ಮಂಗಳವಾರ, ನವೆಂಬರ್ 30, 2021
21 °C

PV Web Exclusive: ಐವಿಎಫ್‌ ಯಥಾಸ್ಥಿತಿ, ಕ್ಲಿನಿಕ್‌ಗಳತ್ತ ದಂಪತಿಗಳ ದಾಪುಗಾಲು

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಜೀವನದ ಶಿಸ್ತಿಗೆ, ರೀತಿಗೆ, ವ್ಯವಸ್ಥೆಗೆ ವಿವಿಧ ರೀತಿಯಲ್ಲಿ ಅಡೆತಡೆಗಳನ್ನು ತಂದೊಡ್ಡುತ್ತಲೇ ಬಂದಿರುವ ಕೊರೊನಾ ಸೊಂಕಿಗೆ ಐವಿಎಫ್‌ ಸಹ ನೆಲಕಚ್ಚಿತ್ತು. ಲಕ್ಷಾಂತರ ದಂಪತಿಗಳ ಭಾವನಾತ್ಮಕ ಸಂಗತಿಯೂ ಆಗಿರುವ ಕೋಟ್ಯಂತರ ರೂಪಾಯಿ ವಹಿವಾಟಿನ ಐವಿಎಫ್‌ ಕ್ಷೇತ್ರ ಇದೀಗ ಸುಸ್ಥಿತಿಗೆ ಮರಳಿದ್ದು ಐವಿಎಫ್‌ ಚಿಕಿತ್ಸೆಯನ್ನು ಮುಂದೂಡಿದ್ದ, ಅರ್ಧಕ್ಕೆ ನಿಲ್ಲಿಸಿದ್ದ ದಂಪತಿಗಳು ಆಸ್ಪತ್ರೆಗಳತ್ತ ಮುಖಮಾಡಿದ್ದಾರೆ.

ಪಿತೃತ್ವ–ಮಾತೃತ್ವ ಪ್ರತಿಯೊಬ್ಬರ ಬಾಳಿನಲ್ಲಿ ಒಂದು ಮಹತ್ವದ ಘಟ್ಟ. ತಂದೆಯಾಗಬೇಕು–ತಾಯಿಯಾಗಬೇಕು ಎನ್ನುವ ಹಂಬಲ ಪ್ರಕೃತಿಸಹಜವಾದುದು. ಮದುವೆಯಾದ ಕೆಲ ವರ್ಷಗಳ ನಂತರವೂ ಮಡಿಲು ತುಂಬದೇ ಹೋದಾಗ ಮಾನಸಿಕ ತೊಳಲಾಟ ಆರಂಭವಾಗುತ್ತದೆ. ಸಹಜ ಗರ್ಭಧಾರಣೆಯ ಎಲ್ಲಾ ಬಾಗಿಲುಗಳು ಮುಚ್ಚಿಕೊಂಡಾಗ, ತಮ್ಮದೇ ಕರುಳ ಕುಡಿಗೆ ಹಂಬಲಿಸುವ ಜೋಡಿಗಳಿಗೆ ಐಯುಐ (ಕೃತಕ ವೀರ್ಯಾಣು ಧಾರಣೆ) ಅಥವಾ ಐವಿಎಫ್ (ವಿಟ್ರೊಫಲೀಕರಣ) ಚಿಕಿತ್ಸೆಗಳೇ ಆಶಾಕಿರಣ. ಆದರೆ ಕಳೆದ ಆರು ತಿಂಗಳಿಂದ ಕೋವಿಡ್‌–19ನ ಭೀತಿ ಮಕ್ಕಳನ್ನು ಪಡೆಯಬೇಕೆನ್ನುವ ಇಂತಹ ಸಹಸ್ರಾರು ದಂಪತಿಗಳ ಆಸೆಗೆ ತಡೆಯೊಡ್ಡಿತು.

ಬಹುತೇಕ ಮಾರ್ಚ್‌ ಕೊನೆಯ ವಾರದಲ್ಲಿ ಕೊರೋನಾ ಭೀತಿಯಿಂದ ಐವಿಎಫ್‌ ಕೇಂದ್ರಗಳು ಬಾಗಿಲು ಮುಚ್ಚುತ್ತ ಬಂದವು. ಇದರಿಂದ ಅನೇಕ ದಂಪತಿಗಳು ತಮ್ಮ ಚಿಕಿತ್ಸೆಯನ್ನು ಮುಂದೂಡಬೇಕಾಯಿತು. ಅದಾಗಲೇ ಚಿಕಿತ್ಸೆ ಪಡೆಯುತ್ತಿರುವವರು ಸಹ ತಮ್ಮ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗದೇ ಅರ್ಧಕ್ಕೇ ನಿಲ್ಲಿಸಬೇಕಾಗಿಯಿತು.

ಕೋವಿಡ್ -19 ಬಿಕ್ಕಟ್ಟು, ಲಾಕ್‌ಡೌನ್ ಇದ್ದಕ್ಕಿದ್ದಂತೆ ಈ ಚಿಕಿತ್ಸೆಯ ಯೋಜನೆಗಳನ್ನು ಬುಡಮೇಲು ಮಾಡಿತು. ಇದರಿಂದಾಗಿ ಕ್ಷೇತ್ರ ದಿಢೀರ್‌ ಕುಸಿತ ಕಾಣಲು ಕಾರಣವಾಯಿತು. ಐವಿಎಫ್‌ ಚಿಕಿತ್ಸೆಯನ್ನು ಅನಿವಾರ್ಯವಲ್ಲದ ಸೇವೆಗೆ ಸೇರಿಸಿರುವುದರಿಂದ ಕೆಲದಿನ ಈ ಸೇವೆಯನ್ನು ಸ್ಥಗಿತಗೊಳಿಸಬೇಕಾಯಿತು. ಅನಂತರ ಲಾಕ್‌ಡೌನ್ ತೆರವಾದರೂ, ಪ್ರಯಾಣದ ನಿರ್ಬಂಧಗಳಿದ್ದವು, ಸಾರ್ವಜನಿಕ ಸಾರಿಗೆಯ ಅನುಪಸ್ಥಿತಿ, ಕೆಲವು ಸ್ಥಳಗಳಲ್ಲಿ ವಿಸ್ತರಿಸಿದ ಲಾಕ್‌ಡೌನ್ ಮತ್ತೊಂದು ರೀತಿಯ ಅಡೆತಡೆಗೆ ಕಾರಣವಾದವು.

ಜೂನ್‌ ಅಂತ್ಯದ ವೇಳೆಗೆ ಭಾರತದ ಸುಮಾರು 2000 ಐವಿಎಫ್ ಕೇಂದ್ರಗಳಲ್ಲಿ, 800ರಷ್ಟು ಕೇಂದ್ರಗಳು ಕಾರ್ಯಾರಂಭ ಮಾಡಿದವು. ಸೇವೆಯನ್ನು ಪುನರಾರಂಭ ಮಾಡುವ ಮುನ್ನ ಕ್ಲಿನಿಕ್‌ಗಳು, ಆಸ್ಪತ್ರೆಗಳು ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಬಗ್ಗೆ ಸ್ಪಷ್ಟ ಮಾರ್ಗಸೂಚಿಗಳು ಲಭ್ಯವಾದ ಮೇಲೆ ಈ ವಲಯಕ್ಕೆ ಮತ್ತಷ್ಟು ವೇಗ ದೊರೆತಂತಾಗಿದೆ. ಐಎಸ್ಎಆರ್ (ಇಂಡಿಯನ್ ಸೊಸೈಟಿ ಫಾರ್ ಅಸಿಸ್ಟೆಡ್ ರಿಪ್ರೊಡಕ್ಷನ್), ಐಎಫ್‌ಎಸ್ (ಇಂಡಿಯನ್ ಫರ್ಟಿಲಿಟಿ ಸೊಸೈಟಿ) ಮತ್ತು ಎಸಿಇ (ಅಕಾಡೆಮಿ ಆಫ್ ಕ್ಲಿನಿಕಲ್ ಎಂಬ್ರಿಯಲಾಜಿಸ್ಟ್‌) ಕೋವಿಡ್‌–19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಅವಧಿಯಲ್ಲಿ ಅನುಸರಿಸಬೇಕಿರುವ ಮಾನದಂಡಗಳ ಕುರಿತು ವಿಸ್ತೃತವಾದ ರಾಷ್ಟ್ರೀಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿವೆ. ಇದರಿಂದಾಗಿ ಚಿಕಿತ್ಸೆಯನ್ನು ತಡೆಹಿಡಿದಿದ್ದ ಅಥವಾ ಮುಂದೂಡಿದ್ದ ಲಕ್ಷಾಂತರ ದಂಪತಿಗಳು ಐವಿಎಫ್‌ ಕೇಂದ್ರಗಳತ್ತ ಮುಖಮಾಡಿದ್ದಾರೆ. ಆದರೂ ಇನ್ನೂ ಕೆಲವರು ಚಿಕಿತ್ಸೆಗೆ ಮುಂದಾಗಲು ಹಲವು ಬಾರಿ ಯೋಚಿಸುತ್ತಿದ್ದಾರೆ. ಭಯ ಬಿಟ್ಟು ಚಿಕಿತ್ಸೆಗೆ ಮುಂದಾಗಿ ಎಂದು ಪ್ರಸೂತಿ ತಜ್ಞರು ಮನವಿ ಮಾಡುತ್ತಿದ್ದಾರೆ.

‘ನಿಜ, ಕೋವಿಡ್‌–19 ಪರಿಣಾಮದಿಂದಾಗಿ ಬಹುತೇಕ ಐವಿಎಫ್‌ ಕೇಂದ್ರಗಳು ಮತ್ತು ಆಸ್ಪತ್ರೆಗಳು ಬಾಗಿಲು ಮುಚ್ಚಿದ್ದರ ಪರಿಣಾಮ ಸಾಕಷ್ಟು ದಂಪತಿಗಳು ಮಕ್ಕಳನ್ನು ಪಡೆಯುವ ಕನಸನ್ನು ಮುಂದೂಡಿದ್ದರು. ಇದರ ಪರಿಣಾಮ ಮಾರ್ಚ್‌ ಆರಂಭದಲ್ಲಿ ಈ ವಲಯ ಶೇ 90ರಷ್ಟು ಕುಸಿತ ಕಂಡಿತ್ತು. ಆದರೆ ಇದೀಗ ರಾಷ್ಟ್ರೀಯ ಮಾರ್ಗಸೂಚಿಗಳು ಬಿಡುಗಡೆಯಾಗಿದ್ದು,  ಐವಿಎಫ್‌ ಮರುಜೀವ ಪಡೆದಿದೆ. ಕೆಲವು ದಂಪತಿಗಳು ಇನ್ನಷ್ಟು ದಿನ ಕಾಯ್ದು ನೋಡುವ ಪ್ರಯತ್ನದಲ್ಲಿದ್ದಾರೆ. ವಯೋಮಾನ, ವೈದ್ಯಕೀಯ ಅಡೆತಡೆಗಳು ಮತ್ತಿತರ ಕಾರಣಗಳಿರುವ ದಂಪತಿ ಚಿಕಿತ್ಸೆಯನ್ನು ಬೇಗನೆ ಪ್ರಾರಂಭಿಸುವುದು ಒಳಿತು. ನೋಂದಾಯಿತ ಹಾಗೂ ರಾಷ್ಟ್ರೀಯ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಚಿಕಿತ್ಸಾಲಯಗಳಲ್ಲಿ ನಿಮ್ಮ ಚಿಕಿತ್ಸೆಯನ್ನು ಮುಂದುವರಿಸಿ, ಯಾವುದೇ ಅಪಾಯವಿಲ್ಲ’ ಎನ್ನುತ್ತಾರೆ ಪ್ರಸೂತಿ ತಜ್ಞೆ, ಎಆರ್‌ಟಿ ಮಾರ್ಗಸೂಚಿಗಳ ಸಮಿತಿಯ ಚೇರ್ಮನ್‌ ಆಗಿರುವ ಡಾ. ಕಾಮಿನಿ ರಾವ್‌.

ಭಾರತದಲ್ಲಿ ಪ್ರತಿವರ್ಷ 3 ದಶಲಕ್ಷ ದಂಪತಿಗಳು ಸಂತಾನಹೀನತೆಗೆ ಚಿಕಿತ್ಸೆ ಪಡೆಯುವ ಬಗ್ಗೆ ಗಮನ ಹರಿಸುತ್ತಾರೆ. ಅವರಲ್ಲಿ ಐದು ಲಕ್ಷ ಜನರು ಐವಿಎಫ್/ಐಯುಐ ಚಿಕಿತ್ಸೆಯನ್ನು ಪಡೆಯುತ್ತಾರೆ. ಆದರೆ ಕೋವಿಡ್‌–19 ಸಾಂಕ್ರಾಮಿಕ ಸಮಯದಲ್ಲಿ, ಇವರಿಗೂ ಸಹ ಅಡೆತಡೆಗಳು ಎದುರಾಗಿತ್ತು. ಆದರೆ ಇದೀಗ ಕ್ಷೇತ್ರ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ. ದಂಪತಿಗಳು ಇನ್ನು ಮುಂದೆ ತಮ್ಮ ಯೋಜನೆಗಳನ್ನು ವಿಳಂಬ ಮಾಡಬೇಕಾಗಿಲ್ಲ. ಸೂಕ್ತ ಮುನ್ನೆಚ್ಚರಿಕೆ, ಸರಿಯಾದ ಮಾರ್ಗಗಳನ್ನು ಅನುಸರಿಸಿದಲ್ಲಿ ತಂದೆ–ತಾಯಿಯಾಗುವ ನಿಮ್ಮ ಕನಸಿಗೆ ಕೋವಿಡ್‌–19 ತಡೆಯೊಡ್ಡಲಾರದು.

***

ಸೇವೆ ಪುನರಾರಂಭಿಸುವ ಐವಿಎಫ್‌/ಐಯುಐ ಕೇಂದ್ರಗಳಿಗೆ ಐಎಸ್ಎಆರ್ (ಇಂಡಿಯನ್ ಸೊಸೈಟಿ ಫಾರ್ ಅಸಿಸ್ಟೆಡ್ ರಿಪ್ರೊಡಕ್ಷನ್), ಐಎಫ್‌ಎಸ್ (ಇಂಡಿಯನ್ ಫರ್ಟಿಲಿಟಿ ಸೊಸೈಟಿ) ಮತ್ತು ಎಸಿಇ (ಅಕಾಡೆಮಿ ಆಫ್ ಕ್ಲಿನಿಕಲ್ ಎಂಬ್ರಿಯಲಾಜಿಸ್ಟ್‌) ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಅಡಕವಾಗಿರುವ ಕೆಲವು ಮುಖ್ಯ ಅಂಶಗಳು ಹೀಗಿವೆ:

* ಹೆಚ್ಚಿನ ಅಪಾಯದಲ್ಲಿರುವವರು, ಅಂದರೆ ಅಧಿಕ ರಕ್ತದೊತ್ತಡ, ಮಧುಮೇಹ, ಅಂಗಾಂಗ ಕಸಿ ಮಾಡಲಾದ ರೋಗಿಗಳು, ಮೂತ್ರಪಿಂಡ, ಯಕೃತ್ತು, ಶ್ವಾಸಕೋಶದ ಕಾಯಿಲೆ ಇರುವವರು ಅಥವಾ ಇತರೆ ವೈದ್ಯಕೀಯ ಪರಿಸ್ಥಿತಿಗಳೊಂದಿಗೆ ಬದುಕುತ್ತಿರುವವರು ಈ ಅವಧಿಯಲ್ಲಿ ಚಿಕಿತ್ಸೆಯನ್ನು ಮುಂದೂಡಬೇಕು.

* ಕ್ಯಾನ್ಸರ್‌ನಿಂದ ಬದುಕುಳಿದವರ ಫಲವತ್ತತೆ ಸಂರಕ್ಷಣೆಯ ಚಿಕಿತ್ಸೆಯನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಪ್ರಾರಂಭಿಸಬೇಕು

* ಈ ಅವಧಿಯಲ್ಲಿ ಕೈಗೊಂಡ ಭ್ರೂಣಗಳ ಪ್ರತ್ಯೇಕ ಕ್ರಯೋ-ಶೇಖರಣೆಗೆ ವಿಶೇಷ ಸೌಲಭ್ಯಗಳು ಅಗತ್ಯ

* ಕ್ಲಿನಿಕ್‌ಗಳಲ್ಲಿ ಸಾಕಷ್ಟು ಸಂಖ್ಯೆಯ ನುರಿತ ಕ್ಲಿನಿಕಲ್ ಸಿಬ್ಬಂದಿ, ಭ್ರೂಣಶಾಸ್ತ್ರಜ್ಞರು ಮತ್ತು ದಾದಿಯರು ಇರಬೇಕು

* ಯಾವುದೇ ಸಿಬ್ಬಂದಿಗೆ ಕೋವಿಡ್‌–19 ಲಕ್ಷಣಗಳು ಕಂಡುಬಂದಲ್ಲಿ ಅವರ ಸ್ಥಾನವನ್ನು ತುಂಬಲು ಹೆಚ್ಚುವರಿ ಸಿಬ್ಬಂದಿಯ ವ್ಯವಸ್ಥೆ ಇರಬೇಕು

* ರೋಗಿಗಳು ಮತ್ತು ಸಿಬ್ಬಂದಿಗೆ ದೈಹಿಕ ಅಂತರದ ಅಗತ್ಯವನ್ನು ವಿವರಿಸುವ ಲಿಖಿತ ನೀತಿ ಸಂಹಿತೆ

* ಚಿಕಿತ್ಸೆಯನ್ನು ಮುಂದುವರಿಸುವ ಅಥವಾ ಮುಂದೂಡುವ ನಿರ್ಧಾರವನ್ನು ದಂಪತಿಗಳಿಗೇ ಬಿಡಬೇಕು ಮತ್ತು ಈ ಬಗ್ಗೆ ಒಪ್ಪಂದದಲ್ಲಿ ಸ್ಪಷ್ಟಪಡಿಸಬೇಕು

* ಕೋವಿಡ್‌–19 ದೃಢಪಟ್ಟ ಅಥವಾ ತಪಾಸಣೆ ಚಾಲ್ತಿಯಲ್ಲಿರುವವರ ಮೇಲೆ ಸೂಕ್ತ ನಿಗಾ ವಹಿಸುವ ವ್ಯವಸ್ಥೆ ಅಗತ್ಯ

* ಸೋಂಕಿನ ನಿಯಂತ್ರಣ ಅಭ್ಯಾಸಗಳು, ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಬಳಕೆ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಮಾಹಿತಿ ಮತ್ತು ತರಬೇತಿ ನೀಡಬೇಕು

* ಆರೈಕೆಯ ಎಲ್ಲಾ ಹಂತಗಳಲ್ಲಿ ಸಾಕಷ್ಟು ಮತ್ತು ಸೂಕ್ತವಾದ ಪಿಪಿಇ ಸರಬರಾಜುಗಳನ್ನು ಖಚಿತಪಡಿಸಬೇಕು

* ನವಜಾತ ಶಿಶುಗಳನ್ನು ಕೋವಿಡ್‌-19 ಅಪಾಯದಿಂದ ರಕ್ಷಿಸುವ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು

****

ಹೆಲ್ತ್‌ಸ್ಕೇಪ್‌ ವರದಿಯ ಪ್ರಕಾರ ಭಾರತದಲ್ಲಿ ಸುಮಾರು 30 ದಶಲಕ್ಷ ದಂಪತಿಗಳು ಸಂತಾನಹೀತೆಯಿಂದ ಹತಾಶರಾಗಿದ್ದಾರೆ. ಅವರಲ್ಲಿ ಚಿಕಿತ್ಸೆಗೆ ಮುಂದಾಗುವವರ ಸಂಖ್ಯೆ ಕೇವಲ 3 ದಶಲಕ್ಷ. ಅವರಲ್ಲಿ ನಗರವಾಸಿಗಳೇ ಅಧಿಕ. ಅಂದರೆ ಸಂತಾನಹೀನತೆ ಹೊಂದಿರುವ ಆರು ಜನರಲ್ಲಿ ಒಬ್ಬರು ಮಾತ್ರ ಚಿಕಿತ್ಸೆಯ ಅಗತ್ಯವನ್ನು ಮನಗಾಣುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು