ಸೋಮವಾರ, ಮೇ 23, 2022
20 °C

ಆಳ–ಅಗಲ: ಅಪರಾಧ ಪ್ರಕ್ರಿಯಾ ಗುರುತಿಸುವಿಕೆ ಮಸೂದೆ – ಜನರ ಖಾಸಗಿತನಕ್ಕೆ ಧಕ್ಕೆ

ಜಯಸಿಂಹ ಆರ್., ಅಮೃತ್‌ ಕಿರಣ್‌ ಬಿ.ಎಂ. Updated:

ಅಕ್ಷರ ಗಾತ್ರ : | |

Prajavani

ಅಪರಾಧಿ, ಆರೋಪಿ ಮತ್ತು ಯಾವುದೇ ವ್ಯಕ್ತಿಯ ದೈಹಿಕ, ಜೈವಿಕ ಮಾದರಿಗಳನ್ನು ಸಂಗ್ರಹಿಸುವ ಅಧಿಕಾರವನ್ನು ಪೊಲೀಸ್‌ ಹೆಡ್‌ ಕಾನ್‌ಸ್ಟೆಬಲ್ ಮತ್ತು ಜೈಲಿನ ಮುಖ್ಯ ವಾರ್ಡನ್ ದರ್ಜೆಯ ಸಿಬ್ಬಂದಿಗೂ ನೀಡುವ ‘ಅಪರಾಧ ಪ್ರಕ್ರಿಯಾ (ಗುರುತಿಸುವಿಕೆ) ಮಸೂದೆ–2022’ಕ್ಕೆ ಲೋಕಸಭೆಯಲ್ಲಿ ಅನುಮೋದನೆ ದೊರೆತಿದೆ. ಅಪರಾಧಿಗಳು ಮಾತ್ರವಲ್ಲ, ದೇಶದ ಯಾವುದೇ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವಂತಹ ಅಂಶಗಳಿರುವ ಈ ಮಸೂದೆಗೆ ಸದನದ ಒಳಗೆ ಮತ್ತು ಹೊರಗೆ ಭಾರಿ ವಿರೋಧ ವ್ಯಕ್ತವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸೂಚಿಸಿದ್ದ 24 ತಿದ್ದುಪಡಿಗಳನ್ನು ಕಡೆಗಣಿಸಿ ಆಡಳಿತ ಪಕ್ಷವು ಮಸೂದೆಯನ್ನು ಅಂಗೀಕಾರ ಮಾಡಿಕೊಂಡಿದೆ.

ಈಗ ಜಾರಿಯಲ್ಲಿರುವ ಅಪರಾಧ ಪ್ರಕ್ರಿಯಾ (ಗುರುತಿಸುವಿಕೆ) ಕಾಯ್ದೆ–1920ಕ್ಕೆ ಹಲವು ಬಾರಿ ತಿದ್ದುಪಡಿ ತರಲಾಗಿದೆ. ಆದರೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಈಗ ಜಾರಿಗೆ ತರಲು ಹೊರಟಿರುವ ತಿದ್ದುಪಡಿಯು, ಪೊಲೀಸರಿಗೆ ಮತ್ತು ಜೈಲಿನ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ಕೊಡುತ್ತದೆ. ತಪ್ಪಿತಸ್ಥ, ಬಂಧಿತ, ಆರೋಪಿ, ಶಂಕಿತ ಮತ್ತು ಪೊಲೀಸ್ ವಶದಲ್ಲಿರುವ ವ್ಯಕ್ತಿಗಳು ಮಾತ್ರವಲ್ಲದೆ, ಯಾವುದೇ ವ್ಯಕ್ತಿಯ ಜೈವಿಕ ಮಾದರಿಗಳನ್ನು ಸಂಗ್ರಹಿಸುವ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ಇದು ನಾಗರಿಕರ ಖಾಸಗಿತನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ ಎಂಬುದು ವಿರೋಧ ಪಕ್ಷಗಳ ಕಳವಳ. ಜತೆಗೆ ಈ ಅಧಿಕಾರವು ದುರ್ಬಳಕೆ ಆಗುವ ಸಾಧ್ಯತೆ ಅತ್ಯಧಿಕವಾಗಿದೆ ಎಂಬ ಅಪಾಯವನ್ನೂ ವಿಪಕ್ಷಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಗುರುತಿಸಿದ್ದಾರೆ. 

ಈ ಮಸೂದೆಯು ರಾಜ್ಯಸಭೆಯಲ್ಲೂ ಅನುಮೋದನೆ ಪಡೆದು, ರಾಷ್ಟ್ರಪತಿಯ ಅಂಕಿತ ಪಡೆದರೆ ಕಾಯ್ದೆಯಾಗುತ್ತದೆ. ಆನಂತರ, ಪೊಲೀಸ್ ರಾಜ್ಯವೊಂದರಲ್ಲಿ ಪೊಲೀಸರಿಗೆ ಇರುವಂತಹ ಅಧಿಕಾರಗಳು ಭಾರತದ ಪೊಲೀಸರಿಗೆ ಲಭ್ಯವಾಗಲಿವೆ.

ಈಗ ಜಾರಿಯಲ್ಲಿರುವ ಕಾಯ್ದೆಯ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅಗತ್ಯ ಬದಲಾವಣೆಗಳನ್ನು, ನಿಯಮಗಳನ್ನು ಮಾಡಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಆದರೆ, ಅನುಷ್ಠಾನದಲ್ಲಿ ತೊಡಕಾಗುವ ಅಂಶಗಳನ್ನು ಕೇವಲ ಒಂದು ಗೆಜೆಟ್‌ ಅಧಿಸೂಚನೆ ಮೂಲಕ  ಕಿತ್ತುಹಾಕುವ ಅಧಿಕಾರವನ್ನು ತಿದ್ದುಪಡಿ ಮಸೂದೆಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ರಾಜ್ಯ ಸರ್ಕಾರಗಳಿಗಿಂತ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ಈ ಮಸೂದೆ ನೀಡುತ್ತದೆ. ಇದು ಸಹ ಮಸೂದೆಯಲ್ಲಿನ ಕಳವಳಕಾರಿ ಅಂಶ ಎಂದು ವಿಪಕ್ಷಗಳು ಹೇಳಿವೆ. ಈ ಮೂಲಕ ದೇಶದ ಪೊಲೀಸ್ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗಿಂತ ಹೆಚ್ಚಿನ ಅಧಿಕಾರ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ಕಳವಳಕಾರಿ ಬದಲಾವಣೆಗಳು

‘ಅಪರಾಧಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸುವ ನಮ್ಮ ಕಾನೂನು ಶತಮಾನದಷ್ಟು ಹಳೆಯದ್ದು. ಈಗ ಜಗತ್ತು ತೀರಾ ಮುಂದೆ ಹೋಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇರುವಂತಹ ವ್ಯವಸ್ಥೆಯನ್ನು ಇಲ್ಲಿ ತರಲು ಹೊರಟಿದ್ದೇವೆ’ ಎಂದು ಸರ್ಕಾರವು ಈ ಮಸೂದೆಯನ್ನು ಸಮರ್ಥಿಸಿಕೊಂಡಿದೆ. ಆದರೆ, ಈ ಮಸೂದೆ ಮೂಲಕ ಸರ್ಕಾರವು ತರಲು ಹೊರಟಿರುವ ಬದಲಾವಣೆಗಳು ಹೀಗಿವೆ.

1. ಈಗ ಜಾರಿಯಲ್ಲಿರುವ 1920ರ ಕಾಯ್ದೆಯ ಪ್ರಕಾರ ಅಪರಾಧಿ, ಆರೋಪಿಯ ಪಾದದ ಗುರುತು, ಬೆರಳ ಗುರುತಿನ ಮಾದರಿಗಳು ಮತ್ತು ಚಿತ್ರವನ್ನು ಸಂಗ್ರಹಿಸಲು ಮಾತ್ರ ಅವಕಾಶವಿದೆ.

ಆದರೆ, ನೂತನ ಮಸೂದೆಯ ಪ್ರಕಾರ ಅಪರಾಧಿ, ಆರೋಪಿ, ಶಂಕಿತ, ಬಂಧಿತ, ಪೊಲೀಸ್ ವಶದಲ್ಲಿರುವ ಮತ್ತು ತನಿಖೆಯಲ್ಲಿ ನೆರವಿಗೆ ಬರಬಹುದು ಎಂದು ಪೊಲೀಸರು ಭಾವಿಸುವ ಯಾವುದೇ ವ್ಯಕ್ತಿಯ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸಬಹುದು. ಇದರಲ್ಲಿ ಚಿತ್ರ, ಪಾದದ ಗುರುತು ಮತ್ತು ಕೈಬೆರಳಿನ ಗುರುತುಗಳ ಮಾದರಿಗಳು, ಅಕ್ಷಿಪಟಲ, ಕೂದಲು, ವೀರ್ಯ, ಡಿಎನ್‌ಎ ಮಾದರಿಗಳು, ಬರವಣಿಗೆ ಶೈಲಿ ಮತ್ತಿತರ ವರ್ತನೆಯ ಗುಣಲಕ್ಷಣಗಳನ್ನು ಸಂಗ್ರಹಿಸಲು ಪೊಲೀಸರಿಗೆ ಮತ್ತು ಜೈಲಿನ ಅಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ.

2. 1920ರ ಕಾಯ್ದೆಯ ಪ್ರಕಾರ ಅಪರಾಧಿ ಅಥವಾ ತಪ್ಪಿತಸ್ಥನ ದೈಹಿಕ ಮಾದರಿಗಳನ್ನು ಮಾತ್ರ ಸಂಗ್ರಹಿಸಲು ಅವಕಾಶವಿದೆ.

ಆದರೆ, ಅಪರಾಧ ಕೃತ್ಯಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸಲು ನೂತನ ಮಸೂದೆಯು ಅವಕಾಶ ಮಾಡಿಕೊಡುತ್ತದೆ. ಇಂತಹ ವ್ಯಕ್ತಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಎಂದು ಮೊದಲ ದರ್ಜೆಯ ಮ್ಯಾಜಿಸ್ಟ್ರೇಟ್‌ ಆದೇಶ ನೀಡಿದರೆ ಪೊಲೀಸರಿಗೆ ಈ ಅಧಿಕಾರ ದೊರೆಯುತ್ತದೆ. ಆದರೆ ತನಿಖೆಗೆ ನೆರವಾಗಬಹುದು ಎಂದು ಪೊಲೀಸರಿಗೆ ಅನಿಸಿದರೂ, ಅಂತಹ ವ್ಯಕ್ತಿಗಳ ಮಾದರಿ ಸಂಗ್ರಹಕ್ಕೆ ಆದೇಶ ನೀಡಿ ಎಂದು ಪೊಲೀಸರು ಮ್ಯಾಜಿಸ್ಟ್ರೇಟ್ ಅವರನ್ನು ಕೋರಬಹುದು. ಇದು ದೇಶದ ಎಲ್ಲಾ ವ್ಯಕ್ತಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಡುತ್ತದೆ. ಇದು ಈ ಮಸೂದೆಯ ಅತ್ಯಂತ ಅಪಾಯಕಾರಿ ಅಂಶಗಳಲ್ಲಿ ಒಂದು.

3. ದೈಹಿಕ ಮಾದರಿಗಳನ್ನು ಸಂಗ್ರಹಿಸಲು ಅಪರಾಧಿಗಳು ಅಸಮ್ಮತಿ ಸೂಚಿಸಲು ಈಗ ಜಾರಿಯಲ್ಲಿರುವ ಕಾಯ್ದೆಯಲ್ಲಿ ಅವಕಾಶವಿಲ್ಲ.

ಕೇಂದ್ರ ಸರ್ಕಾರವು ಈಗ ತರಲು ಹೊರಟಿರುವ ನೂತನ ಮಸೂದೆಯಲ್ಲೂ ಈ ಅಂಶವನ್ನು ಉಳಿಸಿಕೊಳ್ಳಲಾಗಿದೆ. ಆದರೆ, ಅಪರಾಧಕ್ಕೆ ಸಂಬಂಧವೇ ಇಲ್ಲದ ಮತ್ತು ತನಿಖೆಗೆ ಸಹಕಾರಿಯಾಗಬಹುದು ಎಂದು ಪೊಲೀಸರು ಭಾವಿಸುವ ವ್ಯಕ್ತಿಗಳು ಸಹ ತಮ್ಮ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ನೀಡಲು ನಿರಾಕರಿಸಲು ಈ ಮಸೂದೆಯಲ್ಲಿ ಅವಕಾಶವೇ ಇಲ್ಲ. ಪೊಲೀಸರಿಗೆ ತನಿಖೆಯಲ್ಲಿ ನೆರವಾಗಬಲ್ಲಂತಹ ವ್ಯಕ್ತಿಗಳಿಂದಲೂ ಪೊಲೀಸರು ಬಲವಂತದಿಂದ ಮಾದರಿ ಸಂಗ್ರಹಿಸಬಹುದಾಗಿದೆ.

4. ಈ ಹಿಂದೆ ಯಾವುದೇ ಪ್ರಕರಣದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆ ಅನುಭವಿಸಿರುವವರನ್ನು ಹೊರತುಪಡಿಸಿ, ಯಾವುದೇ ಪ್ರಕರಣದಲ್ಲಿ ಖುಲಾಸೆಯಾಗುವ ವ್ಯಕ್ತಿಯ ಜೈವಿಕ ಮಾದರಿಗಳನ್ನು ನಾಶ ಮಾಡಬೇಕು ಎಂದು 1920ರ ಕಾಯ್ದೆ ಹೇಳುತ್ತದೆ.

ನೂತನ ಮಸೂದೆಯು, ಯಾವುದೇ ಪ್ರಕರಣದಲ್ಲಿ ಖುಲಾಸೆಯಾಗುವ ಮತ್ತು ವಿಚಾರಣೆ ಇಲ್ಲದೇ ಬಿಡುಗಡೆಯಾಗುವ ಮತ್ತು ನ್ಯಾಯಾಲಯದಿಂದ ಬಿಡುಗಡೆ ಆದೇಶ ಪಡೆಯುವ ವ್ಯಕ್ತಿಗಳ ದೈಹಿಕ ಮತ್ತು ಜೈವಿಕ ಮಾದರಿಗಳನ್ನು, ಸಂಬಂಧಿತ ಪ್ರಾಧಿಕಾರವು ನಾಶ ಮಾಡಬೇಕು ಎಂದು ಹೇಳುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಅಪರಾಧಗಳಲ್ಲಿ ಶಿಕ್ಷೆಗೆ ಗುರಿಯಾದವರು ಮತ್ತು ಪೊಲೀಸರಿಗೆ ಅಗತ್ಯ ಎಂದೆನಿಸುವ ಅಪರಾಧಿಗಳ ಮಾದರಿಗಳನ್ನು 75 ವರ್ಷಗಳವರೆಗೆ ಸಂಗ್ರಹಿಸಿ ಇಡಲು ಈ ಮಸೂದೆ ಅವಕಾಶ ಮಾಡಿಕೊಡುತ್ತದೆ.

ಆದರೆ, ತನಿಖೆಯಲ್ಲಿ ಸಹಕಾರಿಯಾಗಬಲ್ಲ ಎಂದು ಪೊಲೀಸರಿಗೆ ಅನಿಸಿದ ವ್ಯಕ್ತಿಯ ದೈಹಿಕ ಮತ್ತು ಜೈವಿಕ ಮಾದರಿಗಳನ್ನು ನಾಶ ಮಾಡಬೇಕು ಮತ್ತು ಹೇಗೆ ನಾಶ ಮಾಡಬೇಕು ಎಂಬುದರ ಉಲ್ಲೇಖ ನೂತನ ಮಸೂದೆಯಲ್ಲಿ ಇಲ್ಲ. 

5. ಈಗ ಜಾರಿಯಲ್ಲಿರುವ 1920ರ ಕಾಯ್ದೆಯ 9ನೇ ಸೆಕ್ಷನ್‌ನಲ್ಲಿ, ನೂತನ ಮಸೂದೆಯ ಮೂಲಕ ಉಪ ಸೆಕ್ಷನ್‌ ಒಂದನ್ನು ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ‘ಈ ಕಾಯ್ದೆಯಲ್ಲಿನ (ಮಸೂದೆ ಕಾಯ್ದೆಯಾದ ನಂತರ) ಯಾವುದೇ ಕ್ರಮಗಳನ್ನು ಜಾರಿಗೆ ತರಲು ತೊಡಕಾಗುವ ಅಂಶಗಳಿದ್ದರೆ ಮತ್ತು ಅಂತಹ ಅಂಶಗಳನ್ನು ತೆಗೆದು ಹಾಕುವುದು ಅಗತ್ಯ ಎನಿಸಿದರೆ, ಅಂತಹ ಅಂಶಗಳನ್ನು ಗೆಜೆಟ್‌ ಅಧಿಸೂಚನೆ ಅಥವಾ ಆದೇಶದ ಮೂಲಕ ತೆಗೆದು ಹಾಕಬಹುದು’ ಎಂದು ಮಸೂದೆಯ 9(1)ನೇ ಸೆಕ್ಷನ್ ಹೇಳುತ್ತದೆ.

ಕಾಯ್ದೆ ಜಾರಿಗೆ ಬಂದ ಮೂರು ವರ್ಷಗಳ ಒಳಗೆ ಮಾತ್ರ ಈ 9(1)ನೇ ಸೆಕ್ಷನ್‌ ಅಡಿ ಬದಲಾವಣೆಗಳನ್ನು ಮಾಡಬಹುದು ಎಂದು ಮಸೂದೆ ಹೇಳುತ್ತದೆ.

ಈಗ ಜಾರಿಯಲ್ಲಿರುವ 1920ರ ಕಾಯ್ದೆಯಲ್ಲಿ ರಾಜ್ಯ ಸರ್ಕಾರಗಳಿಗೆ, ಕಾಯ್ದೆಯ ಅಡಿ ನಿಯಮಗಳನ್ನು ರಚಿಸುವ ಅಧಿಕಾರ ನೀಡಲಾಗಿದೆ. ಆದರೆ, ನೂತನ ಮಸೂದೆಯು ಕೇಂದ್ರ ಸರ್ಕಾರಕ್ಕೂ ಈ ಅಧಿಕಾರ ನೀಡುತ್ತದೆ. ಜತೆಗೆ ಕಾಯ್ದೆಯಲ್ಲಿನ ಅಂಶಗಳನ್ನು ತೆಗೆದುಹಾಕುವ ಅಧಿಕಾರವನ್ನೂ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

ನಾಗರಿಕ ಹಕ್ಕುಗಳಿಗೆ ಸರ್ಕಾರದ ಕೊಕ್ಕೆ

ಅಪರಾಧ ಪ್ರಕ್ರಿಯಾ (ಗುರುತಿಸುವಿಕೆ) ಮಸೂದೆ–2022ಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಮಸೂದೆಯು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎಂದು ಪ್ರತಿಪಕ್ಷಗಳ ಸದಸ್ಯರು, ವಕೀಲರು, ನಾಗರಿಕ ಹಕ್ಕುಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. 

ಅಂಗೀಕಾರಕ್ಕೂ ಮುನ್ನ, ಮಸೂದೆಯನ್ನು ಸಂಸದೀಯ ಸ್ಥಾಯಿಸಮಿತಿಯ ಪರಿಶೀಲನೆಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದ ಪ್ರತಿಪಕ್ಷಗಳು, ಮಸೂದೆಗೆ ಒಟ್ಟು 24 ತಿದ್ದುಪಡಿಗಳನ್ನು ಸೂಚಿಸಿದ್ದವು. ತೃಣಮೂಲ ಕಾಂಗ್ರೆಸ್‌ನ ಸೌಗತಾ ರಾಯ್ ಅವರು 14 ತಿದ್ದುಪಡಿಗಳನ್ನು, ಬಿಜೆಡಿಯ ಭರ್ತೃಹರಿ ಮಹತಾಬ್ ಹಾಗೂ ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್‌ ಅವರು ತಲಾ 5 ತಿದ್ದುಪಡಿಗಳನ್ನು ಸಲ್ಲಿಸಿದ್ದರು. 

ಯಾವ ಅಂಶಗಳಿಗೆ ತಿದ್ದುಪಡಿ ಸಲ್ಲಿಕೆ?: 

ಬಂಧಿತ ಅಥವಾ ತಪ್ಪಿತಸ್ಥ ವ್ಯಕ್ತಿಯ ಜೈವಿಕ ಮಾದರಿಗಳನ್ನು ಸಂಗ್ರಹಿಸುವ ಅಂಶವನ್ನು ಮಸೂದೆಯಲ್ಲಿ ಸೇರ್ಪಡೆ ಮಾಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಖಾಸಗಿತನ ಕುರಿತ ಕಾಯ್ದೆ ಇಲ್ಲದಿರುವಾಗ, ಸಂಗ್ರಹಿಸಿದ ದತ್ತಾಂಶಗಳು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿರಬಲ್ಲವು ಎಂಬ ಅನುಮಾನ ಇರುವಾಗ, ಈ ಅಂಶ ಸೇರ್ಪಡೆ ಎಷ್ಟು ಸರಿ ಎಂದು ಪ್ರೇಮಚಂದ್ರನ್‌ ಹಾಗೂ ಸೌಗತಾ ರಾಯ್ ಪ್ರಶ್ನಿಸಿದ್ದಾರೆ. ಈ ಅಂಶವನ್ನು ತೆಗೆದುಹಾಕುವಂತೆ ಅವರು ಒತ್ತಾಯಿಸಿದ್ದಾರೆ. 

ಹೆಡ್‌ಕಾನ್‌ಸ್ಟೆಬಲ್ ಅಥವಾ ಜೈಲು ಹೆಡ್‌ವಾರ್ಡನ್ ದರ್ಜೆಯ ಸಿಬ್ಬಂದಿಗೆ ಮಾದರಿಗಳನ್ನು ಸಂಗ್ರಹಿಸುವ ಅಧಿಕಾರ ನೀಡುವುದನ್ನು ಸಂಸದರು ತೀವ್ರವಾಗಿ ವಿರೋಧಿಸಿದ್ದಾರೆ. ಡಿವೈಎಸ್‌ಪಿ ಅಥವಾ ಜೈಲು ಅಧೀಕ್ಷಕ ಅಥವಾ ಉಪ ಅಧೀಕ್ಷಕ ಶ್ರೇಣಿಗಿಂತ ಕೆಳಗಿನ ಶ್ರೇಣಿಯ ಪೊಲೀಸ್ ಸಿಬ್ಬಂದಿಗೆ ಈ ಅಧಿಕಾರ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ‘ಇನ್‌ಸ್ಪೆಕ್ಟರ್ ಅಥವಾ ಜೈಲು ಅಧೀಕ್ಷಕರು ಈ ಕರ್ತವ್ಯವನ್ನು ನಿರ್ವಹಿಸಬಹುದು’ ಎಂದು ಪ್ರೇಮಚಂದ್ರನ್‌ ಅವರು ತಿದ್ದುಪಡಿ ಸೂಚಿಸಿದ್ದರು. 

ಎಲ್ಲ ರೀತಿಯ ಪ್ರಕರಣಗಳಿಗೆ ಬದಲಾಗಿ, ಘೋರ ಅಪರಾಧ ಪ್ರಕರಣಗಳಲ್ಲಿ ಮಾತ್ರ ಆರೋಪಿ ಅಥವಾ ತಪ್ಪಿತಸ್ಥನ ಜೈವಿಕ ಮಾದರಿಗಳನ್ನು ಸಂಗ್ರಹಿಸಬೇಕು ಎಂಬ ವಾದವನ್ನು ಪ್ರೇಮಚಂದ್ರನ್‌ ಮಂಡಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದುಕೊಂಡ ವ್ಯಕ್ತಿಯ ಮಾದರಿಗಳನ್ನು ಸಂಗ್ರಹಿಸಲು ಪೊಲೀಸರಿಗೆ ಅವಕಾಶ ನೀಡಬಾರದು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದರು. ತಪ್ಪಿತಸ್ಥ ವ್ಯಕ್ತಿಗೆ ಮಾತ್ರ ಈ ಅಂಶವನ್ನು ಅನ್ವಯಿಸಬೇಕು ಎಂದು ಮಹತಾಬ್ ಅವರು ತಾವು ಸಲ್ಲಿಸಿದ್ದ ತಿದ್ದುಪಡಿಯಲ್ಲಿ ಸೂಚಿಸಿದ್ದರು. 

ಮಾದರಿಗಳನ್ನು ಎನ್‌ಸಿಆರ್‌ಬಿಯಲ್ಲಿ ಸಂಗ್ರಹಿಸಿಡುವ ವಿಚಾರವು ಮತ್ತೊಂದು ಚರ್ಚಾಸ್ಪದ ಅಂಶ. 75 ವರ್ಷಗಳಷ್ಟು ಸುದೀರ್ಘ ಅವಧಿವರೆಗೆ ಸಂಗ್ರಹಿಸುವುದು ಬೇಡ ಎಂದಿರುವ ಪ್ರತಿಪಕ್ಷಗಳ ಸಂಸದರು, ಈ ಮಾದರಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದ್ದರು. 

ಈ ಮಸೂದೆಯ ಮೂಲಕ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಲೋಕಸಭೆಯಲ್ಲಿ ಚರ್ಚೆಯ ವೇಳೆ ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ ಆರೋಪಿಸಿದರು. ನಾಗರಿಕ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳನ್ನು ಕೊಡಮಾಡುವ ಸಂವಿಧಾನದ 14, 19 ಹಾಗೂ 21ನೇ ವಿಧಿಗಳ ಉಲ್ಲಂಘನೆ ಆಗುತ್ತದೆ ಎಂದು ಅವರು ಎಚ್ಚರಿಸಿದ್ದರು.  ‘ಭಾರತವು ಕಣ್ಗಾವಲು ದೇಶವಾಗಿ ಬದಲಾಗಲು ಈ ಮಸೂದೆಯು ದಾರಿ ಮಾಡಿಕೊಡುತ್ತದೆ’ ಎಂದು ತಿವಾರಿ ಆತಂಕ ವ್ಯಕ್ತಪಡಿಸಿದ್ದಾರೆ. 

‘ದತ್ತಾಂಶ ಶೇಖರಣಾ ತತ್ವಗಳಿಗೆ ವಿರುದ್ಧ’

‘ದಾಖಲೆಗಳನ್ನು 75 ವರ್ಷ ಇರಿಸಿಕೊಳ್ಳಲು ಅವಕಾಶ ನೀಡುವ ಅಂಶವು, ಪುಟ್ಟಸ್ವಾಮಿ ಹಾಗೂ ಆಧಾರ್ ತೀರ್ಪಿನಲ್ಲಿ ಹೇಳಲಾದ ದತ್ತಾಂಶ ಶೇಖರಣಾ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ದೆಹಲಿಯ ವಕೀಲೆ ವೃಂದಾ ಭಂಡಾರಿ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಮಸೂದೆಯು ವ್ಯಕ್ತಿಯನ್ನು ಗುರುತಿಸುವುದಷ್ಟೇ ಅಲ್ಲದೆ, ಆತ ಅಪರಾಧ ಎಸಗಿದ್ದಾನೆ ಎಂಬುದನ್ನು ಸಾಬೀತು ಮಾಡುತ್ತದೆ’ ಎಂದು ನಾಗರಿಕ ಹಕ್ಕುಗಳ ಸಂಸ್ಥೆ ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ ಅಭಿಪ್ರಾಯಪಟ್ಟಿದೆ. ಜೈವಿಕ ದತ್ತಾಂಶ ಎಂದರೆ ಅದು ಡಿಎನ್‌ಎ ಅನ್ನು ಒಳಗೊಂಡಿದೆಯೇ ಎಂಬುದು ಈ ಮಸೂದೆಯಲ್ಲಿ ಸ್ಪಷ್ಟವಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ. 

ಸಣ್ಣಪುಟ್ಟ ಪ್ರಕರಣಗಳು ಹಾಗೂ ಸಕಾರಣವಿಲ್ಲದೇ ವಶಕ್ಕೆ ಪಡೆಯಲಾದ ವ್ಯಕ್ತಿಯ ಜೈವಿಕ ದತ್ತಾಂಶಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಡುವ ಈ ಮಸೂದೆಯು ಪೊಲೀಸರ ಅಧಿಕಾರ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ ಎಂದು ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು