ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆಗೆ ನೌಕರ ಒತ್ತಾಯ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್

Last Updated 12 ಸೆಪ್ಟೆಂಬರ್ 2021, 10:42 IST
ಅಕ್ಷರ ಗಾತ್ರ

ನವದೆಹಲಿ: ‘ನಿರ್ದಿಷ್ಟವಾದ ಸ್ಥಳಕ್ಕೇ ತನ್ನನ್ನು ವರ್ಗಾವಣೆ ಮಾಡುವಂತೆ ಉದ್ಯೋಗಿ ಒತ್ತಾಯ ಮಾಡುವಂತಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗದಾತ ತನ್ನ ನೌಕರರನ್ನು ಸ್ಥಳಾಂತರಿಸಬಹುದು’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಅನಿರುದ್ಧ ಬೋಸ್‌ ಅವರಿರುವ ನ್ಯಾಯಪೀಠ, ಉಪನ್ಯಾಸಕಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಹತ್ವದ ಆದೇಶ ನೀಡಿದೆ.

‘ಇಂಥದೇ ಸ್ಥಳಕ್ಕೆ ತನ್ನನ್ನು ವರ್ಗಾವಣೆ ಮಾಡಿ ಅಥವಾ ವರ್ಗಾವಣೆ ಮಾಡಬಾರದು ಎಂದು ನೌಕರ ಒತ್ತಾಯ ಮಾಡುವಂತಿಲ್ಲ. ಅವಶ್ಯಕತೆಯನ್ನು ಪರಿಗಣಿಸಿ, ಉದ್ಯೋಗದಾತ ತನ್ನ ನೌಕರರನ್ನು ವರ್ಗಾವಣೆ ಮಾಡುತ್ತಾರೆ’ ಎಂದು ನ್ಯಾಯಪೀಠ ಹೇಳಿದೆ.

ಅಮ್ರೋಹಾದಿಂದ ಗೌತಮಬುದ್ಧ ನಗರದಲ್ಲಿರುವ ಕಾಲೇಜಿಗೆ ವರ್ಗಾವಣೆ ಕೋರಿ ಉಪನ್ಯಾಸಕಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆ 2017ರ ಸೆಪ್ಟೆಂಬರ್‌ನಲ್ಲಿ ತಿರಸ್ಕರಿಸಿತ್ತು.

ತನ್ನ ಅರ್ಜಿಯನ್ನು ಇಲಾಖೆ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಉಪನ್ಯಾಸಕಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿ, 2017ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ತೀರ್ಪು ನೀಡಿತ್ತು.

‘ಗೌತಮಬುದ್ಧನಗರದ ಕಾಲೇಜಿನಲ್ಲಿ 13 ವರ್ಷಗಳ ಕಾಲ ಉಪನ್ಯಾಸಕಿ ಸೇವೆ ಸಲ್ಲಿಸಿದ್ದು, ಈಗ ಮತ್ತೆ ಅದೇ ಕಾಲೇಜಿಗೆ ವರ್ಗಾವಣೆ ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವುದು ಸಮರ್ಥನೀಯವಲ್ಲ’ ಎಂದು ಹೈಕೋರ್ಟ್‌ ಹೇಳಿತ್ತು.

‘ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಉಪನ್ಯಾಸಕಿ ಅರ್ಜಿ ಸಲ್ಲಿಸಬಹುದು. ಆದರೆ, ಈಗಾಗಲೇ ತಾವು ಕಾರ್ಯನಿರ್ವಹಿಸಿರುವ ಸ್ಥಳಕ್ಕೇ ವರ್ಗಾಯಿಸಬೇಕು ಎಂದು ಕೇಳುವಂತಿಲ್ಲ’ ಎಂದೂ ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿತ್ತು.

ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT