ಮಂಗಳವಾರ, ಮೇ 17, 2022
29 °C

ರೈತರ ಹೋರಾಟದ ಹಿಂದೆ 'ಅಂತರರಾಷ್ಟ್ರೀಯ ಪಿತೂರಿ' ಆರೋಪಕ್ಕೆ‌ ಟಿಕಾಯತ್‌ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಹೋರಾಟದ ಹಿಂದೆ ಅಂತರರಾಷ್ಟ್ರೀಯ ಪಿತೂರಿ ಇದೆ ಎಂಬ ಆರೋಪವನ್ನು ರೈತ ನಾಯಕ ರಾಕೇಶ್‌ ಟಿಕಾಯತ್‌ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್‌, 'ಯಾವ ಅಂತರರಾಷ್ಟ್ರೀಯ ಪಿತೂರಿ? ಯಾವ ಮಾನಹಾನಿ? ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಕೇಳುತ್ತಿದ್ದಾರೆ. ಇದು ಭಾರತಕ್ಕೆ ಕೆಟ್ಟ ಹೆಸರು ತಂದಂತೆ ಆಗುತ್ತದೆಯೇ? ಬೆಂಬಲ ಬೆಲೆ ಕಾಯ್ದೆ ಇದ್ದರೆ ಮಾತ್ರ ರೈತರ ಬೆಳೆಗೆ ಸರಿಯಾದ ಬೆಲೆ ಸಿಗುತ್ತದೆ. ಬೆಂಬಲ ಬೆಲೆ ಪ್ರಕ್ರಿಯೆ ಇಲ್ಲದಿರುವುದೇ ಒಂದು ದೊಡ್ಡ ಪಿತೂರಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎನ್‌ಡಿಟಿವಿಗೆ ಶನಿವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟಿಕಾಯತ್‌, 'ಕಾನೂನುಗಳನ್ನು ಹಿಂಪಡೆಯುವಲ್ಲಿ ಏನು ಸಮಸ್ಯೆ ಇದೆ? ರೈತರ ಒಪ್ಪಿಗೆ ಇಲ್ಲದೇ ಕಾಯ್ದೆಗಳನ್ನು ತಂದಿದ್ದಾರೆ. ಅಂತಹ ಕಾಯ್ದೆಗಳು ಇರಬೇಕೆಂದು ರೈತರು ಬಯಸುವುದಿಲ್ಲ' ಎಂದು ತಿಳಿಸಿದ್ದಾರೆ.

'ನಾವು ಕೇವಲ ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ಬೇರೆ ಏನಾದರೂ ಮಾಡುತ್ತಿದ್ದೇವೆಯೇ? ನಮಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ರೈತರು ಯಾರಿಗೆ ಮತ ಹಾಕಬೇಕೆಂದು ನಾವು ಎಂದಿಗೂ ಹೇಳುವುದಿಲ್ಲ' ಎಂದು ಟಿಕಾಯತ್‌ ತಿಳಿಸಿದ್ದಾರೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿರುವ ರೈತರು ಇಂದು ದೇಶವ್ಯಾಪಿ 'ಚಕ್ಕಾ ಜಾಮ್‌' ಪ್ರತಿಭಟನೆಗೆ ಕರೆ ನೀಡಿದ್ದಾರೆ.

'ದೆಹಲಿ ಹೊರತುಪಡಿಸಿ ದೇಶವ್ಯಾಪಿ ಚಕ್ಕಾ ಜಾಮ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು' ಎಂದು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದಾರೆ. ಈ ನಡುವೆ ಜನವರಿ 26 ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಗಾಜಿಪುರ, ಟಿಕ್ರಿ ಹಾಗೂ ಸಿಂಘು ಪ್ರತಿಭಟನಾ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತರ ಸಂಚಾರವನ್ನು ತಡೆಯಲು ರಸ್ತೆಗಳಲ್ಲಿ ಮೊಳೆ, ಕಾಂಕ್ರೀಟ್ ಬ್ಯಾರಿಕೇಡ್ ಹಾಗೂ ತಂತಿಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ...

ಚಕ್ಕಾ ಜಾಮ್‌ Live Updates: ಹಲವೆಡೆ ರಸ್ತೆತಡೆ, ಪ್ರತಿಭಟನಕಾರರ ಬಂಧನ

ದೇಶದ ಹಿತಕ್ಕಾಗಿ ಅನ್ನದಾತರ ಶಾಂತಿಯುತ ಹೋರಾಟ: ರಾಹುಲ್ ಗಾಂಧಿ ​

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು