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ, 12 ಕೋವಿಡ್ ರೋಗಿಗಳ ಸಾವು

Last Updated 1 ಮೇ 2021, 13:49 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ತೀವ್ರ ಕೊರತೆಯನ್ನು ಎತ್ತಿ ತೋರಿಸುವಂಥ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹಿರಿಯ ವೈದ್ಯರೊಬ್ಬರು ಸೇರಿದಂತೆ 12 ಕೋವಿಡ್ ರೋಗಿಗಳು ಆಮ್ಲಜನಕದ ಕೊರತೆಯಿಂದ ಇಲ್ಲಿನ ಬಾತ್ರಾ ಆಸ್ಪತ್ರೆಯಲ್ಲಿ ಶುಕ್ರವಾರ ಸಾವಿಗೀಡಾಗಿದ್ದಾರೆ.

‘ಮೃತಪಟ್ಟವರಲ್ಲಿ ಕೋವಿಡ್‌ 19 ಆರೈಕೆಯಲ್ಲಿದ್ದ ಬಾತ್ರಾ ಆಸ್ಪತ್ರೆಯ ಗ್ಯಾಸ್ಟ್ರೊ ಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಆರ್.ಕೆ. ಹಿಮ್‌ಥಾನಿ ಅವರೂ ಸೇರಿದ್ದಾರೆ. ಹಿಮ್‌ಥಾನಿ ಅವರನ್ನು 15 ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು’ ಎಂದು ಬಾತ್ರಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಸ್‌.ಸಿ.ಎಲ್. ಗುಪ್ತಾ ತಿಳಿಸಿದ್ದಾರೆ.

ಐಸಿಯುನಲ್ಲಿ ಸಾವನ್ನಪ್ಪಿದ 12 ಮಂದಿಯಲ್ಲಿ ಆರು ಮಂದಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅವಶ್ಯಕತೆ ಇತ್ತು ಎಂದೂ ಅವರು ಮಾಹಿತಿ ನೀಡಿದ್ದಾರೆ.

‘ಶನಿವಾರ ಬೆಳಿಗ್ಗೆಯೇ ಆಸ್ಪತ್ರೆಯಲ್ಲಿ 2,500 ಲೀಟರ್ ಮಾತ್ರ ಆಮ್ಲಜನಕವಿದೆ. ನಮಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ತುತ್ತು ಅಗತ್ಯವಿದೆ ಎಂದು ನಾವು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಆದರೆ, ನಮಗೆ ತಕ್ಷಣಕ್ಕೆ ಯಾವುದೇ ಸ್ಪಂದನೆ ಸಿಗಲಿಲ್ಲ. ಮಧ್ಯಾಹ್ನ 12.30ರ ವೇಳೆಗೆ ನಮ್ಮ ಬಳಿ ಇರುವ ಆಮ್ಲಜನಕ ಸಂಗ್ರಹ ಖಾಲಿಯಾಯಿತು. ಮಧ್ಯಾಹ್ನ 1.35ಕ್ಕೆ ಆಮ್ಲಜನಕ ಟ್ಯಾಂಕರ್ ಬಂದಿತು. ಆದರೆ, ಆ ವೇಳೆಗಾಗಲೇ ಆಸ್ಪತ್ರೆಯಲ್ಲಿದ್ದ 12 ರೋಗಿಗಳು ಸಾವಿಗೀಡಾಗಿದ್ದರು. ಸಕಾಲಕ್ಕೆ ಆಮ್ಲಜನಕ ದೊರೆತಿದ್ದರೆ ಅವರನ್ನು ಉಳಿಸಬಹುದಿತ್ತು’ ಎಂದು ಡಾ. ಗುಪ್ತಾ ಹೇಳಿದ್ದಾರೆ.

‘ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಪರಿಸ್ಥಿತಿ ಹೀಗಿದೆ ಎಂದರೆ, ಇನ್ನು ದೇಶದ ಇತರ ಕಡೆಗಳಲ್ಲಿ ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಬಹುದು’ ಎಂದೂ ಅವರು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಈ ಸುದ್ದಿ ತುಂಬಾ ನೋವಿನಿಂದ ಕೂಡಿದೆ. ಸಮಯಕ್ಕೆ ಸರಿಯಾಗಿ ಆಮ್ಲಜನಕ ನೀಡಿದ್ದರೆ ಅವರ ಜೀವವನ್ನು ಉಳಿಸಬಹುದಿತ್ತು. ದೆಹಲಿಗೆ ಅಗತ್ಯವಿರುವ ಪ್ರಮಾಣದ ಆಮ್ಲಜನಕ ನೀಡಬೇಕು. ದೆಹಲಿಗೆ 976 ಟನ್‌ಗಳಷ್ಟು ಆಮ್ಲಜನಕದ ಅಗತ್ಯವಿದೆ. ಆದರೆ, ನಿನ್ನೆ ಶುಕ್ರವಾರ ಕೇವಲ 312 ಟನ್ ಮಾತ್ರ ಆಮ್ಲಜನಕ ನೀಡಲಾಗಿದೆ. ಜನರು ಸಾಯುತ್ತಿದ್ದಾರೆ. ದೆಹಲಿ ಹೇಗೆ ಉಸಿರಾಡಬೇಕು?’ ಎಂದಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT