ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ: ತಿದ್ದುಪಡಿಗೆ ಸರ್ಕಾರ ಸಿದ್ಧ?

ಕೇಂದ್ರದ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ: ಮುಂದಿನ ಮಾತುಕತೆ ನಾಳೆ
Last Updated 3 ಡಿಸೆಂಬರ್ 2020, 22:38 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾಯ್ದೆಗಳ ವಿಚಾರದಲ್ಲಿ ತನ್ನ ನಿಲುವನ್ನು ಕೇಂದ್ರ ಸರ್ಕಾರವು ಗುರುವಾರ ಮೃದುಗೊಳಿಸಿದೆ.ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಜತೆಗಿನ ಮಾತುಕತೆಯ ವೇಳೆಯಲ್ಲಿ, ಕಾಯ್ದೆಗೆ ತಿದ್ದುಪಡಿಯ ಸಲಹೆಗಳನ್ನು ಸ್ವೀಕರಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಆದರೆ, ಈ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದು ಮಾಡಲೇಬೇಕು ಎಂಬ ನಿಲುವಿಗೆ ರೈತರ ಪ್ರತಿನಿಧಿಗಳು ಅಂಟಿಕೊಂಡಿದ್ದಾರೆ.

ಪ್ರತಿಭಟನೆಯನ್ನು ತೀವ್ರಗೊಳಿಸಲು ಅವರು ನಿರ್ಧರಿಸಿದ್ದಾರೆ.ಮಾತುಕತೆ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ನೀಡಲಾದ ಊಟ, ಚಹಾ ಮತ್ತು ನೀರನ್ನು ಕೂಡ ರೈತರು ನಿರಾಕರಿಸಿದರು.

ಸುಮಾರು ಏಳು ತಾಸು ಮಾತುಕತೆ ನಡೆದರೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ, ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ನೇತೃತ್ವದ ತಂಡದ ಜತೆ ಶನಿವಾರ ಮಾತುಕತೆ ನಡೆಸಲು ರೈತರ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ.

‘ಮೂರು ಕಾಯ್ದೆಗಳಲ್ಲಿ ತಿದ್ದುಪಡಿ ಮಾಡುವ ಕೇಂದ್ರದ ಪ್ರಸ್ತಾವವನ್ನು ನಾವು ತಿರಸ್ಕರಿಸಿದ್ದೇವೆ. ಕಾಯ್ದೆಗಳನ್ನು ರದ್ದು ಮಾಡಬೇಕು ಎಂಬ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ನ (ರಾಜೇವಾಲ್‌) ಅಧ್ಯಕ್ಷ ಬಲಬೀರ್‌ ಸಿಂಗ್‌ ರಾಜೇವಾಲ್‌ ಹೇಳಿದ್ದಾರೆ.

ರೈತರು ಎತ್ತಿರುವ ಎಲ್ಲ ಮೌಲಿಕವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸರ್ಕಾರವು ಭರವಸೆ ಕೊಟ್ಟಿದೆ. ಆದರೆ, ಕಾನೂನುಗಳಲ್ಲಿ ಹಲವು ಲೋಪಗಳಿವೆ ಎಂಬುದರತ್ತ ರೈತರ ಪ್ರತಿನಿಧಿಗಳು ಬೊಟ್ಟು ಮಾಡಿದ್ದಾರೆ. ಈ ಕಾಯ್ದೆಗಳನ್ನು ಸೆಪ್ಟೆಂಬರ್‌ನಲ್ಲಿ ತರಾತುರಿಯಲ್ಲಿ ಅಂಗೀಕರಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

‘ಸರ್ಕಾರದ ಈಗಿನ ಧೋರಣೆಯಲ್ಲಿ ಸ್ವಲ್ಪ ಬದಲಾವಣೆ ಇದೆ. ಕೃಷಿ ಕ್ಷೇತ್ರದ ಸುಧಾರಣೆಗಾಗಿ ತಂದ ಕಾಯ್ದೆಗಳಲ್ಲಿ ಲೋಪಗಳಿವೆ ಎಂಬುದನ್ನು ಸರ್ಕಾರವು ಒಪ್ಪಿದಂತೆ ಕಾಣಿಸುತ್ತಿದೆ’ ಎಂದು ಜಮುರಿ ಕಿಸಾನ್‌ ಸಭಾದ ಕುಲ್ವಂತ್‌ ಸಿಂಗ್‌ ಸಂಧು ಅವರು ಹೇಳಿದ್ದಾರೆ. ಶನಿವಾರದ ಮಾತುಕತೆಯಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲು ರೈತರು ಶುಕ್ರವಾರ ಸಭೆ ನಡೆಸಲಿದ್ದಾರೆ.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಮುಂದುವರಿಸಲು ಸರ್ಕಾರ ಬದ್ಧವಾಗಿದೆ. ಅದನ್ನು ರದ್ದುಪಡಿಸುವ ಯೋಜನೆ ಸರ್ಕಾರಕ್ಕೆ ಇಲ್ಲವೇ ಇಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ತೋಮರ್‌ ಹೇಳಿದ್ದಾರೆ.

ಎಪಿಎಂಸಿಗಳನ್ನು ಬಲಪಡಿಸಲು ಸರ್ಕಾರ ಸಿದ್ಧ. ಹಾಗೆಯೇ, ಎಪಿಎಂಸಿಯ ಹೊರಗಿನ ವ್ಯಾಪಾರಿಗಳ ನೋಂದಣಿ ಮಾಡಬೇಕು ಎಂಬ ರೈತರ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ತೋಮರ್‌ ಹೇಳಿದ್ದಾರೆ. ಪ್ಯಾನ್‌ ಕಾರ್ಡ್‌ ಇರುವ ಯಾವುದೇ ವ್ಯಕ್ತಿ ಕೃಷಿ ಉತ್ಪನ್ನಗಳ ಖರೀದಿ ಮಾಡಬಹುದು ಎಂದು ಹೊಸ ಕಾಯ್ದೆಗಳಲ್ಲಿ ಇದೆ. ಅದರ ಬಗ್ಗೆ ರೈತರಿಗೆ ತೀವ್ರ ಆಕ್ಷೇಪ ಇದೆ.

ವಿವಾದಗಳನ್ನು ಉಪವಿಭಾಗೀಯ ಮ್ಯಾಜಿಸ್ಟೇಟ್‌ (ಉಪವಿಭಾಗಾಧಿಕಾರಿ) ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು ಎಂಬುದರ ಬದಲು ನ್ಯಾಯಾಲಯಗಳಲ್ಲಿ ಬಗೆಹರಿಸಬೇಕು ಎಂಬ ಬೇಡಿಕೆಯನ್ನೂ ಪರಿಶೀಲಿಸಲಾಗುವುದು. ರೈತರ ವಿಚಾರದಲ್ಲಿ ಸರ್ಕಾರಕ್ಕೆ ಪ್ರತಿಷ್ಠೆ ಇಲ್ಲ. ಎಲ್ಲ ಅಂಶಗಳನ್ನೂ ಚರ್ಚಿಸಲು ಸಿದ್ಧ ಎಂದು ತೋಮರ್‌ ತಿಳಿಸಿದ್ದಾರೆ.

ಮೂರು ಕಾಯ್ದೆಗಳ ಬಗ್ಗೆ ಸರ್ಕಾರವು ವಿವರವಾದ ಮಾಹಿತಿಯನ್ನು ರೈತರ ಪ್ರತಿನಿಧಿಗಳಿಗೆ ನೀಡಿದೆ. ಕಾಯ್ದೆಗಳಿಂದ ಇರುವ ಲಾಭಗಳನ್ನು ವಿವರಿಸಿದೆ. ಆದರೆ, ನಾಲ್ಕನೇ ಸುತ್ತಿನ ಈ ಮಾತುಕತೆ ಯಲ್ಲಿ, ಸರ್ಕಾರದ ಎಲ್ಲ ವಾದವನ್ನೂ ರೈತ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆಎಂದು ಮೂಲಗಳು ತಿಳಿಸಿವೆ.

ಕಳೆದ ಎಂಟು ದಿನಗಳಿಂದ ದೆಹಲಿ ಯ ಗಡಿಗಳಲ್ಲಿ ಠಿಕಾಣಿ ಹೂಡಿರುವ ರೈತರು, ರಾಜಧಾನಿ ಪ್ರವೇಶದ ಹೆಚ್ಚಿನ ಮಾರ್ಗಗಳನ್ನು ಬಂದ್‌ ಮಾಡಿದ್ದಾರೆ.

ಪದ್ಮವಿಭೂಷಣ ಹಿಂದಿರುಗಿಸಿದ ಬಾದಲ್‌

ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕ ಮತ್ತು ಪಂಜಾಬ್‌ ಮಾಜಿ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ತಮಗೆ ನೀಡಲಾಗಿರುವ ಪದ್ಮವಿಭೂಷಣ ಪುರಸ್ಕಾರವನ್ನು ಗುರುವಾರ ವಾಪಸ್‌ ನೀಡಿದ್ದಾರೆ.ಕೇಂದ್ರದ ಎನ್‌ಡಿಎ ಸರ್ಕಾರದ ಭಾಗವಾಗಿದ್ದ ಎಸ್‌ಎಡಿ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೆಲ ತಿಂಗಳ ಹಿಂದೆ ಮೈತ್ರಿಕೂಟದಿಂದ ಹೊರನಡೆದಿದೆ.

ಎಸ್‌ಎಡಿ ಭಿನ್ನಮತೀಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಸುಖದೇವ್‌ ಸಿಂಗ್‌ ಧಿಂಡ್ಸಾ ಅವರು ತಮಗೆ ಕಳೆದ ವರ್ಷ ನೀಡಲಾಗಿರುವ ಪದ್ಮಭೂಷಣ ಪುರಸ್ಕಾರವನ್ನು ಹಿಂದಿರುಗಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ನೀಡಿರುವ ಪ್ರಶಸ್ತಿಗಳನ್ನು ವಾಪಸ್‌ ಮಾಡುವುದಾಗಿ ಹಲವು ಕ್ರೀಡಾಪಟುಗಳು ಈಗಾಗಲೇ ಘೋಷಿಸಿದ್ದಾರೆ.

ಮಮತಾ ಆಕ್ರೋಶ

‘ರೈತ ವಿರೋಧಿ’ಯಾದ ಮೂರು ಕಾಯ್ದೆಗಳನ್ನು ರದ್ದು ಮಾಡದೇ ಇದ್ದರೆ ದೇಶವ್ಯಾಪಿ ಚಳವಳಿ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ರೈತರು, ಅವರ ಜೀವನ ಮತ್ತು ಜೀವನೋಪಾಯಗಳ ಬಗ್ಗೆ ಭಾರಿ ಕಳಕಳಿ ಇದೆ. ಭಾರತ ಸರ್ಕಾರವು ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕು’ ಎಂದು ಮಮತಾ ಟ್ವೀಟ್‌ ಮಾಡಿದ್ದಾರೆ.

ಶಾ ಭೇಟಿಯಾದ ಅಮರಿಂದರ್‌

ರೈತರ ಪ್ರತಿಭಟನೆಯಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಶೀಘ್ರ ಪರಿಹರಿಸುವಂತೆ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಕೋರಿದ್ದಾರೆ. ರೈತರು ನಡೆಸುತ್ತಿರುವ ಪ್ರತಿಭಟನೆಯು ಪಂಜಾಬ್‌ನ ಅರ್ಥ ವ್ಯವಸ್ಥೆ ಮತ್ತು ದೇಶದ ಭದ್ರತೆಯನ್ನು ಬಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾದ ಬಳಿಕ ಅಮರಿಂದರ್‌ ಅವರು ಮಾತನಾಡಿದರು. ಎರಡೂ ಕಡೆಯವರು ತಮ್ಮ ನಿಲುವಿಗೆ ಸಂಬಂಧಿಸಿ ಜಿಗುಟುತನ ಪ್ರದರ್ಶಿಸಬಾರದು. ಮಧ್ಯಮ ಹಾದಿಯೊಂದನ್ನು ಶೀಘ್ರ ಕಂಡುಕೊಳ್ಳಬೇಕು ಎಂದರು.

ರೈತ ಆಯೋಗಕ್ಕೆ ಒತ್ತಾಯ

ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಕ್ಕಾಗಿ ಆಯೋಗವೊಂದನ್ನು ರಚಿಸಬೇಕು ಎಂದು ಉತ್ತರ ಪ್ರದೇಶದ ರೈತರ ಸಂಘಟನೆ ಭಾರತೀಯ ಕಿಸಾನ್‌ ಯೂನಿಯನ್‌ (ಭಾನು ಗುಂಪು) ಒತ್ತಾಯಿಸಿದೆ. ಕೇಂದ್ರದ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್‌ ಮತ್ತು ಹರಿಯಾಣದ ರೈತರಿಗೆ ಈ ಸಂಘವು ಬೆಂಬಲ ವ್ಯಕ್ತಪಡಿಸಿದೆ. ರೈತ ಸಂಘಟನೆಗಳನ್ನು ವಿಭಜಿಸುವ ನಡೆಯ ವಿರುದ್ಧ ಎಚ್ಚರಿಕೆಯನ್ನೂ ನೀಡಿದೆ.

ಎಂಜಿನಿಯರ್‌ಗಳ ಬೆಂಬಲ

ಕೃಷಿ ಕ್ಷೇತ್ರದ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಅಖಿಲ ಭಾರತ ವಿದ್ಯುತ್‌ ಎಂಜಿನಿಯರ್‌ಗಳ ಒಕ್ಕೂಟವು (ಎಐಪಿಎಎಫ್‌) ಸರ್ಕಾರವನ್ನು ಒತ್ತಾಯಿಸಿದೆ. ವಿದ್ಯುತ್‌ (ತಿದ್ದುಪಡಿ) ಮಸೂದೆ 2020 ಅನ್ನು ಕೂಡ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT