ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಪ್ರತಿಭಟನೆಗೆ ಬೆಂಬಲ: ‘ಎಫ್‌ಎಐ’ ಪ್ರಶಸ್ತಿ ನಿರಾಕರಿಸಿದ ಕೃಷಿ ವಿಜ್ಞಾನಿ

Last Updated 9 ಡಿಸೆಂಬರ್ 2020, 9:21 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಪಂಜಾಬ್‌ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ವರಿಂದರ್‌ಪಾಲ್ ಸಿಂಗ್ ಅವರು, ಭಾರತೀಯ ರಸಗೊಬ್ಬರ ಉದ್ದಿಮೆಗಳ ಸಂಘ(ಎಫ್‌ಎಐ) ನೀಡಲಿರುವ ‘ಎಫ್‌ಎಐ ಸುವರ್ಣ ಮಹೋತ್ಸವ ಪ್ರಶಸ್ತಿ’ಯನ್ನು ನಿರಾಕರಿಸಿದ್ದಾರೆ.

ಸಸ್ಯ ಪೋಷಣೆ ಕ್ಷೇತ್ರದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ ವರಿಂದರ್‌ಪಾಲ್ ಸಿಂಗ್ ಅವರನ್ನು ಎಫ್‌ಐಐ ಗೋಲ್ಡನ್ ಜುಬಿಲಿ ಎಕ್ಸಲೆನ್ಸ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿಯು ₹2 ಲಕ್ಷ ನಗದು, ಚಿನ್ನದ ಪದಕ ಒಳಗೊಂಡಿದೆ.

ಸೋಮವಾರ ನಡೆದ ಎಫ್‌ಎಐ ವಾರ್ಷಿಕ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವರಿಂದರ್‌ ಪಾಲ್ ಸಿಂಗ್ ಅವರು ಪ್ರಶಸ್ತಿ ಸ್ವೀಕರಿಸ‌ಲು ನಿರಾಕರಿಸಿರುವುದನ್ನು ಎಫ್‌ಎಐನ ಮಹಾ ನಿರ್ದೇಶಕ ಸತೀಶ್ ಚಂದರ್ ದೃಢಪಡಿಸಿದ್ದಾರೆ. ಇದೇ ವೇಳೆ, ‘ಈ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸುವುದು ಸರಿಯಲ್ಲ‘ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಸಂಸ್ಥೆ ವಿವಿಧ ವಿಭಾಗಗಳಲ್ಲಿ ಒಟ್ಟು 34 ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಚಿವ ಮನ್ಸುಖ್ ಲಾಲ್ ಮಾಂಡವಿಯಾ ಉಪಸ್ಥಿತರಿದ್ದರು.

‘ದೇಶದಲ್ಲಿ ರೈತರು ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿ ರಸ್ತೆಗಿಳಿದು ಪ್ರತಿಭಟಿಸುತ್ತಿರುವಾಗ ಈ ಪ್ರಶಸ್ತಿಯನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಹಾಗಾಗಿ ನಾನು ವಿನಮ್ರವಾಗಿ ಈ ಪ್ರಶಸ್ತಿಯನ್ನು ನಿರಾಕರಿಸುತ್ತಿದ್ದೇನೆ‘ ಎಂದು ಹೇಳಿರುವ ವಿಡಿಯೊ ಸಂದೇಶವನ್ನು ವರಿಂದರ್‌ ಸಿಂಗ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಪಂಜಾಬ್ ಕೃಷಿ ವಿಶ್ವವಿದ್ಯಾಲಯದ ಮಣ್ಣಿನ ವಿಜ್ಞಾನ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿರುವ ಅವರು ಪ್ರಶಸ್ತಿ ಸ್ವೀಕರಿಸದಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT