ಸೋಮವಾರ, ಮೇ 23, 2022
24 °C
ಸಿಂಘು ಗಡಿಯಲ್ಲಿ ಮೂಲಸೌಕರ್ಯ ಹೆಚ್ಚಳ: ಫ್ಯಾನ್‌, ವೈಫೈ ಅಳವಡಿಕೆ

ಕೃಷಿ ಕಾಯ್ದೆಗಳ ಬಗ್ಗೆ ಮುಕ್ತ ಮಾತುಕತೆಗೆ ಸಿದ್ಧ: ರಾಜನಾಥ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಘು ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ದೀರ್ಘ ಕಾಲ ಮುಂದುವರಿಸಲು ರೈತರು ಸಜ್ಜಾಗುತ್ತಿದ್ದಾರೆ. ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಅವರು ರೂಪಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಭಾರಿ ಸೆಖೆ ಆರಂಭವಾಗಲಿದೆ. ಅದನ್ನು ತಡೆದುಕೊಳ್ಳುವುದಕ್ಕಾಗಿ ಫ್ಯಾನ್‌ಗಳು ಮತ್ತು ಪ್ರತಿಭಟನಾ ಸ್ಥಳಕ್ಕೆ ವೈಫೈ ಸೌಲಭ್ಯಕ್ಕಾಗಿ ಪ್ರತ್ಯೇಕ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಸಲಾಗುತ್ತಿದೆ. ಇಲ್ಲಿ ಮತ್ತೊಮ್ಮೆ ಮೊಬೈಲ್‌ ಇಂಟರ್‌ನೆಟ್‌ ಅನ್ನು ಸರ್ಕಾರ ಸ್ಥಗಿತಗೊಳಿಸಿದರೂ ಸಮಸ್ಯೆ ಆಗಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.   

ಈ ಸ್ಥಳದ ಭದ್ರತೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ವೇದಿಕೆಯ ಸುತ್ತಲಿನ ಪ್ರದೇಶ ಮತ್ತು ಇತರೆಡೆಗಳಲ್ಲಿ 100 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ನಿಯಂತ್ರಣ ಕೊಠಡಿಯನ್ನು ಸಜ್ಜುಗೊಳಿಸಿ, ಇಡೀ ಪ್ರದೇಶದ ಮೇಲೆ ನಿಗಾ ಇರಿಸಲಾಗುವುದು. ಸಂಚಾರ ನಿಯಂತ್ರಣ ಮತ್ತು ರಾತ್ರಿ ಗಸ್ತು ನಡೆಸುವುದಕ್ಕಾಗಿ 600 ಜನರಿರುವ ಸ್ವಯಂಸೇವಕರ ತಂಡ ರಚಿಸಲಾಗಿದೆ. ಈ ಸ್ವಯಂ ಸೇವಕರನ್ನು ಗುರುತಿಸಲು ಸಾಧ್ಯವಾಗುವಂತೆ ಅವರಿಗೆ ಹಸಿರು ಜಾಕೆಟ್‌ಗಳು ಮತ್ತು ಗುರುತುಚೀಟಿ ನೀಡಲಾಗಿದೆ.  ಪ್ರತಿಭಟನೆ ಪ್ರದೇಶದಲ್ಲಿ 10 ಬೃಹತ್‌ ಎಲ್‌ಸಿಡಿ ಪರದೆಗಳನ್ನು ಅಳವಡಿಸಲಾಗುತ್ತಿದೆ. 

ಪ್ರತಿಭಟನೆ: ಮತ್ತೆ ಉಲ್ಲೇಖಿಸಿದ ಟ್ರೂಡೊ

ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರೂಡೊ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದು, ರೈತರ ಪ್ರತಿಭಟನೆಯ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ. ಕೋವಿಡ್‌–19 ತಡೆ ಲಸಿಕೆಯನ್ನು ಕೆನಡಾಕ್ಕೆ ನೀಡಬೇಕು ಎಂದು ಕೋರಲು ಅವರು ಬುಧವಾರ ಕರೆ ಮಾಡಿದ್ದರು.

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸಬೇಕು ಎಂದು ಟ್ರೂಡೊ ಅವರು ಮೋದಿ ಅವರನ್ನು ಕೇಳಿಕೊಂಡಿದ್ದಾರೆ ಎಂದು ಕೆನಡಾ ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಉಭಯ ನಾಯಕರ ನಡುವೆ, ರೈತರ ಪ್ರತಿಭಟನೆ ಬಗ್ಗೆಯೂ ಚರ್ಚೆ ನಡೆದಿದೆ ಎಂಬುದರ ಉಲ್ಲೇಖವು ಭಾರತ ಸರ್ಕಾರವು ಬಿಡುಗಡೆ ಮಾಡಿದ ಹೇಳಿಕೆ
ಯಲ್ಲಿ ಇಲ್ಲ.

ಟ್ರೂಡೊ ಅವರು ರೈತರ ಪ್ರತಿಭಟನೆಯ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿಯೂ ಹೇಳಿಕೆ ನೀಡಿದ್ದರು. ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಬೇಕು ಎಂದು ಹೇಳಿದ್ದರು. ಇದು ಅನಪೇಕ್ಷಿತ ಎಂದು ಭಾರತ ಆಗ ಕಟುವಾಗಿ ಪ್ರತಿಕ್ರಿಯೆ ನೀಡಿತ್ತು. ಜತೆಗೆ, ಭಾರತದಲ್ಲಿರುವ ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆಯನ್ನೂ ದಾಖಲಿಸಿತ್ತು.

‘ತಿದ್ದುಪಡಿಗೆ ಸಿದ್ಧ’

ಕೃಷಿ ಕಾಯ್ದೆಗಳ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸಲು ಸರ್ಕಾರ ಸಿದ್ಧ. ಅಗತ್ಯ ಬಿದ್ದರೆ ಕಾಯ್ದೆಗಳಿಗೆ ತಿದ್ದುಪಡಿಯನ್ನೂ ಮಾಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಗುರುವಾರ ಹೇಳಿದ್ದಾರೆ. ಮಧ್ಯ ಪ್ರದೇಶ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು