ಮಂಗಳವಾರ, ಜನವರಿ 26, 2021
25 °C
ಪ್ರತಿಕೂಲ ಹವಾಮಾನದ ಕಾರಣ l ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ

ರೈತರ ಟ್ರ್ಯಾಕ್ಟರ್ ರ‍್ಯಾಲಿ ನಾಳೆಗೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರತಿಕೂಲ ಹವಾಮಾನದ ಕಾರಣ, ರೈತರು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿ ಜ.6ರಿಂದ ಜ.7ಕ್ಕೆ ಮುಂದೂಡಿಕೆಯಾಗಿದೆ.

‘ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಿಂದ ಕುಂಡಲಿ–ಮನೇಸರ್–ಪಲ್ವಾಲ್ ಹೆದ್ದಾರಿವರೆಗೆ ಗುರುವಾರ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ’ ಎಂದು ರೈತ ಮುಖಂಡರು ಮಾಹಿತಿ ನೀಡಿದರು.

ಮಂಗಳವಾರ ಹವಾಮಾನ ಸರಿಯಿಲ್ಲ ಎಂಬುದಾಗಿ ಮುನ್ಸೂಚನೆ ಸಿಕ್ಕಿದ್ದರಿಂದ ರ‍್ಯಾಲಿಯನ್ನು ಒಂದು ದಿನ ಮುಂದೂಡಲಾಗಿದೆ ಎಂದು ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಮಳೆಯಾಗುತ್ತಿದೆ.

ಹೋರಾಟ ಬಿಡೆವು: ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ರೈತರು ಪುನರುಚ್ಚರಿಸಿದ್ದಾರೆ.

ಜನವರಿ 26ರಂದು ಹಮ್ಮಿಕೊಂಡಿರುವ ಮತ್ತೊಂದು ಟ್ರ್ಯಾಕ್ಟರ್ ರ‍್ಯಾಲಿ ಬಗ್ಗೆಯೂ ರೈತರ ನಾಯಕರು ಮಾಹಿತಿ ಹಂಚಿಕೊಂಡಿದ್ದಾರೆ. ‘ಹರಿಯಾಣದ ಪ್ರತಿ ಮನೆಯಿಂದ ಒಬ್ಬರು, ಪ್ರತಿ ಹಳ್ಳಿಯಿಂದ 10 ಟ್ರ್ಯಾಕ್ಟರ್ ಹಾಗೂ ಪ್ರತಿ ಊರಿನಿಂದ 11 ಮಹಿಳೆಯರು ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ’ ಎಂದು ಮುಖಂಡ ಜೋಗಿಂದರ್ ನೇನ್ ಹೇಳಿದ್ದಾರೆ.

ಟೆಂಟ್ ಆಸ್ಪತ್ರೆ: ರೈತರ ಅನುಕೂಲಕ್ಕೆ ಸಿಂಘು ಗಡಿಯಲ್ಲಿ ಎರಡು ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಲೈಫ್ ಕೇರ್ ಫೌಂಡೇಷನ್ ಎನ್‌ಜಿಒ ಸದಸ್ಯರು ಮುಂದಾಗಿದ್ದಾರೆ. ಮಳೆಯ ಕಾರಣ ತಮ್ಮ ಯತ್ನಕ್ಕೆ ಅಲ್ಪ ಹಿನ್ನಡೆಯಾಗಿದೆ ಎಂದು ಸ್ವಯಂಸೇವಕ ಸಾದಿಕ್ ಮೊಹಮ್ಮದ್ ತಿಳಿಸಿದ್ದಾರೆ. ಮಳೆ ಬಂದಿದ್ದರಿಂದ ಔಷಧಗಳು ಹಾಗೂ ಟೆಂಟ್ ಹಾಳಾಗಿವೆ ಎಂದು ತಿಳಿಸಿದ್ದಾರೆ.

ಗೋಪುರ ಹಾನಿ–ನೋಟಿಸ್

ಚಂಡೀಗಡ ವರದಿ: ರಿಲಯನ್ಸ್ ಮೊಬೈಲ್ ಗೋಪುರಗಳಿಗೆ ಹಾನಿ ಮಾಡಿದ ಪ್ರಕರಣದಲ್ಲಿ ಕೇಂದ್ರ ಹಾಗೂ ಪಂಜಾಬ್ ಸರ್ಕಾರಗ
ಳಿಗೆ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ‘ಸಂಸ್ಥೆಯು ಕಾರ್ಪೊರೇಟ್ ಅಥವಾ ಗುತ್ತಿಗೆ ಕೃಷಿ ಕ್ಷೇತ್ರಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ’ ಎಂದು ಅರ್ಜಿಯಲ್ಲಿ ಸ್ಪಷ್ಟಪಡಿಸಿದೆ. ಗುತ್ತಿಗೆ ಕೃಷಿಯಲ್ಲಿ ರಿಲಯನ್ಸ್ ತೊಡಗಲಿದೆ ಎಂಬ ವದಂತಿಯನ್ನು ಕಿಡಿಗೇಡಿಗಳು ಹಬ್ಬಿಸಿದ್ದಾರೆ’ ಎಂದು ಸಂಸ್ಥೆ ದೂರಿದೆ.

* ಕೇಂದ್ರದ ದುರಹಂಕಾರ 60 ರೈತರ ಬಲಿ ಪಡೆದಿದೆ. ಕಣ್ಣೀರನ್ನು ಒರೆಸುವ ಬದಲು ಅಶ್ರುವಾಯು ದಾಳಿ ನಡೆಸುತ್ತಿದೆ.

-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

* ಬಿಜೆಪಿಯ ಸಮಸ್ಯೆ ಎಂದರೆ ಅದು ತನ್ನನ್ನು ‘ಜನ ಪ್ರತಿನಿಧಿ’ ಬದಲಾಗಿ ‘ಧನ ಪ್ರತಿನಿಧಿ’ ಎಂದು ಪರಿಗಣಿಸುತ್ತದೆ. ಸೋಲನ್ನು ಸ್ವೀಕರಿಸುವುದಿಲ್ಲ. ಶ್ರೀಮಂತರಿಗಾಗಿ ರೈತರ ಹಿತಾಸಕ್ತಿ ಪಣಕ್ಕಿಡುತ್ತಿದೆ.

- ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು