ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಥೂರಾಂ ಗೋಡ್ಸೆ ನನ್ನ ಆದರ್ಶ’ ವಿಷಯದ ಕುರಿತು ಭಾಷಣ ಸ್ಪರ್ಧೆ: ಅಧಿಕಾರಿ ಅಮಾನತು

Last Updated 16 ಫೆಬ್ರುವರಿ 2022, 12:44 IST
ಅಕ್ಷರ ಗಾತ್ರ

ಅಹಮದಾಬಾದ್: ಮಹಾತ್ಮ ಗಾಂಧಿ ಅವರ ಹಂತಕ ‘ನನ್ನ ಆದರ್ಶ ವ್ಯಕ್ತಿ ನಾಥೂರಾಂ ಗೋಡ್ಸೆ’ ವಿಷಯದ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಆಯೋಜಿಸಿದ್ದಕ್ಕಾಗಿ ಗುಜರಾತ್ ಸರ್ಕಾರವು, ವಲ್‌ಸಾಡ್ ಜಿಲ್ಲೆಯ ಪ್ರೊಬೇಷನರಿ ಯುವ ಅಭಿವೃದ್ಧಿ ಅಧಿಕಾರಿಯನ್ನು ಬುಧವಾರ ಅಮಾನತುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನನ್ನ ಆದರ್ಶ ವ್ಯಕ್ತಿ ನಾಥೂರಾಂ ಗೋಡ್ಸೆ’ ಎಂಬ ವಿಷಯದ ಕುರಿತ ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಗೆದ್ದಿದ್ದಾಳೆ ಎಂದು ವಲ್‌ಸಾಡ್ ಜಿಲ್ಲೆಯ ಸ್ಥಳೀಯ ಪತ್ರಿಕೆಗಳು ವರದಿ ಪ್ರಕಟಿಸಿದಾಗ ಈ ವಿಷಯವು ಬುಧವಾರ ಬೆಳಕಿಗೆ ಬಂದಿದೆ.

‘ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಪ್ರೊಬೇಷನರಿ ವರ್ಗ- 2 ಜಿಲ್ಲಾ ಯುವ ಅಭಿವೃದ್ಧಿ ಅಧಿಕಾರಿ ಮಿತಾಬೆನ್ ಗವ್ಲಿ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಗುಜರಾತ್‌ನ ರಾಜ್ಯ ಕ್ರೀಡಾ, ಯುವ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಚಿವ ಹರ್ಷ್ ಸಂಘ್ವಿ ತಿಳಿಸಿದ್ದಾರೆ.

‘ಈ ಸಂಬಂಧ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ಇದಕ್ಕೆ ಜವಾಬ್ದಾರರಾದ ಎಲ್ಲರನ್ನೂ ಅಮಾನತುಗೊಳಿಸಲಾಗುವುದು’ ಎಂದೂ ಅವರು ಹೇಳಿದ್ದಾರೆ.

ವಲ್‌ಸಾಡ್ ಜಿಲ್ಲಾ ಯುವ ಅಭಿವೃದ್ಧಿ ಕಚೇರಿಯು ಇಲ್ಲಿನ ಖಾಸಗಿ ಶಾಲೆ ಕುಸುಮ್ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ‘ಮಕ್ಕಳ ಪ್ರತಿಭಾ ಶೋಧ’ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ‘ನಾಥೂರಾಂ ಗೋಡ್ಸೆ ನನ್ನ ಆದರ್ಶ’ ಎನ್ನುವ ಭಾಷಣ ಸ್ಪರ್ಧೆಯೂ ಇತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಘಟಕರು ಬಹುಮಾನವನ್ನೂ ನೀಡಿದ್ದರು. ಭಾಷಣ ಸ್ಪರ್ಧೆಯಲ್ಲಿ ‘ನಾನು ಆಕಾಶದಲ್ಲಿ ಹಾರುವ ಪಕ್ಷಿಗಳನ್ನು ಮಾತ್ರ ಇಷ್ಟಪಡುತ್ತೇನೆ’ ಮತ್ತು ‘ನಾನು ವಿಜ್ಞಾನಿಯಾಗುತ್ತೇನೆ ಆದರೆ ಅಮೆರಿಕಕ್ಕೆ ಹೋಗುವುದಿಲ್ಲ’ ಎನ್ನುವ ವಿಷಯಗಳೂ ಇದ್ದವು ಎಂದು ಜಿಲ್ಲೆಯ ಪ್ರಾಥಮಿಕ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಸ್ಪರ್ಧೆಯ ವಿಷಯವು ವಿವಾದಕ್ಕೀಡಾಗುತ್ತಿದ್ದಂತೆಯೇ ‘ಇಡೀ ಕಾರ್ಯಕ್ರಮವನ್ನು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಶಾಲಾ ಆವರಣವನ್ನು ನೀಡಲಾಗಿತ್ತು. ಗೋಡ್ಸೆ ಸೇರಿದಂತೆ ಯಾವುದೇ ಸ್ಪರ್ಧೆಗೆ ನಮ್ಮ ಶಾಲೆಯು ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ’ ಎಂದು ಕುಸುಮ್ ವಿದ್ಯಾಲಯದ ಪ್ರಾಂಶುಪಾಲರಾದ ಅರ್ಚನಾ ದೇಸಾಯಿ ವಿವರಣೆ ನೀಡಿದ್ದಾರೆ.

ಭಾಷಣ ಸ್ಪರ್ಧೆಯ ಕುರಿತು ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಸೇರಿದಂತೆ ಹಲವರು ‘ನವ ಭಾರತದಲ್ಲಿ ಕೊಲೆಗಡುಕ ವೀರರು’ ಎಂದು ಟ್ವೀಟ್ ಮಾಡಿದ್ದರು. ಈ ಭಾಷಣ ಸ್ಪರ್ಧೆಗೆ ಟ್ವಿಟ್ಟರ್‌ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಅವರನ್ನು ಆರಾಧಿಸಿದ್ದ ಘಟನೆಗಳು ಈ ಹಿಂದೆಯೂ ಗುಜರಾತ್‌ನ ಸೂರತ್ ಮತ್ತು ಜಾಮ್‌ನಗರದಲ್ಲೂ ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT