ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪ್ರಧಾನಿ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಿಜೆಪಿ ಮೈತ್ರಿ ತೊರೆದು ಕಾಂಗ್ರೆಸ್, ಆರ್‌ಜೆಡಿ ಜತೆ ಸೇರಿದ್ದಾರೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಅವರಿಗೆ ಪ್ರಧಾನಿ ಹುದ್ದೆ ಮೇಲಿನ ಮಹತ್ವಾಕಾಂಕ್ಷೆ ಜಾಗೃತವಾಗುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾದಲ್ಲಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಶಾ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಜೆಡಿಯು ವರಿಷ್ಠರು ಮಾತು ಕೊಟ್ಟಿದ್ದಾರೆ. ಯಾವಾಗ ಅದನ್ನು ಮಾಡಲು ಇಚ್ಛಿಸಿದ್ದಾರೆ ಎಂಬುದನ್ನು ಘೋಷಿಸಬೇಕು ಎಂದು ಶಾ ಪ್ರಶ್ನಿಸಿದ್ದಾರೆ.
ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡಿದ ಅವರು, ಬಿಹಾರವನ್ನು ಕಾಂಗ್ರೆಸ್ ಮತ್ತು ಆರ್‌ಜೆಡಿ ಜಂಗಲ್ ರಾಜ್ ಮಾಡಿವೆ ಎಂದು ಟೀಕಿಸುತ್ತಿದ್ದ ನಿತೀಶ್, ಈಗ ಅದನ್ನೇ ಮಾಡಿದ್ದಾರೆ. ತಮ್ಮ ಮಾಜಿ ಮಿತ್ರಪಕ್ಷದ ಆಟಗಳಿಂದ ಬೇಸರವಾಗಿದ್ದು, ಶಾಶ್ವತವಾಗಿ ಅವರಿಗೆ ಬಾಗಿಲು ಮುಚ್ಚಲಾಗಿದೆ ಎಂದು ಶಾ ಹೇಳಿದರು.
‘ಜಯಪ್ರಕಾಶ್ ನಾರಾಯಣ್ ಕಾಲದಿಂದಲೂ ಜೀವನದುದ್ದಕ್ಕೂ ಕಾಂಗ್ರೆಸ್ ಮತ್ತು ಜಂಗಲ್ ರಾಜ್ ಆಡಳಿತದ ವಿರುದ್ಧ ಹೋರಾಡಿದ ನಿತೀಶ್, ಜಂಗಲ್ ರಾಜ್ ಮುಂಚೂಣಿ ನಾಯಕ ಲಾಲು ಪ್ರಸಾದ್ ಯಾದವ್ ತೊಡೆ ಮೇಲೆ, ಸೋನಿಯಾ ಗಾಂಧಿ ಕಾಲ ಬಳಿ ಕುಳಿತಿದ್ದಾರೆ’ ಎಂದು ಅವರು ಟೀಕಿಸಿದರು.
‘ಆಯಾರಾಮ್ ಗಯಾರಾಮ್.. ಆಟ ನೋಡಿ ಸಾಕಾಯ್ತು. ನಿತೀಶ್ ಕುಮಾರ್‌ಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ’ಎಂದು ಶಾ ಹೇಳಿದರು.
ಆರ್‌ಜೆಡಿ ಜೊತೆಗಿನ ಜೆಡಿಯು ಮೈತ್ರಿ ನೀರಿನ ಜೊತೆ ತೈಲವನ್ನು ಬೆರೆಸುವ ಯತ್ನದಂತೆ ಎಂದು ಟೀಕಿಸಿದರು.
‘ನೀರು ಮತ್ತು ತೈಲ ಬೆರೆಯುವುದಿಲ್ಲ. ಇಲ್ಲಿ ಆರ್‌ಜೆಡಿ ತೈಲದ ರೀತಿ ಆಕ್ರಮಿಸಿಕೊಳ್ಳುತ್ತಿದ್ದು, ಜೆಡಿಯು ನೀರಿನ ರೀತಿ ತಳ ಸೇರುತ್ತಿದೆ’ಎಂದು ಅಮಿತ್ ಶಾ ವ್ಯಂಗ್ಯ ಮಾಡಿದರು.
ಕಳೆದ ವರ್ಷ ಆರ್‌ಜೆಡಿ ಜೊತೆ ಜೆಡಿಯು ಮೈತ್ರಿ ಮಾಡಿಕೊಳ್ಳುವ ಸಂದರ್ಭ, ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವುದಾಗಿ ನಿತೀಶ್ ಕುಮಾರ್, ಲಾಲು ಅವರಿಗೆ ಮಾತು ಕೊಟ್ಟಿದ್ದಾರೆ ಎಂದು ಶಾ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.