ಕೋಯಿಕ್ಕೋಡ್: ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಸಿಕ್ಕ ಗೆಲುವನ್ನು 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪುನರಾವರ್ತಿಸುವುದು ಅಸಾಧ್ಯ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಬಿಜೆಪಿ 50 ಕ್ಷೇತ್ರಗಳನ್ನು ಕಳೆದುಕೊಳ್ಳಬಹುದು ಎಂದೂ ಅವರು ಅಂದಾಜಿಸಿದ್ದಾರೆ.
ಬಿಜೆಪಿಯ ಪ್ರಾಬಲ್ಯ ಇದೆ ಎಂಬುದು ನಿಜ. ಆದರೆ, ಹಲವು ರಾಜ್ಯಗಳಲ್ಲಿ ಆ ಪಕ್ಷವು ಅಧಿಕಾರ ಕಳೆದುಕೊಂಡಿರುವುದೂ ವಾಸ್ತವ. ಹಾಗಾಗಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ಅಸಾಧ್ಯ ಏನಲ್ಲ. 2019ರ ಚುನಾವಣೆಯಲ್ಲಿ ಹರಿಯಾಣ, ಗುಜರಾತ್, ರಾಜಸ್ಥಾನದ ಎಲ್ಲ ಕ್ಷೇತ್ರಗಳಲ್ಲಿ ಆ ಪಕ್ಷ ಗೆದ್ದಿತ್ತು. ಬಿಹಾರ, ಮಧ್ಯ ಪ್ರದೇಶದಲ್ಲಿ ತಲಾ ಒಂದು ಕ್ಷೇತ್ರ ಬಿಟ್ಟು ಉಳಿದೆಲ್ಲವೂ ಬಿಜೆಪಿ ಪಾಲಾಗಿದ್ದವು. ಪಶ್ಚಿಮ ಬಂಗಾಳದಲ್ಲಿ 18 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈ ಬಾರಿ ಈ ರೀತಿಯ ಗೆಲುವು ಸಾಧ್ಯವಿಲ್ಲ. ಹಾಗಾಗಿಯೇ ಬಿಜೆಪಿಗೆ ಸರಳ ಬಹು ಮತ ಸಾಧ್ಯವಿಲ್ಲ ಎಂದು ಕೇರಳ ಸಾಹಿತ್ಯೋತ್ಸವದ ಗೋಷ್ಠಿಯೊಂದರಲ್ಲಿ ಮಾತನಾಡಿದ ತರೂರ್ ಹೇಳಿದ್ದಾರೆ.
ಪುಲ್ವಾಮಾ ದಾಳಿ ಮತ್ತು ಬಾಲಾಕೋಟ್ ಮೇಲೆ ನಡೆಸಿದ ವಾಯುದಾಳಿಯು ಬಿಜೆಪಿ ಪರವಾಗಿ ‘ಭಾರಿ ಅಲೆ’ ಏಳುವಂತೆ ಕೊನೆಯ ಕ್ಷಣದಲ್ಲಿ ಮಾಡಿತು. 2024ರಲ್ಲಿ ಅದೇ ರೀತಿ ಆಗಲು ಸಾಧ್ಯವಿಲ್ಲ. ಆದರೆ, ಬಿಜೆಪಿಗೆ ಬಹುಮತ ದೊರೆಯದಂತೆ ಮಾಡುವ ಬಿಜೆಪಿವಿರೋಧಿ ಪಕ್ಷಗಳು ಒಟ್ಟಾಗಿ ನಿಲ್ಲಲಿವೆಯೇ ಎಂಬುದಕ್ಕೆ ಉತ್ತರಿಸಲು ಸಾಧ್ಯವಿಲ್ಲ ಎಂದರು.
‘ಬಿಜೆಪಿ 250 ಕ್ಷೇತ್ರಗಳಲ್ಲಷ್ಟೇ ಗೆದ್ದರೆ, 290 ಕ್ಷೇತ್ರಗಳಲ್ಲಿ ಗೆದ್ದವರು ಒಟ್ಟಾಗಿ ನಿಲ್ಲಲಿದ್ದಾರೆಯೇ ಅಥವಾ ಕೇಂದ್ರದಿಂದ ಪ್ರಯೋಜನ ಪಡೆಯಲು ಬಯಸುವ ಕೆಲವು ಪಕ್ಷಗಳ ಬೆಂಬಲವನ್ನು ಪಡೆದುಕೊಂಡು ಬಿಜೆಪಿ ಸರ್ಕಾರ ರಚಿಸಬಹುದೇ ಎಂಬುದನ್ನು ಹೇಳಲಾಗದು’ ಎಂದು ವಿವರಿಸಿದ್ದಾರೆ.
ಲೋಕಸಭೆಗೆ 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 303 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಕಾಂಗ್ರೆಸ್‌ಗೆ 52 ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.