ಶನಿವಾರ, ಫೆಬ್ರವರಿ 27, 2021
30 °C

90ರ ಇಳಿವಯಸ್ಸಿನಲ್ಲೂ ಕಾರು ಚಲಾಯಿಸಿದ ಅಜ್ಜಿ!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಠಾಣೆ: ಇನ್ನೇನು ಕೆಲವೇ ತಿಂಗಳಲ್ಲಿ 90ನೇ ವಯಸ್ಸಿಗೆ ಕಾಲಿಡುತ್ತಿರುವ ಮಹಾರಾಷ್ಟ್ರದ ಠಾಣೆ ಮೂಲದ ಅಜ್ಜಿಯೊಬ್ಬರು ಇದೀಗ ಎಲ್ಲರ ಮನೆಮಾತಾಗಿದ್ದಾರೆ. ಈ ಇಳಿವಯಸ್ಸಿನಲ್ಲೂ ಅವರು ಕಾರು ಓಡಿಸುತ್ತಿರುವ ವಿಡಿಯೊ ಇದೀಗ ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಅವರ ಧೈರ್ಯವನ್ನು ಹಾಡಿಹೊಗಳಿದ್ದಾರೆ.

ಗಂಗಾಬಾಯ್‌ ಮಿರ್ಕುಟೆ ಹೆಸರಿನ ಈ ಅಜ್ಜಿ, ಜೀವನದಲ್ಲಿ ಛಲ, ದೃಢವಿಶ್ವಾಸ ಮುಖ್ಯವೇ ಹೊರತು ವಯಸ್ಸು ಎನ್ನುವುದಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದಾರೆ. ಇದೀಗ, ಈ ವಯಸ್ಸಿನಲ್ಲಿ ಅವರಿಗೆ ಚಾಲನಾ ಪರವಾನಗಿ ದೊರೆಯುವುದು ಅನುಮಾನವಾದರೂ, ಅವರ ಕುಟುಂಬವು ಅವರಿಗೆ ಕಲಿಕಾ ಚಾಲನಾ ಪರವಾನಗಿ ಮಾಡಿಸಿಕೊಡುವ ಪ್ರಯತ್ನದಲ್ಲಿದೆ. 

‘ನನಗೆ ಕಾರು ಚಾಲನೆ ಕಲಿಯಬೇಕೆಂದಿತ್ತು. ಕೆಲ ವರ್ಷಗಳ ಹಿಂದೆ ನನ್ನ ಮೊಮ್ಮಗ ನನಗೆ ಕಾರು ಕಲಿಸಿದ. ಈಗಲೂ ವಿಶ್ವಾಸದೊಂದಿಗೆ ಕಾರು ಚಲಾಯಿಸಬಲ್ಲೆ’ ಎಂದು ಗಂಗಾಬಾಯ್‌ ಹೇಳಿದರು. ‘ಅಜ್ಜಿ 1931ರಲ್ಲಿ ಜನಿಸಿದ್ದರು, ಮುಂದಿನ ಜೂನ್‌ 1ಕ್ಕೆ ಅವರಿಗೆ 90 ವರ್ಷ ಪೂರ್ಣಗೊಳ್ಳಲಿದೆ’ ಎಂದು ಮೊಮ್ಮಗ ವಿಕಾಸ್‌ ಭೋಯಿರ್‌ ಹೇಳಿದರು. 

‘ಸುಮಾರು ಮೂರು ವರ್ಷಗಳ ಹಿಂದೆ ಖರಾಡಿಯಲ್ಲಿರುವ ನಮ್ಮ ಮನೆಗೆ ಅವರು ಬಂದಿದ್ದರು. ಆ ಸಂದರ್ಭದಲ್ಲಿ ಅವರು ಅಸ್ವಸ್ಥಗೊಂಡಿದ್ದರು, ಸ್ಥಳೀಯ ವೈದ್ಯರಲ್ಲಿಗೆ ನಾನೇ ಕಾರು ಚಲಾಯಿಸಿಕೊಂಡು ಅವರನ್ನು ಕರೆದೊಯ್ದಿದ್ದೆ. ಕಾರಿನಲ್ಲಿ ಹೋಗುವಾಗ, ನೀವು ಕಾರು ಚಲಾಯಿಸುತ್ತೀರಾ ಎಂದು ಕೇಳಿದ್ದೆ. ಇದಕ್ಕೆ ಅವರು ‘ಏಕಿಲ್ಲ’ ಎಂದು ಉತ್ತರಿಸಿದ್ದರು. ನಂತರದಲ್ಲಿ ನಾನು ಅವರಿಗೆ ಕಾರು ಕಲಿಸಿದೆ, ಅವರು ಮೈದಾನದಲ್ಲಿ ಕಾರು ಕಲಿಯಲು ಆರಂಭಿಸಿದರು’ ಎಂದು ವಿಕಾಸ್‌ ತಿಳಿಸಿದರು. 

‘ಇತ್ತೀಚೆಗೆ ನಾನು ಹೊಸ ಕಾರು ಖರೀದಿಸಿ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಈ ಸಂದರ್ಭದಲ್ಲಿ ತಕ್ಷಣವೇ ನನ್ನ ಕಾರಿನ ಚಾಲಕನ ಸೀಟಿನಲ್ಲಿ ಕುಳಿತು ಚಾಲನೆ ಮಾಡಿದರು. ಇದನ್ನು ನಾನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ. ಅವರ ಕೌಶಲ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದರು. 

ಮಾನಸಿಕವಾಗಿ ಹಾಗೂ ದೈಹಿಕವಾಗಿ ಯಾರು ಸ್ವಸ್ಥರಾಗಿದ್ದಾರೋ ಅವರು ಚಾಲನಾ ಪರವಾನಗಿ ಪಡೆಯಬಹುದು. ಇದಕ್ಕೆ ಗರಿಷ್ಠ ವಯಸ್ಸಿನ ಮಿತಿ ಇಲ್ಲ ಎಂದು ಆರ್‌ಟಿಒದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು