ಗುರುವಾರ , ಆಗಸ್ಟ್ 18, 2022
25 °C

ಆಟೋ ಚಾಲಕರಾಗಿದ್ದ ಶಿಂಧೆ ಈಗ ‘ಮಹಾ’ ಸಿಎಂ: ಸಿಎಂ ಆಗಿದ್ದ ಫಡಣವೀಸ್ ಈಗ ಡಿಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದ 20ನೇ ಮುಖ್ಯಮಂತ್ರಿಯಾಗಿ ಶಿವಸೇನಾ ನಾಯಕ ಏಕನಾಥ ಶಿಂಧೆ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಪ್ರಮಾಣ ವಚನ ಬೋಧಿಸಿದರು.

ಶಿಂಧೆ ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ದೇವೇಂದ್ರ ಫಡಣವೀಸ್‌ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಶಿಂಧೆ ಈ ಹಿಂದಿನ ಮಹಾ ವಿಕಾಸ ಆಘಾಡಿ (ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌) ಸರ್ಕಾರದಲ್ಲಿ ಗೃಹ, ನಗರಾಭಿವೃದ್ಧಿ, ಅರಣ್ಯ, ಪ್ರವಾಸೋದ್ಯಮ, ಸಂಸದೀಯ ವ್ಯವಹಾರ ಖಾತೆ ಸಚಿವರಾಗಿದ್ದರು.

ಠಾಣೆಯಲ್ಲಿ ಆರಂಭದ ದಿನಗಳಲ್ಲಿ ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಏಕನಾಥ ಶಿಂಧೆ, ಶಿವಸೇನಾ ಸೇರಿ, ತಮ್ಮ ಸಂಘಟನಾ ಕೌಶಲದಿಂದ ಪಕ್ಷದಲ್ಲಿ ಹಂತಹಂತವಾಗಿ ಮೇಲೇರಿದರು.

ಪಕ್ಷ ನಿಷ್ಠ ಹಾಗೂ ಸಂಘಟನಾ ಚತುರ ಎಂಬ ವಿಶೇಷಣಗಳಿಗೆ ಏಕನಾಥ ಶಿಂಧೆ ಸರಿ ಹೊಂದುತ್ತಾರೆ. ಸಮಸ್ಯೆಗಳು ಎದುರಾದಾಗ ಅಥವಾ ಪ್ರಮುಖ ಕೆಲಸಗಳಿದ್ದಾಗ ಉದ್ಧವ್ ಠಾಕ್ರೆ ಅವರು ಮಾಡುವ ಕೆಲವು ಕರೆಗಳಲ್ಲಿ ಒಂದು ಕರೆಯಂತೂ ಶಿಂಧೆ ಅವರಿಗೆ ಹೋಗುತ್ತಿತ್ತು ಎನ್ನಲಾಗಿದೆ‌.

ಬಾಳಾ ಠಾಕ್ರೆ ಅವರು ಹಿಂದುತ್ವದ ನೆಲೆಗಟ್ಟಿನಲ್ಲಿ ಕಟ್ಟಿದ ಶಿವಸೇನಾವನ್ನು ಇಷ್ಟಪಟ್ಟು ಸೇರಿದ್ದ ಶಿಂಧೆ, ಮತ್ತೊಬ್ಬ ಮುಖಂಡ ಠಾಣೆಯ ಆನಂದ್ ದಿಘೆ ಅವರ ನೆರಳಿನಲ್ಲಿ ಬೆಳೆದರು. 2001ರಲ್ಲಿ ದಿಘೆ ಸಾವಿನ ಬಳಿಕ ಆ ಭಾಗದಲ್ಲಿ ಪಕ್ಷದ ಸಂಘಟನೆ ಜವಾಬ್ದಾರಿ ವಹಿಸಿಕೊಂಡರು. 1997ರಲ್ಲಿ ಪುರಸಭೆಯ ಚುನಾವಣೆಯಲ್ಲಿ ಗೆದ್ದ ಅವರು 2004ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈಗ ನಾಲ್ಕನೇ ಬಾರಿ ಶಾಸಕರಾಗಿದ್ದಾರೆ. ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಕೆಲ ಸಮಯ ಕೆಲಸ ಮಾಡಿದ್ದಾರೆ. ಇವರ ಪುತ್ರ ಡಾ. ಶ್ರೀಕಾಂತ್ ಶಿಂಧೆ ಅವರು ಲೋಕಸಭಾ ಸದಸ್ಯರಾಗಿದ್ದಾರೆ.

ಸದ್ಯ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ದೇವೇಂದ್ರ ಫಡಣವೀಸ್‌ ಮಹಾರಾಷ್ಟ್ರ ಬಿಜೆಪಿಯ ಪ್ರಭಾವಿ ನಾಯಕ. ಅವರು ಈ ಹಿಂದೆ 2014ರ ಅಕ್ಟೋಬರ್‌ನಿಂದ 2019ರ ನವೆಂಬರ್‌ ವರೆಗೆ ಮುಖ್ಯಮಂತ್ರಿಯಾಗಿದ್ದರು. ನಂತರ ಚುನಾವಣೆ ನಡೆದು, ಎನ್‌ಸಿಪಿ ಬಣದೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದ ಅವರು, 2019ರ ನವೆಂಬರ್‌ 23ರಿಂದ 28ರ ವರೆಗೆ ಅತ್ಯಲ್ಪ ಅವಧಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ, ಅಧಿಕಾರದಿಂದ ಕೆಳಗಿಳಿದಿದ್ದರು.

ಶಿಂಧೆ ಅವರು ಠಾಣೆ ಪ್ರಾಂತ್ಯದ ಕೊಪ್ರಿ–ಪಚ್ಪಖಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ, ದೇವೇಂದ್ರ ಫಡಣವೀಸ್‌ ಅವರು ನಾಗ್ಪುರ ನೈಋತ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು