ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ | 18 ಮಂದಿಗೆ ಖಾತೆ ಹಂಚಿಕೆ: ಫಡಣವೀಸ್‌ಗೆ ಗೃಹ, ಹಣಕಾಸು ಖಾತೆಗಳ ಹೊಣೆ

11 ಖಾತೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡ ಸಿ.ಎಂ ಶಿಂದೆ
Last Updated 14 ಆಗಸ್ಟ್ 2022, 14:28 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ತಮ್ಮ ಸಂಪುಟಕ್ಕೆ ಸೇರ್ಪಡೆಯಾಗಿದ್ದ 18 ಮಂದಿಗೆ ಭಾನುವಾರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.

ನಗರಾಭಿವೃದ್ಧಿ ಸೇರಿದಂತೆ ಒಟ್ಟು 11 ಖಾತೆಗಳನ್ನು ಶಿಂದೆ ಅವರು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

‘ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರಿಗೆ ಗೃಹ ಖಾತೆ ನೀಡಲಾಗಿದೆ. ಹಣಕಾಸು ಹಾಗೂ ಯೋಜನಾ ಖಾತೆಯ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ’ ಎಂದು ಮುಖ್ಯಮಂತ್ರಿಯವರ ಕಾರ್ಯಾಲಯದ (ಸಿಎಂಒ) ಪ್ರಕಟಣೆ ತಿಳಿಸಿದೆ.

ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ, ಸಾರಿಗೆ, ಮಾರುಕಟ್ಟೆ, ಸಾಮಾಜಿಕ ನ್ಯಾಯ, ವಿಪತ್ತು ನಿರ್ವಹಣೆ–ಪರಿಹಾರ ಮತ್ತು ಪುನರ್ವಸತಿ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಪರಿಸರ ಮತ್ತು ಹವಾಮಾನ ಬದಲಾವಣೆ, ಅಲ್ಪಸಂಖ್ಯಾತರ ಅಭಿವೃದ್ಧಿ, ಸಾಮಾನ್ಯ ಆಡಳಿತ ಹಾಗೂ ಲೋಕೋಪಯೋಗಿ (ಸಾರ್ವಜನಿಕ ವಲಯದ ಉದ್ಯಮಗಳು) ಖಾತೆಗಳು ಶಿಂದೆ ಅವರ ಬಳಿ ಇವೆ.

ಕಾನೂನು, ಜಲಸಂಪನ್ಮೂಲ, ವಸತಿ ಹಾಗೂ ಇಂಧನ ಖಾತೆಗಳನ್ನು ಫಡಣವೀಸ್‌ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಬಿಜೆಪಿಯ ರಾಧಾಕೃಷ್ಣ ವಿಖೆ ಪಾಟೀಲ ಅವರಿಗೆ ಕಂದಾಯ ಖಾತೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆ‍ಪ್ತ ಎನ್ನಲಾಗಿರುವ ಚಂದ್ರಕಾಂತ್‌ ಪಾಟೀಲ ಅವರಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆಗಳನ್ನು ನೀಡಲಾಗಿದೆ.ಸುಧೀರ್‌ ಮುಂಗಟಿವಾರ್‌ ಅವರಿಗೆ ಅರಣ್ಯ, ಮೀನುಗಾರಿಕೆ ಅಭಿವೃದ್ಧಿ ಮತ್ತು ಸಂಸ್ಕೃತಿ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಬಿಜೆಪಿಯ ಅತುಲ್‌ ಸಾವೆಗೆ ಸಹಕಾರ ಮತ್ತು ಇತರೆ ಹಿಂದುಳಿದವರ್ಗಗಳ (ಒಬಿಸಿ) ಕಲ್ಯಾಣ, ರವೀಂದ್ರ ಚವ್ಹಾಣ್‌ಗೆ ಲೋಕೋ‍ಪಯೋಗಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಹಿತರಕ್ಷಣೆ,ಮಂಗಲಪ್ರಭಾತ್‌ ಲೋಧಾಗೆ ಪ್ರವಾಸೋದ್ಯಮ, ಕರಕುಶಲ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗಿರೀಶ್‌ ಮಹಾಜನ್‌ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ವೈದ್ಯಕೀಯ ಶಿಕ್ಷಣ ಹಾಗೂ ಕ್ರೀಡಾ ಮತ್ತು ಯುವ ಸಬಲೀಕರಣ, ಡಾ.ವಿಜಯ್‌ಕುಮಾರ್‌ ಗವಿತ್‌ಗೆ ಬುಡಕಟ್ಟು ಅಭಿವೃದ್ಧಿ, ಸುರೇಶ್‌ ಖಾಡೆಗೆ ಕಾರ್ಮಿಕ,ದೀಪಕ್‌ ಕೇಸರ್ಕರ್‌ಗೆ ಪ್ರಾಥಮಿಕ ಶಿಕ್ಷಣ, ಗುಲಾಬ್‌ರಾವ್‌ ಪಾಟೀಲಗೆ ನೀರು ಸರಬರಾಜು ಹಾಗೂ ನೈರ್ಮಲ್ಯ, ದಾದಾ ಭುಸೆಗೆ ಗಣಿ ಮತ್ತು ಬಂದರು, ಅಬ್ದುಲ್‌ ಸತ್ತಾರ್‌ಗೆ ಕೃಷಿ, ಉದಯ ಸಾಮಂತ್‌ಗೆ ಕೈಗಾರಿಕೆ, ಸಂಜಯ ರಾಥೋಡ್‌ಗೆ ಆಹಾರ ಮತ್ತು ಔಷಧ, ತಾನಾಜಿ ಸಾವಂತ್‌ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಂಭುರಾಜ್‌ ದೇಸಾಯಿಗೆ ಅಬಕಾರಿ ಹಾಗೂ ಸಂದೀಪನ್‌ ಭುಮ್ರೆಗೆ ಉದ್ಯೋಗ ಖಾತರಿ ಹಾಗೂ ತೋಟಗಾರಿಕೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 41 ದಿನಗಳ ನಂತರ ಶಿಂದೆ ಅವರು ಬಿಜೆಪಿ ಹಾಗೂ ಶಿವಸೇನಾ ಗುಂಪಿನ ತಲಾ 9 ಶಾಸಕರನ್ನು ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಹೋದ ಮಂಗಳವಾರ ಇವರೆಲ್ಲಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

******

ಖಾತೆ ಹಂಚಿಕೆ ಬಗ್ಗೆ ಬಿಜೆಪಿ ಹಾಗೂ ಶಿಂದೆ ಬಣದವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಗತ್ಯವಿದ್ದರೆ ಸಂಪುಟ ವಿಸ್ತರಣೆ ವೇಳೆ ಕೆಲ ಖಾತೆಗಳನ್ನು ಪರಸ್ಪರ ಬದಲಾವಣೆ ಮಾಡಿಕೊಳ್ಳಬಹುದು.

ದೇವೇಂದ್ರ ಫಡಣವೀಸ್‌, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT