ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ ತಾಲೀಮು, ಬಿಗಿ ಭದ್ರತೆ

ಚಳಿ, ಮಳೆ ಲೆಕ್ಕಿಸದ ರೈತರು: ಬೇಡಿಕೆಗೆ ಒಪ್ಪದಿದ್ದರೆ ಪ್ರತಿಭನೆ ಇನ್ನಷ್ಟು ತೀವ್ರ– ಸರ್ಕಾರಕ್ಕೆ ಎಚ್ಚರಿಕೆ
Last Updated 7 ಜನವರಿ 2021, 20:34 IST
ಅಕ್ಷರ ಗಾತ್ರ

ನವದೆಹಲಿ: ಘೋಷಣೆ ಮತ್ತು ಹತ್ತಾರು ಟ್ರ್ಯಾಕ್ಟರ್‌ಗಳ ಎಂಜಿನ್‌, ಹಾರನ್‌ ಸದ್ದು ದೆಹಲಿಯ ಹೊರವಲಯದ ರಸ್ತೆಗಳಲ್ಲಿ ಗುರುವಾರ ಮೊಳಗಿತು. ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂಬ ಹೋರಾಟಕ್ಕೆ ಬಲ ತುಂಬಲು ರೈತರು ಟ್ರ್ಯಾಕ್ಟರ್‌ ರ್‍ಯಾಲಿ ನಡೆಸಿದರು.

ವಿವಿಧ ಸಂಘಟನೆಗಳಿಗೆ ಸೇರಿದ ಪಂಜಾಬ್‌, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು 43 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ. ಜನವರಿ 26ರ ಒಳಗೆ ತಮ್ಮ ಬೇಡಿಕೆ ಈಡೇರದೇ ಇದ್ದರೆ ಗಣರಾಜ್ಯೋತ್ಸವ ದಿನದಂದು ದೆಹಲಿಯ ಒಳಗೆ ನುಗ್ಗಲು ರೈತರು ನಿರ್ಧರಿಸಿದ್ದಾರೆ. ಅದಕ್ಕೆ ತಾಲೀಮಿನ ರೀತಿಯಲ್ಲಿ ಗುರುವಾರದ ಟ್ರ್ಯಾಕ್ಟರ್‌ ರ್‍ಯಾಲಿ ನಡೆಯಿತು.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರ ಜತೆಗೆ ರೈತರ ಮಾತುಕತೆ ಶುಕ್ರವಾರಕ್ಕೆ ನಿಗದಿಯಾಗಿದೆ. ಅದರ ಮುನ್ನಾದಿನವೇ ರೈತರು ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳು ರದ್ದಾಗುವವರೆಗೆ ರೈತರು ಹೋರಾಡುತ್ತಾರೆ. ಅದರ ಬಳಿಕವೇ ಅವರು ಮನೆಗಳಿಗೆ ಮರಳಲಿದ್ದಾರೆ’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಏಕತಾ ಮುಖಂಡ ಜೋಗಿಂದರ್‌ ಉಗ್ರಹಾನ್‌ ಹೇಳಿದ್ದಾರೆ.

ನಾಲ್ಕು ಬೇರೆ ಬೇರೆ ಸ್ಥಳಗಳಿಂದ ಟ್ರ್ಯಾಕ್ಟರ್‌ ಜಾಥಾ ಆರಂಭವಾಯಿತು. ಸಿಂಘು ಗಡಿಯಿಂದ ಟಿಕ್ರಿ ಗಡಿ, ಟಿಕ್ರಿ ಗಡಿಯಿಂದ ಕುಂಡಲಿ, ಗಾಜಿಪುರ ಗಡಿಯಿಂದ ಪಲ್ವಾಲ್‌ ಮತ್ತು ರೇವಸನ್‌ನಿಂದ ಪಲ್ವಾಲ್‌ಗೆ ಜಾಥಾ ನಡೆಯಿತು. ಕುಂಡಲಿ–ಮನೇಸರ್‌–ಪಲ್ವಾಲ್‌ ಎಕ್ಸ್‌ಪ್ರೆಸ್‌ ವೇ ಸ್ಥಗಿತವಾಗಿತ್ತು.

‘ಕೋವಿಡ್‌ನಿಂದ ರೈತರಿಗೆ ರಕ್ಷಣೆ ಇದೆಯೇ’

ಕೋವಿಡ್‌–19 ಸಾಂಕ್ರಾಮಿಕದ ಈ ಸಂದರ್ಭದಲ್ಲಿ ರೈತರು ದೊಡ್ಡ ಸಂಖ್ಯೆಯಲ್ಲಿ ದೆಹಲಿ ಗಡಿಯಲ್ಲಿ ಜಮಾವಣೆ ಆಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಈ ಜನರಿಗೆ ಕೊರೊನಾ ವೈರಾಣುವಿನಿಂದ ಯಾವ ರೀತಿಯ ರಕ್ಷಣೆ ಇದೆ ಎಂದು ಕೇಂದ್ರವನ್ನು ಪ್ರಶ್ನಿಸಿದೆ. ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಆನಂದ್‌ ವಿಹಾರ್‌ ಬಸ್‌ ನಿಲ್ದಾಣ ಮತ್ತು ತಬ್ಲೀಗ್‌ ಜಮಾತ್‌ ಸಮಾವೇಶಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್ ನಡೆಸಿತು.

‘ರೈತರ ಪ್ರತಿಭಟನೆಯಿಂದಾಗಿಯೂ ಇದೇ ರೀತಿಯ ಸಮಸ್ಯೆ ಕಾಣಿಸಿಕೊಳ್ಳಲಿದೆ. ರೈತರಿಗೆ ಕೋವಿಡ್‌ನಿಂದ ರಕ್ಷಣೆ ಇದೆಯೇ ಎಂಬುದು ನನಗೆ ಗೊತ್ತಿಲ್ಲ. ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಎಲ್ಲವೂ ಮುಗಿದು ಹೋಗಿದೆ ಎಂದಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ಹೇಳಿದರು. ‘ರೈತರಿಗೆ ಕೋವಿಡ್‌ನಿಂದ ಯಾವುದೇ ರಕ್ಷಣೆ ಇಲ್ಲ. ಇದಕ್ಕೆ ಸಂಬಂಧಿಸಿ, ಏನು ವ್ಯವಸ್ಥೆ ಇದೆ ಮತ್ತು ಏನು ಮಾಡಬೇಕಾಗಿದೆ ಎಂಬ ಬಗ್ಗೆ ಎರಡು ವಾರಗಳಲ್ಲಿ ವರದಿ ನೀಡುತ್ತೇನೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT